ಕಾರ್ಕಳ : ಧಾರ್ಮಿಕ ಕೇಂದ್ರಗಳು ಭಕ್ತರ ಆಸ್ತಿಯೇ ಹೊರತು ಪಕ್ಷದ ಆಸ್ತಿ ಅಲ್ಲ. ಆದರೆ, ಸುನಿಲ್ ಕುಮಾರ್ ದೇವಸ್ಥಾನಗಳ ಹೆಸರಿನಲ್ಲಿ ಮತಯಾಚನೆ ಮಾಡುತ್ತಿದ್ದಾರೆ ಎಂದು ಕಾರ್ಕಳ ಬ್ಲಾಕ್ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ಶುಭದ ರಾವ್ ಆರೋಪಿಸಿದ್ದಾರೆ. ಅವರು ಮೇ 5 ರಂದು ಪ್ರಕಾಶ್ ಹೊಟೇಲ್‌ನಲ್ಲಿ ಪತ್ರಿಕಾಗೋಷ್ಟಿ ನಡೆಸಿ, ಕಾರ್ಕಳ ಮಾರಿಗುಡಿಯ ಜೀರ್ಣೋದ್ಧಾರ ಮತ್ತು ಬ್ರಹ್ಮಕಲಶೋತ್ಸವವು ಭಕ್ತರು ಹಾಗೂ ದಾನಿಗಳ ಸಹಕಾರದಲ್ಲಿ ಅತ್ಯಂತ ಯಶಸ್ವಿಯಾಗಿ ನಡೆದಿದೆ. ಆದರೆ ಸುನಿಲ್ ಕುಮಾರ್ ಮತ್ತು ಅವರ ಬೆಂಬಲಿಗರು ದೇವಳದ ಜೀರ್ಣೋದ್ಧಾರಕ್ಕೆ ತಾವೇ ಕಾರಣ ಎನ್ನುತ್ತಿದ್ದಾರೆ. ಇದನ್ನು ಒಪ್ಪಲು ಸಾಧ್ಯವಿಲ್ಲ ಎಂದ ಅವರು, ಕಾರ್ಕಳ ಮಾರಿಗುಡಿ ಜೀರ್ಣೋದ್ದಾರಕ್ಕೆ ಬಿಜೆಪಿ ಸರಕಾರದಿಂದ ಬಂದಿರುವ ಅನುದಾನ ಎಷ್ಟು? ತಾವು ಮತ್ತು ಮುಜುರಾಯಿ ಸಚಿವರು ಭಾಷಣದಲ್ಲಿ ಹೇಳಿದ ಅನುದಾನ ಬಿಡುಗಡೆಯಾಗಿದೆಯೇ ? ಎಂದು ಸುನಿಲ್ ಕುಮಾರ್ ಅವರನ್ನು ಪ್ರಶ್ನಿಸಿದ್ದಾರೆ.
ರಾಜ್ಯದಲ್ಲಿ ಅವರದೇ ಸರಕಾರವಿದ್ದು ದೇವಸ್ಥಾನಕ್ಕೆ ಬೇಕಾಗಿರುವ ಕೋಟ್ಯಾಂತರ ರೂಪಾಯಿಯ ಮರಗಳನ್ನು ಅರಣ್ಯ ಇಲಾಖೆಯಿಂದ ಪಡೆಯುವ ಅವಕಾಶವಿದ್ದರೂ ಅದನ್ನು ಪಡೆಯದೆ ಸುನಿಲ್ ಕುಮಾರ್ ಮಿತ್ರನ ಮರದ ಮಿಲ್ಲಿನಿಂದಲೇ ಪಡೆಯಲು ಮತ್ತು ಅನುವಂಶಿಕ ಹಿರಿಯ ಆಡಳಿತ ಮೊಕ್ತೇಸರರನ್ನು ಪೂಜೆಗೆ ಕುಳ್ಳಿರಿಸದಿರಲು ಹಾಗೂ ಉದ್ದೇಶಿತ ಮಾರಿಯಮ್ಮ ಸಭಾಭವನದ ಜಾಗವನ್ನು ತಮ್ಮ ಮಿತ್ರನಿಗೆ ಕಾನೂನು ಬಾಹಿರವಾಗಿ 99 ವರ್ಷಕ್ಕೆ ಲೀಸ್ ನಲ್ಲಿ ನೀಡಲು ಕಾರಣವೇನು ಎಂದು ಪ್ರಶ್ನಿಸಿದರು.
