ಮೈಸೂರು : ಪುತ್ತೂರಿನ ಕಾಂಗ್ರೆಸ್ ಅಭ್ಯರ್ಥಿ ಅಶೋಕ್ ರೈ ಅವರ ಸಂಬಂಧಿಕರೊಬ್ಬರ ಮನೆ ಮೇಲೆ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದು, ದಾಳಿ ವೇಳೆ ಮನೆಯ ಆವರಣದಲ್ಲಿರುವ ಅಲಂಕಾರಿಕ ಗಿಡದಲ್ಲಿ ನೇತು ಹಾಕಿದ್ದ ಬಾಕ್ಸ್ ನಲ್ಲಿ ರೂ.1 ಕೋಟಿ ಪತ್ತೆಯಾಗಿರುವುದನ್ನು ಕಂಡು ಶಾಕ್ ಆಗಿದ್ದಾರೆ. ಅಶೋಕ್ ಕುಮಾರ್ ರೈ ಅವರ ಬೆಂಗಳೂರಿನ ನಿವಾಸ ಹಾಗೂ ಅವರ ಸಹೋದರ ಸುಬ್ರಹ್ಮಣ್ಯ ರೈ ಅವರ ಮೈಸೂರಿನ ನಿವಾಸದ ಮೇಲೆ ನಿನ್ನೆ ಆದಾಯ ತೆರಿಗೆ ಅಧಿಕಾರಿಗಳು ದಾಳಿ ನಡೆಸಿದ್ದರು. ಸುಬ್ರಹ್ಮಣ್ಯ ರೈ ಅವರ ಮೈಸೂರಿನ ಮನೆಯ ಮುಂದೆ ಅಲಂಕಾರಿಕ ಗಿಡವಿದ್ದು, ಈ ಗಿಡದಲ್ಲಿ ಮಾವಿನ ಹಣ್ಣುಗಳನ್ನು ಪ್ಯಾಕ್ ಮಾಡುವ ರೀತಿಯ ಬಾಕ್ಸ್ ಗಳನ್ನು ನೇತು ಹಾಕಲಾಗಿದೆ. ಆರಂಭದಲ್ಲಿ ಅಧಿಕಾರಿಗಳು ಇದನ್ನು ನಿರ್ಲಕ್ಷಿಸಿದ್ದರು. ಆದರೆ, ನಂತರ ಅನುಮಾನದ ಮೇಲೆ ಬಾಕ್ಸ್ ಗಳನ್ನು ಪರಿಶೀಲನೆ ನಡೆಸಿದ್ದು, ಈ ವೇಳೆ ಬಾಕ್ಸ್ ನಲ್ಲಿ ರೂ.1 ಕೋಟಿ ನಗದು ಹಣವನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಈ ಮಧ್ಯೆ ಬಾಕ್ಸ್ ನಲ್ಲಿ ದುಡ್ಡು ಸಿಕ್ಕಿರುವ ಫೋಟೋ ಹಾಗೂ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಪುತ್ತೂರು ಕಾಂಗ್ರೆಸ್ ಅಭ್ಯರ್ಥಿ ಅಶೋಕ್ ರೈ ಅವರ ಸಂಬಂಧಿ ಮನೆ ಮೇಲೆ ಐಟಿ ದಾಳಿ : ಗಿಡದಲ್ಲಿ 1 ಕೋಟಿ ರೂ. ಪತ್ತೆ!



































