ಇಂದು ಮಹತ್ವಾಕಾಂಕ್ಷಿ ಶಕ್ತಿ ಯೋಜನೆಗೆ ಚಾಲನೆ

ಮೊದಲ ಗ್ಯಾರಂಟಿ ಜಾರಿಯ ಸಂಭ್ರಮದಲ್ಲಿ ಕಾಂಗ್ರೆಸ್‌ ಸರಕಾರ

ಬೆಂಗಳೂರು: ಕಾಂಗ್ರೆಸ್‌ನ ಮಹತ್ವದ ಗ್ಯಾರಂಟಿಗಳಲ್ಲಿ ಒಂದಾಗಿರುವ ಸರಕಾರಿ ಬಸ್‌ಗಳಲ್ಲಿ ಮಜಿಳೆಯರಿಗೆ ಉಚಿತ ಪ್ರಯಾಣದ ಭಾಗ್ಯ ಕಲ್ಪಿಸುವ ಶಕ್ತಿ ಯೋಜನೆಗೆ ಇಂದು ರಾಜ್ಯಾದ್ಯಾಂತ ಏಕಕಾಕಲದಲ್ಲಿ ಸಂಭ್ರಮದ ಚಾಲನೆ ನೀಡಲು ಸರಕಾರ ಸಿದ್ಧತೆ ನಡೆಸಿದೆ. ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ಮುಖ್ಯ ಕಾರ್ಯಕ್ರಮ ನಡೆಯಲಿದೆ. ಉಳಿದಂತೆ ಜಿಲ್ಲಾ ಕೇಂದ್ರಗಳಲ್ಲಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.
ಬೆಳಗ್ಗೆ 11 ಗಂಟೆಗೆ ವಿಧಾನಸೌಧದ ಮುಂಭಾಗದಲ್ಲಿ ಚಾಲನೆ ನೀಡಲಾಗುತ್ತದೆ. ವಿಧಾನಸೌಧದಲ್ಲಿ ಶಕ್ತಿ ಯೋಜನೆಗೆ ಚಾಲನೆ ದೊರೆಯುತ್ತಿದ್ದಂತೆ ರಾಜ್ಯದ ಎಲ್ಲಾ ಜಿಲ್ಲಾ, ತಾಲೂಕು ಕೇಂದ್ರಗಳಲ್ಲಿ ಆಯಾ ಜಿಲ್ಲೆಯ ಸಚಿವರು, ಶಾಸಕರು ಯೋಜನೆಗೆ ಚಾಲನೆ ನೀಡಲಿದ್ದಾರೆ.

ಉಡುಪಿಯಲ್ಲಿ ಲಕ್ಷ್ಮೀ ನಿಂಬಾಳ್ಕರ್‌

ಉಡುಪಿಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವೆ ಲಲಕ್ಷ್ಮೀ ನಿಂಬಾಳ್ಕರ್‌ ಶಕ್ತಿ ಯೋಜನೆಗೆ ಚಾಲನೆ ನೀಡಲಿದ್ದಾರೆ. ಉಡುಪಿ ಜಿಲ್ಲಾ ಉಸ್ತುವಾರಿಯಾಗಿ ಆಯ್ಕೆಯಾದ ಬಳಿಕ ಇದೇ ಮೊದಲ ಬಾರಿಗೆ ಲಕ್ಷ್ಮೀ ನಿಂಬಾಳ್ಕರ್‌ ಕರಾವಳಿಗೆ ಆಗಮಿಸುತ್ತಿದ್ದಾರೆ.

