ಒಡಿಶಾ ರೈಲು ಅಪಘಾತದಲ್ಲಿ ಟಿಎಂಸಿ ಕೈವಾಡ : ಬಿಜೆಪಿ ಆರೋಪ

ಬಿಜೆಪಿ ನಾಯಕ ಸುವೇಂದು ಅಧಿಕಾರಿ ಹೇಳಿಕೆಯಿಂದ ಸಂಚಲನ

ಹೊಸದಿಲ್ಲಿ : ಒಡಿಶಾದಲ್ಲಿ ಸಂಭಿವಿಸಿದ ಭೀಕರ ರೈಲು ಅವಘಡ ವಿಪರೀತ ರಾಜಕೀಯ ಕೆಸರೆರಚಾಟಕ್ಕೆ ಕಾರಣವಾಗಿದೆ. ಕಾಂಗ್ರೆಸ್‌, ಟಿಎಂಸಿ ಸೇರಿ ವಿಪಕ್ಷಗಳು ಘಟನೆಯ ಸಿಬಿಐ ತನಿಖೆಗೆ ಆಕ್ಷೇಪ ಎತ್ತಿರುವುದಕ್ಕೆ ಗುಮಾನಿ ವ್ಯಕ್ತಪಡಿಸಿರುವ ಬಿಜೆಪಿ ಅವಘಡದ ಹಿಂದೆ ಮಮತಾ ಬ್ಯಾನರ್ಜಿಯ ತೃಣಮೂಲ ಕಾಂಗ್ರೆಸ್‌ ಪಾರ್ಟಿಯ ಕೈವಾಡ ಇದೆ ಎಂಬ ಗಂಭೀರ ಆರೋಪ ಮಾಡಿದೆ.
ಪಶ್ಚಿಮ ಬಂಗಾಳ ವಿಧಾನಸಭೆಯ ವಿಪಕ್ಷ ನಾಯಕ ಸುವೇಂದು ಅಧಿಕಾರಿ ಈ ಗಂಭೀರ ಆರೋಪ ಮಾಡಿದ್ದು, ಟಿಎಂಸಿ ಪೊಲೀಸರ ಜತೆ ಕೈಜೋಡಿಸಿ ಫೋನ್‌ ಟ್ಯಾಪ್‌ ಮಾಡಿ ದುರಂತ ಸಂಭವಿಸುವಂತೆ ಮಾಡಿದೆ ಎಂದು ನೇರವಾಗಿ ಹೇಳಿದ್ದಾರೆ.
ಇಡೀ ಘಟನೆಯಲ್ಲಿ ಟಿಎಂಸಿಯ ಸಂಚು ಇದೆ. ಪಕ್ಕದ ರಾಜ್ಯದಲ್ಲಿ ಸಂಭವಿಸಿದ ದುರಂತ ಟಿಎಂಸಿ ನಾಯಕರ ಈ ಮಟ್ಟದ ಕಳವಳಕ್ಕೆ ಕಾರನವಾಗಿರುವುದು ಏಕೆ? ಸಿಬಿಐ ತನಿಖೆಗೆ ಆದೇಶಿಸಿದ ಬಳಿಕ ಅವರು ಗಾಬರಿಯಾಗಿರುವುದು ಏಕೆ? ಇದರಲ್ಲೇನೋ ಮಸಲತ್ತು ಕಾಣಿಸುತ್ತಿಲ್ಲವೆ ಎಂದು ಸುವೇಂದು ಅಧಿಕಾರಿ ಪ್ರಶ್ನಿಸಿದ್ದಾರೆ.
ಇಬ್ಬರು ರೈಲ್ವೇ ಅಧಿಕಾರಿಗಳ ನಡುವೆ ನಡೆದ ಮಾತುಕತೆ ಟಿಎಂಸಿ ನಾಯಕರಿಗೆ ತಿಳಿದದ್ದು ಹೇಗೆ? ಈ ಮಾತುಕತೆ ಸೋರಿಕೆಯಾಗಿದ್ದು ಹೇಗೆ? ಸಿಬಿಐ ತನಿಖೆಯಿಂದ ಸತ್ಯ ಹೊರಬರಬೇಕು. ಇಲ್ಲದಿದ್ದರೆ ನಾನು ಕೋರ್ಟಿಗೆ ಹೋಗಿ ಪ್ರಶ್ನಿಸುತ್ತೇನೆ ಎಂದು ಸುವೇಂದು ಅಧಿಕಾರಿ ಹೇಳಿದ್ದಾರೆ.
ಕಾಂಗ್ರೆಸ್‌ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರೂ ಸಿಬಿಐ ತನಿಖೆ ಆಕ್ಷೇಪಿಸಿ ಪ್ರಧಾನಿ ನರೇಂದ್ರ ಮೋದಿಯವರಿಗೆ ಪತ್ರ ಬರೆದಿದ್ದಾರೆ. ರೈಲ್ವೇ ಮಂಡಳಿ ಘಟನೆಯ ಹಿಂದೆ ಸಂಚು ಶಂಕಿಸಿದ ಹಿನ್ನೆಲೆಯಲ್ಲಿ ರೈಲ್ವೇ ಸಚಿವ ಅಶ್ವಿನಿ ವೈಷ್ಣವ್‌ ಸಿಬಿಐ ತನಿಖೆಗೊಪ್ಪಿಸಲು ಶಿಫಾರಸ್ಸು ಮಾಡಿದ್ದಾರೆ.
ಇಲೆಕ್ಟ್ರಾನಿಕ್‌ ಇಂಟರ್‌ಲಾಕಿಂಗ್‌ ಸಿಸ್ಟಂ ವೈಫಲ್ಯದಿಂದ ಅವಘಡ ಸಂಭವಿಸಿದೆ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ. ಈ ವ್ಯವಸ್ಥೆಯನ್ನೇ ಟ್ಯಾಂಪರ್‌ ಮಾಡಿರುವ ಸಾಧ್ಯತೆಯಿದೆ ಎಂದು ರೈಲ್ವೇ ಅಧಿಕಾರಿಗಳು ಅನುಮಾನಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಸಿಬಿಐ ತನಿಖೆ ನಡೆಯುತ್ತಿದೆ. ಆದರೆ ಕಾಂಗ್ರೆಸ್‌ ಸಹಿತ ಹಲವು ವಿಪಕ್ಷಗಳು ಸಿಬಿಐ ತನಿಖೆಯನ್ನು ಲೇವಡಿ ಮಾಡಿವೆ.
10 ಅಧಿಕಾರಿಗಳ ಸಿಬಿಐ ತಂಡ ಸೋಮವಾರ ಅಪಘಾತ ನಡೆದ ಬಾಲಾಸೋರ್‌ಗೆ ಭೇಟಿ ನೀಡಿ ತನಿಖೆ ಪ್ರಾರಂಭಿಸಿದೆ.

































































































error: Content is protected !!
Scroll to Top