ಸುನಿಲ್‌ ಕುಮಾರ್‌ ಮೇಲೆ ನಂಬಿಕೆ ಇರಿಸಿ ಗೆಲ್ಲಿಸಿದ ಮತದಾರರು

ನಿರಂತರ ಮುನ್ನಡೆ ಕಾಯ್ದುಕೊಂಡ ಸುನಿಲ್‌

ಕಾರ್ಕಳ : ಕಾರ್ಕಳ ವಿಧಾನ ಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಸುನಿಲ್‌ ಕುಮಾರ್‌ ಗೆದ್ದು ನಾಲ್ಕನೇ ಬಾರಿಗೆ ಶಾಸಕರಾಗಿ ಆಯ್ಕೆಯಾಗಿದ್ದಾರೆ. ಬಿಜೆಪಿ ಅಭ್ಯರ್ಥಿ ಸುನಿಲ್‌ ಕುಮಾರ್‌ ಹಾಗೂ ಕಾಂಗ್ರೆಸ್‌ ಅಭ್ಯರ್ಥಿ ಮುನಿಯಾಲು ಉದಯ ಶೆಟ್ಟಿ ಅವರ ಮಧ್ಯೆ ತೀವ್ರ ಪೈಪೋಟಿಯಿದ್ದು, ಅಂತಿಮವಾಗಿ ಸುನಿಲ್‌ ಕುಮಾರ್‌ ಜಯ ಸಾಧಿಸಿದ್ದಾರೆ.

ಬಾಲ್ಯ-ಶಿಕ್ಷಣ
ಶಿಕ್ಷಕ ಎಂ.ಕೆ. ವಾಸುದೇವ ಹಾಗೂ ಕೆ.ಪಿ. ಪ್ರಮೋದ ದಂಪತಿ ಪುತ್ರರಾಗಿರುವ ಸುನಿಲ್‌ ಕುಮಾರ್‌ ತಮ್ಮ ಪ್ರಾಥಮಿಕ ಶಿಕ್ಷಣವನ್ನು ಕಾರ್ಕಳ ಪುಲ್ಕೇರಿ ರಾಮಪ್ಪ ಪ್ರಾಥಮಿಕ ಶಾಲೆಯಲ್ಲಿ, 7ನೇ ತರಗತಿವರೆಗೆ ಬಸವನಹಳ್ಳಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ, ಪಿಯುಸಿ ಶಿಕ್ಷಣವನ್ನು ಶಿವಮೊಗ್ಗದ ಹಿಟ್ಟಾಳದಲ್ಲಿ ಪೂರೈಸಿರುತ್ತಾರೆ. ಪದವಿ ವಿದ್ಯಾಭ್ಯಾಸವನ್ನು ಚಿಕ್ಕಮಗಳೂರಿನಲ್ಲಿ ಪಡೆದ ಸುನಿಲ್‌ ಕುಮಾರ್‌ ಆ ಬಳಿಕ ಚಿಕ್ಕಮಗಳೂರಿನಲ್ಲಿ ಪತ್ರಕರ್ತರಾಗಿ ವೃತ್ತಿ ಜೀವನ ಆರಂಭಿಸಿದ್ದರು.

ರಾಜಕೀಯ ಪ್ರವೇಶ
ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್‌ ಮೂಲಕ ಗುರುತಿಸಿಕೊಂಡಿದ್ದ ಸುನಿಲ್‌ ಕುಮಾರ್‌ ಅವರು 2004ರಲ್ಲಿ ರಾಜಕೀಯ ಪ್ರವೇಶ ಮಾಡಿದರು. 2004ರ ವಿಧಾನ ಪರಿಷತ್‌ ಚುನಾವಣೆಯಲ್ಲಿ ಕಾರ್ಕಳದಿಂದ ಸ್ಪರ್ಧಿಸಿದ ಸುನಿಲ್‌ ಕುಮಾರ್‌ ಕಾಂಗ್ರೆಸ್‌ನ ಹಿರಿಯ ಮುಖಂಡ ಎಚ್.‌ ಗೋಪಾಲ ಭಂಡಾರಿಯವರನ್ನು ಸುಮಾರು 10 ಸಾವಿರಕ್ಕಿಂತಲೂ ಅಧಿಕ ಮತಗಳಿಂದ ಸೋಲಿಸಿದ್ದರು. 2008ರ ಚುನಾವಣೆಯಲ್ಲಿ ಗೋಪಾಲ ಭಂಡಾರಿಯವರ ಎದುರು 1537 ಮತಗಳಿಂದ ಪರಾಭವಗೊಂಡ ಸುನಿಲ್‌ ಕುಮಾರ್‌ 2012ರ ಉಡುಪಿ-ಚಿಕ್ಕಮಗಳೂರು ಉಪಚುನಾವಣೆಯಲ್ಲಿ ಅಂದು ಕಾಂಗ್ರೆಸ್‌ ಅಭ್ಯರ್ಥಿಯಾಗಿದ್ದ ಕೆ. ಜಯಪ್ರಕಾಶ್‌ ಹೆಗ್ಡೆ ಎದುರು ಸೋಲನುಭವಿಸಿದರು.
2013ರ ವಿಧಾನಸಭಾ ಚುನಾವಣೆಯಲ್ಲಿ ಗೋಪಾಲ ಭಂಡಾರಿಯವರನ್ನು 4 ಸಾವಿರ ಮತಗಳ ಅಂತರದಿಂದ ಸೋಲಿಸಿದ ಸುನಿಲ್‌ ಕುಮಾರ್‌ ಮುಖ್ಯ ಸಚೇತಕರಾದರು. 2018ರ ಚುನಾವಣೆಯಲ್ಲಿ 42,566 ಮತಗಳ ಅಂತರದಿಂದ ಮತ್ತೆ ಗೋಪಾಲ ಭಂಡಾರಿಯವರ ಎದುರು ಗೆದ್ದ ಸುನಿಲ್‌ ಕುಮಾರ್‌ ಸರಕಾರದ ಮುಖ್ಯ ಸಚೇತಕರಾಗಿ ಇದೀಗ ಸಚಿವರಾಗಿದ್ದಾರೆ.

ಸಚಿವರಾಗಿ ಆಯ್ಕೆ
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಂಪುಟದಲ್ಲಿ ಇಂಧನ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರಾಗಿ ಕಾರ್ಯನಿರ್ವಹಿಸುತ್ತಿರುವ ಸುನಿಲ್‌ ಕುಮಾರ್‌ ಇದೀಗ ನಾಲ್ಕನೇ ಬಾರಿಗೆ ಕಾರ್ಕಳದಿಂದ ಶಾಸಕರಾಗಿ ಆಯ್ಕೆಯಾಗಿರುತ್ತಾರೆ.











































































error: Content is protected !!
Scroll to Top