ಐವರು ಯೋಧರು ಹುತಾತ್ಮ, ಓರ್ವ ಉಗ್ರ ಬಲಿ
ಶ್ರೀನಗರ : ಜಮ್ಮು ಮತ್ತು ಕಾಶ್ಮೀರದ ರಜೌರಿಯ ಕಂಡಿ ಅರಣ್ಯ ಪ್ರದೇಶದಲ್ಲಿ ನಿನ್ನೆ ಶುಕ್ರವಾರ ಭಯೋತ್ಪಾದನಾ ವಿರೋಧಿ ಕಾರ್ಯಾಚರಣೆ ನಡೆಸುತ್ತಿದ್ದ ಐವರು ಯೋಧರು ಹುತಾತ್ಮರಾಗಿದ್ದಾರೆ. ಇದಕ್ಕೆ ಪ್ರತೀಕಾರವಾಗಿ ಈ ಪ್ರದೇಶದಲ್ಲಿ ಭದ್ರತಾ ಪಡೆ ಯೋಧರು ಕಾರ್ಯಾಚರಣೆ ತೀವ್ರಗೊಳಿಸಿದ್ದು, ಈಗಾಗಲೇ ಓರ್ವ ಉಗ್ರನನ್ನು ಬಲಿತೆಗೆದುಕೊಂಡಿದ್ದಾರೆ. ಕಾರ್ಯಾಚರಣೆ ಪ್ರಗತಿಯಲ್ಲಿದ್ದು, ಎಲ್ಲ ಉಗ್ರರು ಫಿನಿಶ್ ಆಗುವ ತನಕ ಮುಂದುವರಿಯಲಿದೆ ಎಂದು ಸೇನೆಯ ಉನ್ನತಾಧಿಕಾರಿಗಳು ತಿಳಿಸಿದ್ದಾರೆ.
ಜಮ್ಮು ಪ್ರದೇಶದ ಭಾಟಾ ಧುರಿಯನ್‌ನ ತೋಟಾ ಗಲಿ ಪ್ರದೇಶದಲ್ಲಿ ಸೇನಾ ಟ್ರಕ್‌ನ ಮೇಲೆ ದಾಳಿ ನಡೆಸಿದ ಭಯೋತ್ಪಾದಕರ ಗುಂಪನ್ನು ಸದೆಬಡಿಯಲು ಭಾರತೀಯ ಸೇನೆಯು ನಿರಂತರ ಗುಪ್ತಚರ ಆಧಾರಿತ ಕಾರ್ಯಾಚರಣೆಗಳನ್ನು ನಡೆಸುತ್ತಿದೆ. ಮೇ 3 ರಿಂದ ಕಂಡಿ ಅರಣ್ಯ ಪ್ರದೇಶದಲ್ಲಿ ಕಾರ್ಯಾಚರಣೆ ಆರಂಭಿಸಲಾಗಿತ್ತು.
ನಿನ್ನೆ ಉಗ್ರರ ಒಂದು ಗುಂಪಿನ ಜತೆ ಯೋಧರು ಎನ್ಕೌಂಟರ್ ನಡೆಸಿದ್ದಾರೆ. ಈ ಪ್ರದೇಶವು ಕಲ್ಲಿನಿಂದ, ಕಡಿದಾದ ಬಂಡೆಗಳಿಂದ ಹಾಗೂ ದಟ್ಟವಾದ ಪೊದೆಗಳಿಂದ ಕೂಡಿದ್ದು, ಗುಹೆಯೊಂದರಲ್ಲಿ ಅಡಗಿ ಕುಳಿತಿದ್ದ ಉಗ್ರರು ಯೋಧರ ಮೇಲೆ ಸ್ಫೋಟಕ ಸಾಧನಗಳನ್ನು ಬಳಸಿ ದಾಳಿ ನಡೆಸಿದ್ದಾರೆ. ಘಟನೆಯಲ್ಲಿ ಐವರು ಯೋಧರು ಮೃತಪಟ್ಟಿದ್ದು, ಓರ್ವ ಸೇನಾ ಅಧಿಕಾರಿ ಗಾಯಗೊಂಡಿದ್ದಾರೆ.
ರಜೌರಿ ಹಾಗೂ ಬಾರಾಮುಲ್ಲಾದಲ್ಲಿ ಭಾರತೀಯ ಸೇನೆ ಕಾರ್ಯಾಚರಣೆ ಆರಂಭಿಸಿದ್ದು, ಬಾರಾಮುಲ್ಲಾದ ಕರ್ಹಾಮಾ ಕುಂಜರ್ ಪ್ರದೇಶದಲ್ಲಿ ಓರ್ವ ಉಗ್ರನನ್ನು ಹೊಡೆದುರುಳಿಸಿದೆ. ಎರಡೂ ಪ್ರದೇಶಗಳಲ್ಲಿ ಕಾರ್ಯಾಚರಣೆ ಮುಂದುವರಿದಿದೆ.
ಹೊಸ ವರ್ಷದ ದಿನವೇ ರಜೌರಿ ಜಿಲ್ಲೆಯ ಹಿಂದೂ ಪ್ರಾಬಲ್ಯದ ಹಳ್ಳಿಯಾದ ಧಂಗ್ರಿಯಲ್ಲಿ ನಡೆದ ಭಯೋತ್ಪಾದಕ ದಾಳಿಯಲ್ಲಿ ನಾಲ್ವರು ನಾಗರಿಕರು ಸಾವನ್ನಪ್ಪಿದ್ದರು ಹಾಗೂ ಕೆಲವರು ಗಾಯಗೊಂಡಿದ್ದರು. ಗ್ರಾಮದ ಮೂರು ಮನೆಗಳ ಮೇಲೆ ಇಬ್ಬರು ಭಯೋತ್ಪಾದಕರು ಗುಂಡು ಹಾರಿಸಿದ್ದರು.ಜನವರಿ 2 ರಂದು ಇದೇ ಗ್ರಾಮದಲ್ಲಿ ಸುಧಾರಿತ ಸ್ಫೋಟಕ ಸಾಧನ (ಐಇಡಿ) ಸ್ಫೋಟಗೊಂಡು ನಾಲ್ಕು ವರ್ಷದ ಮಗು ಸೇರಿ ಇಬ್ಬರು ಸಾವನ್ನಪ್ಪಿದ್ದು, ನಾಲ್ವರು ಗಾಯಗೊಂಡಿದ್ದರು.
























