ಡಾ. ಸುಮತಿ ರಘುರಾಮ್ ಪ್ರಭು ಅಂಡಾರು ಅವರ ಇಬ್ಬನಿ ಚುಟುಕು ಸಂಕಲನ ಲೋಕಾರ್ಪಣೆ

ಕಾರ್ಕಳ : ಜಾಗೃತಿ ಸಾಹಿತ್ಯಾಸಕ್ತ ಸಂಘಟನೆಯ ಆಶ್ರಯದಲ್ಲಿ ಡಾ. ಸುಮತಿ ರಘುರಾಮ್ ಪ್ರಭು ಅವರ ಇಬ್ಬನಿ ಎಂಬ ಚುಟುಕು ಸಂಕಲನದ ಲೋಕಾರ್ಪಣಾ ಕಾರ್ಯಕ್ರಮ ಭಾನುವಾರದಂದು ಹೋಟೆಲ್‌ ಪ್ರಕಾಶ್‌ನ ಸಂಭ್ರಮ ಸಭಾಂಗಣದಲ್ಲಿ ಜರುಗಿತು.
ಪ್ರಾಸ್ತಾವಿಕವಾಗಿ ಮಾತನಾಡಿದ ಎಆ. ಸುಮತಿ ರಘುರಾಮ್‌ ಪ್ರಭು ನನ್ನ ಗುರುಗಳ ಸಮಕ್ಷಮದಲ್ಲಿ ನನ್ನ ಬರಹ ಲೋಕಾರ್ಪಣೆಗೊಳ್ಳುತ್ತಿರುವುದು ಸಂತಸ ತಂದಿದೆ. ತನ್ಮೂಲಕ ದೇವಾನುಗ್ರಹ ಸಿಕ್ಕಿಂದಂತಾಗಿದೆ ಎಂದ ಅವರು, ಈ ಮನ ಸಂತೃಪ್ತಿಗಿಂತ ಹೆಚ್ಚಿನ ಭಾಗ್ಯ ಇನ್ನೊಂದಿಲ್ಲ ಎಂದು ಹರ್ಷ ವ್ಯಕ್ತಪಡಿಸಿದರು. ಇಬ್ಬನಿ – ಚುಟುಕು ಸಂಕಲನವನ್ನು ಲೋಕಾರ್ಪಣೆಗೊಳಿಸಿ ಮಾತನಾಡಿದ ಎಣ್ಣೆಹೊಳೆ ಹಿರ್ಗಾನ ಶ್ರೀ ಆದಿಶಕ್ತಿ ಮಹಾಲಕ್ಷ್ಮೀ ದೇವಸ್ಥಾನದ ಆಡಳಿತ ಮೊಕ್ತೇಸರ ಅಶೋಕ್ ನಾಯಕ್, ಸುಮತಿಯವರ ಸಾಹಿತ್ಯಾ ಸಾಧನೆಯ ಹಿಂದೆ ಅವರ ಪತಿ ರಘುರಾಮ್‌ ಅವರ ಪ್ರೋತ್ಸಾಹವು ಶ್ಲಾಘನೀಯ. ಈ ದಂಪತಿಯ ಸಾಹಿತ್ಯ ಕ್ಷೇತ್ರದಲ್ಲಿನ ಒಲವು ಇತರರಿಗೂ ಪ್ರೇರಣೆಯಾಗಲಿ ಎಂದು ಶುಭ ಹಾರೈಸಿದರು.

