ಕಾಂಗ್ರೆಸ್ ಬೆಂಬಲಿಸಿದರೆ ಮತೀಯವಾದಿಗಳ ವಿಜೃಂಭಣೆ – ಸುನಿಲ್ ಕುಮಾರ್
ಕಾರ್ಕಳ : ಕಾಂಗ್ರೆಸ್ಸಿಗೆ ಮತ ನೀಡಿದರೆ ಹಿಂದೂ ವಿರೋಧಿ ಶಕ್ತಿಗಳು ವಿಜ್ರಂಬಿಸುತ್ತವೆ, ಹಿಂದೂಗಳ ರಕ್ಷಣೆ ಬಿಜೆಪಿಯಿಂದ ಮಾತ್ರ ಸಾಧ್ಯ. ಕಾಂಗ್ರೆಸ್ಸಿನ ಆಸೆ, ಆಮಿಷ, ಜಾತಿ ರಾಜಕಾರಣಕ್ಕೆ ಮತ ಹಾಕದೆ ಅಭಿವೃದ್ಧಿಯನ್ನು ಬೆಂಬಲಿಸಿ ಎಂದು ಕಾರ್ಕಳ ವಿಧಾನ ಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ವಿ. ಸುನಿಲ್ ಕುಮಾರ್ ಕರೆ ನೀಡಿದರು.
ಭಾನುವಾರದಂದು ಕಡ್ತಲ ಗ್ರಾಮದಲ್ಲಿ ಬಿಜೆಪಿ ಕಾರ್ಯಕರ್ತರ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು ಕಾಂಗ್ರೆಸ್ ಮತೀಯವಾದಿಗಳ ಪರವಿದೆ, ಕಾಂಗ್ರೆಸ್ಸಿಗೆ ಹಾಕುವ ಒಂದೊಂದು ಮತವೂ ಅದು ಪಿ.ಎಫ್.ಐ ಸಂಘಟನೆ ಬಲಪಡಿಸಿದಂತೆ. ಕಾಂಗ್ರೆಸ್ಸಿಗೆ ಮತ ನೀಡಿದರೆ ಹಿಂದೂ ವಿರೋಧಿಗಳು ಸಮಾಜದಲ್ಲಿ ವಿಜೃಂಭಿಸಿ ಕೇಕೆ ಹಾಕುತ್ತವೆ, ಮತ್ತೊಂದು ಅಫಘಾನಿಸ್ತಾನ ಆಗಲು ಬಿಡಬಾರದು ಎಂದರು.

ಹಿಂದೂ ರಕ್ಷಣೆಗೆ ಕಟಿಬದ್ಧ
ಬಿಜೆಪಿ ಸರಕಾರ ಗೋಹತ್ಯೆ, ಲವ್ ಜಿಹಾದ್, ಮತಾಂತರ ನಿಷೇಧ ಕಾನೂನುಗಳನ್ನು ಜಾರಿ ಮಾಡಿ ಹಿಂದೂಗಳ ರಕ್ಷಣೆಗೆ ಕಟಿಬದ್ಧವಾಗಿದೆ. ಕಾಂಗ್ರೆಸ್ ನೇತೃತ್ವದ ಸರಕಾರ ಅಧಿಕಾರಕ್ಕೆ ಬಂದರೆ ಗೋ ಹತ್ಯೆ ನಿಷೇಧ, ಮತಾಂತರ ಕಾನೂನು ವಾಪಸ್ ಪಡೆಯುವ ಭರವಸೆಯನ್ನು ಈಗಾಗಲೇ ಆ ಪಕ್ಷದ ಮುಖಂಡರು ಹೇಳಿಕೊಂಡು ತಿರುಗಾಡುತ್ತಿದ್ದಾರೆ. ಇಂತಹವರಿಗೆ ಅಧಿಕಾರ ಸಿಕ್ಕರೆ ರಾಜ್ಯದ ಜನತೆಯ ಅದರಲ್ಲೂ ಹಿಂದೂಗಳ ಪರಿಸ್ಥಿತಿ ಯಾವ ರೀತಿ ಇರಬಹುದು ಎಂದು ನೀವೊಮ್ಮೆ ಊಹಿಸಿ, ರಾಜ್ಯದಲ್ಲಿ ಯಾವುದೇ ಕಾರಣಕ್ಕೂ ಕಾಂಗ್ರೆಸ್ ಅಧಿಕಾರಕ್ಕೆ ಬರಬಾರದು, ಅದನ್ನು ತಡೆಯಲು ರಾಜ್ಯ ಮತ್ತು ಕಾರ್ಕಳ ವಿಧಾನ ಸಭಾ ಕ್ಷೇತ್ರ ಈ ಎರಡೂ ಕಡೆ ಬಿಜೆಪಿ ಶಾಸಕ ಇರಬೇಕು. ಕ್ಷೇತ್ರದ ಮತದಾರರು ಈ ಎಲ್ಲ ಅಂಶವನ್ನು ಮನದಲ್ಲಿ ಇಟ್ಟುಕೊಂಡು ಬಿಜೆಪಿಯನ್ನು ಗೆಲ್ಲಿಸಿಕೊಡಬೇಕು ಎಂದು ಮನವಿ ಮಾಡಿಕೊಂಡರು.
ಈ ಸಂದರ್ಭ ಪಕ್ಷದ ಪ್ರಮುಖರಾದ ದಿನೇಶ್ ಪೈ, ಸಂಜೀವ ಪೂಜಾರಿ, ದಯಾನಂದ ಹೆಗ್ಡೆ ಮೊದಲಾದವರು ಉಪಸ್ಥಿತರಿದ್ದರು.


