ಮುಜುರಾಯಿ ಇಲಾಖೆಯ ಅನುಮತಿಯಿಲ್ಲದೆ ತೆಗೆದ ಮಾರಿಗುಡಿಯ ಜೀರ್ಣೋದ್ಧಾರ ಹುಂಡಿಯ ಹಣದ ಲೆಕ್ಕವನ್ನು ನೀಡಿಲ್ಲ ಮತ್ತು ಬ್ರಹ್ಮಕಲಶೋತ್ಸವದ ನಂತರ ನಡೆಯುವ ದೃಡ ಕಲಶ ಕಾರ್ಯಕ್ರಮಕ್ಕೆ ಹಗಲು ರಾತ್ರಿ ದುಡಿದ ಕಾರ್ಯಕರ್ತರನ್ನು ಆಹ್ವಾನಿಸಿಲ್ಲ ಎಂದ ಅವರು ಮಾರಿಗುಡಿಯ ಹೊರ ಆವರಣದಲ್ಲಿದ್ದ ಅಂಗಡಿಗಳನ್ನು ಕೆಡಹಿ ಅವರನ್ನು ಬೀದಿ ಪಾಲು ಮಾಡಿದ್ದಲ್ಲದೆ ಅವರಿಗೆ ಇನ್ನೂ ಪರ್ಯಾಯ ವ್ಯವಸ್ಥೆ ಕಲ್ಪಿಸದಿರಲು ಕಾರಣವೇನು ಎಂದು ಕೇಳಿದರು.

ಪೆರ್ವಾಜೆ ಮಹಾಲಿಂಗೇಶ್ವರ ದೇವಳದ ಜಾಗದಲ್ಲಿ ಸುನಿಲ್ ಕುಮಾರ್ ಮತ್ತು ಅವರ ಬೆಂಬಲಿಗರು ಭೂ-ವ್ಯವಹಾರ ನಡೆಸುತ್ತಿದ್ದಾರೆ. ಇನ್ನು ಪಡುತಿರುಪತಿ ಶ್ರೀ ವೆಂಕಟರಮಣ ದೇವಳದ ರಥ ಬೀದಿಯ ಒಳಚರಂಡಿ ಕಾಮಗಾರಿ ಕಳಪೆಯಾಗಿದೆ ಎಂದು ಗೊತ್ತಿದ್ದರೂ ಕೋಟ್ಯಂತರ ರೂ. ಬಿಲ್ಲು ಪಾವತಿಸಿದ್ದು ಯಾಕೆ? ಪರಶುರಾಮ ಥೀಂ-ಪಾರ್ಕ್‌ನಲ್ಲಿ ಪರಶುರಾಮ ಮೂರ್ತಿಯ ಕೆಳಗೆ ದೈವಗಳ ಚಿತ್ರಣವನ್ನು ಕೆತ್ತನೆ ಮಾಡಲಾಗಿದ್ದು, ತುಳುನಾಡಿನ ನಂಬಿಕೆಯ ದೈವ ದೇವರನ್ನು ಅವಮಾನಿಸಿರುವ ಕುರಿತು ಸತ್ಯಾಸತ್ಯತೆ ತಿಳಿದ ಬಳಿಕವೂ ಅದನ್ನು ಸರಿಪಡಿಸದೆ ಮೌನವಾಗಿರಲು ಕಾರಣವೇನು ಎಂದು ಶುಭದ ರಾವ್ ಪ್ರಶ್ನಿಸಿದ್ದು ಈ ಪ್ರಶ್ನೆಗಳಿಗೆ ಸ್ವತ: ಸಚಿವರೇ ಉತ್ತರಿಸಬೇಕೆಂದು ಹೇಳಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಕೆಪಿಸಿಸಿ ಸದಸ್ಯ ಸುರೇಂದ್ರ ಶೆಟ್ಟಿ ಮತ್ತು ಕಾರ್ಕಳ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಸದಾಶಿವ ದೇವಾಡಿಗ ಉಪಸ್ಥಿತರಿದ್ದರು.
