ಇಬ್ಬನಿಯನ್ನು ಅವಲೋಕನ ಮಾಡಿ ಮಾತನಾಡಿದ ಸುಮತಿಯವರ ಗುರು ಶ್ಯಾಮಲಾ ಗೋಪೀನಾಥ್, ಸಾಮಾಜಿಕ ಕಳಕಳಿ, ಪ್ರಕೃತಿ ಪ್ರೀತಿ, ಮಾನವೀಯತೆ, ದೇಶಭಕ್ತಿ, ಗುರುಭಕ್ತಿ ಹೀಗೆ ಕವಯಿತ್ರಿಯ ಅನುಭವಕ್ಕೆ ಬಂದ ವೈವಿಧ್ಯಮಯ ವಿಚಾರಗಳ ಮೇಲೆ ಬೆಳಕು ಚೆಲ್ಲುವ ಅರ್ಥಪೂರ್ಣವಾದ ಸಂಕಲನ ಎಂದರು. ಸಾಹಿತ್ಯ ಪರಿಷತ್ ಕಾರ್ಕಳ ತಾಲೂಕು ಘಟಕದ ಅಧ್ಯಕ್ಷ ಪ್ರಭಾಕರ ಶೆಟ್ಟಿ ಕೊಂಡಳ್ಳಿ ಮಾತನಾಡಿ, ಸಾಮರಸ್ಯ ಬೆಸೆಯುವುದೇ ಸಾಹಿತ್ಯದ ಉದ್ದೇಶ. ಈ ನಿಟ್ಟಿನಲ್ಲಿ ಇಬ್ಬನಿ ಸಾಮಾಜಿಕ ವ್ಯವಸ್ಥೆಯೊಳಗಿನ ವಿವಿಧ ಆಯಾಮಗಳನ್ನು ಒಳಗೊಂಡಿದ್ದು, ಪ್ರೀತಿ, ಮಾನವೀಯತೆ, ನಂಬಿಕೆ, ದೇಶಪ್ರೇಮ, ಗೌರವ ಎಂಬ ವಿಷಯಗಳ ಮೂಲಕ ಸಂಬಂಧವನ್ನು ಬೆಸೆಯುತ್ತದೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಮಿತ್ರಪ್ರಭಾ ಹೆಗ್ಡೆ, ಒಬ್ಬ ಯಶಸ್ವಿ ಪುರುಷನ ಹಿಂದೆ ಸ್ತ್ರೀ ಇದ್ದಾಳೆ ಎಂಬುದು ರೂಢಿಯಲ್ಲಿರುವ ಮಾತು, ಆದರೆ ಒಬ್ಬ ಯಶಸ್ವಿ ಮಹಿಳೆಯ ಹಿಂದೆ ಪುರುಷ ಶಕ್ತಿಯಿರುವುದನ್ನು ಡಾ. ಸುಮತಿ ರಘುರಾಮ್‌ ಪ್ರಭು ಅವರ ಸಾಧನೆಯಲ್ಲಿ ಗಮನಿಸಬಹುದು. ಎಲ್ಲಾ ಮಹಿಳೆಯರಿಗೂ ಈ ರೀತಿಯ ಬೆಂಬಲ ದೊರೆತಲ್ಲಿ ಮಹಿಳಾ ಸಬಲೀಕರಣ ಪರಿಪೂರ್ಣವಾಗುತ್ತದೆ ಎಂದರು. ಯಕ್ಷಗಾನ ಕಲಾವಿದ ರಾಮ್ ಭಟ್, ಶೇಖರ್ ಅಜೆಕಾರು, ಮಂಜುನಾಥ್ ನಾಯಕ್, ಸುಲೋಚನ ಜೋಡುರಸ್ತೆ, ಜಗದೀಶ್ ಪ್ರಭು ಅಂಡಾರು ಹಾಗೂ ಜಾಗೃತಿ ಮಹಿಳಾ ಸಂಘಟನೆಯ ಸದಸ್ಯರು ಉಪಸ್ಥಿತರಿದ್ದರು. ಮನಿಷಾ ಕಾಮತ್ ಪ್ರಾರ್ಥಿಸಿದರು. ಮಾಲತಿ ವಸಂತ್ ರಾಜ್ ಸ್ವಾಗತಿಸಿ, ಶೈಲಜ ಹೆಗ್ಡೆ ವಂದಿಸಿದರು. ಮಾಲತಿ ಜಿ. ಪೈ ನಿರೂಪಿಸಿದರು.

















































error: Content is protected !!
Scroll to Top