ಕಾರ್ಕಳ : ಕಾರ್ಕಳ ಕ್ಷೇತ್ರದಾದ್ಯಂತ ಮತದಾನ ಪ್ರಕ್ರಿಯೆ ಶುರುವಾದ ಬೆನ್ನಿಗೆ ಉತ್ತಮ ಮತದಾನವಾಗುತ್ತಿದೆ. ಜನರು ಬೆಳಗ್ಗಿನಿಂದಲೇ ಮತಗಟ್ಟೆಗೆ ಧಾವಿಸುತ್ತಿದ್ದಾರೆ. ಕೆಲಸ ಕಾರ್ಯಗಳಿಗೆ ಹೋಗುವವರು ಬೇಗನೇ ಮತಗಟ್ಟೆಗೆ ತೆರಳಿ ಮತ ಹಾಕುತ್ತಿದ್ದಾರೆ. ಮತದಾನ ಪ್ರಕ್ರಿಯೆ ಬೆಳಗ್ಗೆ 7ಕ್ಕೆ ಶುರುವಾಗಿದ್ದು, ಬಹುತೇಕ ಮತಗಟ್ಟೆಗಳಲ್ಲಿ ಬಿರುಸಿನ ಮತದಾನ ನಡೆಯುತ್ತಿದೆ. ಅಭ್ಯರ್ಥಿಗಳಾದ ಸುನಿಲ್ ಕುಮಾರ್, ಮುನಿಯಾಲು ಉದಯಕುಮಾರ್ ಶೆಟ್ಟಿ, ಪ್ರಮೋದ್ ಮುತಾಲಿಕ್ ಕಾರ್ಯಕರ್ತರು ಮತ್ತು ಕುಟುಂಬ ಸಮೇತ ತೆರಳಿ ಮತದಾನ ಮಾಡಿದ್ದಾರೆ.
ಸುನಿಲ್ ಕುಮಾರ್ ನಿಟ್ಟೆ ಗ್ರಾಮದ ಅತ್ತೂರು ಕಲಂಬಾಡಿಪದವು ಪ್ರಾಥಮಿಕ ಶಾಲೆಯಲ್ಲಿ, ಉದಯಕುಮಾರ್ ಶೆಟ್ಟಿ ಮುನಿಯಾಲು ಪ್ರಾಥಮಿಕ ಶಾಲೆಯಲ್ಲಿ ಮತ್ತು ಮುತಾಲಿಕ್ ಕುಕ್ಕುಂದೂರು ಮತಗಟ್ಟೆಯಲ್ಲಿ ಮತಚಲಾಯಿಸಿದರು. ಬೆಳಗ್ಗಿನ ಮತದಾನದ ಟ್ರೆಂಡ್ ನೋಡುವಾಗ ಈ ಸಲ ಕಾರ್ಕಳ ಕ್ಷೇತ್ರದಲ್ಲಿ ದಾಖಲೆ ಪ್ರಮಾಣದ ಮತದಾನವಾಗುವ ಸಾಧ್ಯತೆಯಿದೆ ಎಂಬ ನಿರೀಕ್ಷೆಯಿದೆ. ರಾಜ್ಯಾದ್ಯಂತ ಬೆಳಗ್ಗೆ 9 ಗಂಟೆಗೆ ಶೇ.8 ಮತಚಲಾವಣೆಯಾಗಿತ್ತು. ಉದ್ಯೋಗಕ್ಕೆ ತೆರಳುವವರು ಈಗಾಗಲೇ ಮತದಾನ ನಡೆಸಿ ಕೆಲಸಕ್ಕೆ ತೆರಳಿದ್ದಾರೆ.
