ವಿಧಾನಸೌಧದ ಮುಂಭಾಗ 4 ನಿಗಮದ ಸಾಮಾನ್ಯ ಬಸ್ ನಿಲ್ಲಿಸಲು ಫ್ಲಾನ್ ಮಾಡಲಾಗಿದೆ. ನಾಡಗೀತೆ ಹಾಡುವ ಮೂಲಕ ಚಾಲನೆಗೊಳ್ಳುವ ಈ ಕಾರ್ಯಕ್ರಮದಲ್ಲಿ ಸಿದ್ದರಾಮಯ್ಯ ಅವರು ಶಕ್ತಿ ಯೋಜನೆ ಲಾಂಛನ ಅನಾವರಣಗೊಳಿಸಲಿದ್ದಾರೆ. ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಜತೆಗಿರುವರು. ನಂತರ ಸಿದ್ದರಾಮಯ್ಯ ಅವರು ಬಸ್​ನಲ್ಲೇ ಸಿಟಿ ರೌಂಡ್ಸ್ ಹಾಕಲಿದ್ದಾರೆ. ವಿಧಾನಸೌಧ ಒಂದು ರೌಂಡ್, ಮೆಜೆಸ್ಟಿಕ್ ಅಥವಾ ಮೈಸೂರು ಬ್ಯಾಂಕ್ ಸರ್ಕಲ್ ವರೆಗೆ ಬಿಎಂಟಿಸಿಯಲ್ಲಿ ಒಂದು ರೌಂಡ್ ಹೋಗಲಿದ್ದಾರೆ.
ಈ ಕಾರ್ಯಕ್ರಮಕ್ಕೆ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವ ರಾಜೀವ್ ಚಂದ್ರಶೇಖರ್ ಅವರಿಗೂ ಆಹ್ವಾನ ನೀಡಲಾಗಿದೆ. ಆದರೆ ಕಾರ್ಯಕ್ರಮಕ್ಕೆ ಆಗಮಿಸುವುದು ಬಹುತೇಕ ಅನುಮಾನ.
ಮಧ್ಯಾಹ್ನ 1 ಗಂಟೆಯ ನಂತ್ರ ಬಿಎಂಟಿಸಿ, ಕೆಎಸ್ಆರ್‌ಟಿಸಿ, ಎನ್‌ಡಬ್ಲ್ಯೂಆರ್ಟಿಸಿ, ಕೆಕೆಆರ್‌ಟಿಸಿ ಬಸ್​ಗಳಲ್ಲಿ‌ ಮಹಿಳೆಯರಿಗೆ ಉಚಿತ ಪ್ರಯಾಣಕ್ಕೆ ಅವಕಾಶ ನೀಡಲಾಗುತ್ತದೆ. ತಮಿಳುನಾಡು, ದಿಲ್ಲಿ ಸೇರಿ ವಿವಿಧ ರಾಜ್ಯಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣ ಅವಕಾಶ ನೀಡುವ ಯೋಜನೆ ಜಾರಿಯಲ್ಲಿದ್ದು, ಅದೇ ಮಾದರಿಯಲ್ಲಿ ಕರ್ನಾಟಕದಲ್ಲೂ ಜಾರಿಗೆ ಬರುತ್ತಿದೆ.
ಐಷಾರಾಮಿ ಬಸ್‌ಗಳಾದ ರಾಜಹಂಸ, ನಾನ್ ಎಸಿ ಸ್ಲೀಪರ್‌, ಎಸಿ ಸ್ಲೀಪರ್, ಐರಾವತ, ಐರಾವತ ಕ್ಲಬ್ ಕ್ಲಾಸ್, ಅಂಬಾರಿ, ಅಂಬಾರಿ ಡೀಮ್ ಕ್ಲಾಸ್, ಅಂಬಾರಿ ಉತ್ಸವ್, ಫೈ ಬಸ್, ಇವಿ ಪ್ಲಸ್ ಸಾರಿಗೆಗಳಲ್ಲಿ ಉಚಿತ ಪ್ರಯಾಣ ಅನ್ವಯಿಸುವುದಿಲ್ಲ.
ಮಹಿಳಾ ಪ್ರಯಾಣಿಕರಿಗೆ ಪ್ರಯಾಣದ ದೂರದ ಯಾವುದೇ ಮಿತಿ ಇರುವುದಿಲ್ಲ. ಆಯ್ದ ಅಂತಾರಾಜ್ಯ ಸಾರಿಗೆಗಳಲ್ಲಷ್ಟೇ ಮಹಿಳೆಯರು ಉಚಿತವಾಗಿ ಪ್ರಯಾಣಿಸಲು ಅವಕಾಶ.
ಶಕ್ತಿ ಯೋಜನೆಯು ದೈನಿಕ ಪಾಸ್, ಮಾಸಿಕ ಪಾಸ್, ಸಾಂದರ್ಭಿಕ ಒಪ್ಪಂದ ಹಾಗೂ ಕಾಯಂ ಗುತ್ತಿಗೆ ಪ್ಯಾಕೇಜ್ ಸೇವೆಗಳಿಗೆ ಅನ್ವಯಿಸುವುದಿಲ್ಲ. ರಾಜ್ಯದೊಳಗೆ ವೇಗದೂತ ಸಾರಿಗೆಗಳಲ್ಲಿ ಮುಂಗಡ ಆಸನ ಕಾಯ್ದಿರಿಸಲು ನಿಗಮದ ಬುಕಿಂಗ್ ಕೌಂಟರ್‌ಗಳಲ್ಲಿ ವ್ಯವಸ್ಥೆ ಇರಲಿದೆ. ಶೇ.50ರ ಆಸನಗಳನ್ನು ಮೀರದಂತೆ ನಿಗದಿತ ಕನಿಷ್ಠ ಸೇವಾ ಶುಲ್ಕ ಪಡೆದು ಬುಕಿಂಗ್ ಮಾಡಿಕೊಳ್ಳಲಾಗುತ್ತದೆ.
ಮುಂಗಡ ಆಸನ ಕಾಯ್ದಿರಿಸಲು ಬುಕಿಂಗ್ ಕೌಂಟರ್‌ಗೆ ಆಗಮಿಸಿದಾಗ ಗುರುತಿನ ಚೀಟಿ ತೋರಿಸಿದರೆ ಸಾಕು. ಸ್ಮಾರ್ಟ್ ಕಾರ್ಡ್ ವಿತರಿಸಿದ ನಂತರ ಅದನ್ನು ತೋರಿಸಬೇಕು.
ಪ್ರಯಾಣ ಸಮಯದಲ್ಲಿ ಗುರುತಿನ ಚೀಟಿ (ವಿತರಣೆ ಬಳಿಕ ಸ್ಮಾರ್ಟ್ ಕಾರ್ಡ್) ಮತ್ತು ಕಾಯ್ದಿರಿಸಿದ ಟಿಕೆಟ್ ತೋರಿಸಬೇಕಾಗುತ್ತದೆ.







































































error: Content is protected !!
Scroll to Top