ಕಾನೂನು ಕಣಜ : ಚುನಾವಣೆಗೆ ಸಂಬಂಧಿಸಿದಂತೆ ಅಪರಾಧಗಳು

ಚುನಾವಣೆಗೆ ಸಂಬಂಧಪಟ್ಟ ಅಧಿಕಾರ ಅಂದರೆ ಚುನಾವಣಾಧಿಕಾರ ಎಂಬುವುದು ಒಬ್ಬ ವ್ಯಕ್ತಿ ಯಾವುದೇ ಸಾರ್ವತ್ರಿಕ ಚುನಾವಣೆಗೆ ಅಭ್ಯರ್ಥಿಯಾಗಿ ಸ್ವರ್ಧಿಸಲು ಅಥವಾ ಸ್ವರ್ಧಿಸದಿರಲು, ಅಥವಾ ತನ್ನ ನಾಮ ಪತ್ರವನ್ನು ವಾಪಸು ಪಡೆಯಲು ಅಥವಾ ಚುನಾವಣೆಯಲ್ಲಿ ಮತದಾನ ಮಾಡಲು ಅಥವಾ ಮಾಡದೇ ಇರಲು ಹೊಂದಿರುವ ಅಧಿಕಾರವಾಗಿರುತ್ತದೆ. ಚುನಾವಣೆಗೆ ಸ್ಪರ್ದಿಸುವ ವ್ಯಕ್ತಿ ಬೇರೆ ಯಾವುದೇ ವ್ಯಕ್ತಿಗೆ, ಆತನು ಹೊಂದಿರುವ ಅಧಿಕಾರವನ್ನು ಚಲಾಯಿಸುವಂತೆ ಪ್ರೇರೇಪಿಸಲು ಕಾನೂನು ಬಾಹಿರವಾಗಿ ಯಾವುದೇ ಪರಿತೋಷವನ್ನು ಕೊಟ್ಟರೆ ಅಥವಾ ಅಂತಹ ಯಾವುದೇ ಅಧಿಕಾರವನ್ನು ಚಲಾಯಿಸಲು ಇತರ ಯಾವುದೆ ವ್ಯಕ್ತಿಯನ್ನು ಪ್ರೇರೇಪಿಸುವುದಕ್ಕಾಗಿ ಪ್ರಯತ್ನಿಸಲು ತನಗಾಗಿ ಅಥವಾ ಇತರ ಯಾವನೇ ವ್ಯಕ್ತಿಗಾಗಿ ಬಹುಮಾನವೆಂದು ಯಾವುದೇ ಪರಿತೋಷಕವನ್ನು ಸ್ವೀಕರಿಸಿದರೆ ಚುನಾವಣೆಗೆ ಸಂಬಂಧಪಟ್ಟಂತೆ ಲಂಚಗುಳಿತನ ಅಪರಾಧ ಮಾಡಿದಂತಾಗುತ್ತದೆ.

ಯಾವುದೇ ವ್ಯಕ್ತಿಯು ಸಾರ್ವತ್ರಿಕ ಚುನಾವಣೆಗೆ ಸಂಬಂಧಿಸಿದಂತೆ ಯಾವುದೇ ಅಧಿಕಾರವನ್ನು ಅನಿರ್ಬಂಧವಾಗಿ ಚಲಾಯಿಸಲು ಸ್ವಯಿಚ್ಚೆಯಿಂದ ಅಡ್ಡಿಪಡಿಸಿದರೆ ಅಥವಾ ಅಡ್ಡಿಪಡಿಸಲು ಪ್ರಯತ್ನಿಸಿದರೆ, ಆತನು ಚುನಾವಣೆಯಲ್ಲಿ ಅನುಚಿತ ಪ್ರಭಾವ ಬೀರಿದ ಅಪರಾಧ ಮಾಡಿದಂತಾಗುತ್ತದೆ. ಯಾವುದೇ ಒಬ್ಬ ವ್ಯಕ್ತಿಯು ಒಂದು ಚುನಾವಣೆಯಲ್ಲಿ ಇನ್ನಿತರ ಜೀವಂತ ಅಥವಾ ಮೃತ ವ್ಯಕ್ತಿಯ ಹೆಸರಿನಲ್ಲಿ ಅಥವಾ ಯಾವುದೇ ಕಾಲ್ಪನಿಕ ಹೆಸರಿನಲ್ಲಿ ಮತ ಪತ್ರಕ್ಕಾಗಿ ಆವೇದಿಸಿಕೊಂಡರೆ ಅಥವಾ ಮತವನ್ನು ಚಲಾಯಿಸಿದರೆ ಅಥವಾ ಚುನಾವಣೆಯಲ್ಲಿ ಮತದಾನ ಮಾಡಿದ ತರುವಾಯ ತನ್ನ ಹೆಸರಿನಲ್ಲಿ ಅದೇ ಚುನಾವಣೆಯಲ್ಲ್ಲಿ ಮತ ಪತ್ರಕ್ಕಾಗಿ ಆವೇದಿಸಿಕೊಂಡರೆ ಅಥವಾ ಆ ರೀತಿ ಮಾಡಲು ಬೇರೆ ವ್ಯಕ್ತಿಯನ್ನು ಪ್ರೇರೇಪಿಸಿದರೆ ಮತದಾನ ಮಾಡಿಸುವ ಅಥವಾ ಮಾಡಿಸಲು ಪ್ರಯತ್ನಿಸುವ ವ್ಯಕ್ತಿಯು ಚುನಾವಣೆಯಲ್ಲಿ ಇನ್ನೊಬ್ಬನಂತೆ ನಟಿಸುವ ಚುನಾವಣಾ ಅಪರಾಧವನ್ನು ಮಾಡಿದಂತಾಗುತ್ತದೆ.

ಮೇಲ್ಕಾಣಿಸಿದ ಅಪರಾಧಗಳ ಪೈಕಿ ಲಂಚಗುಳಿತನದ ಅಪರಾಧದಲ್ಲಿ ಭಾಗಿಯಾದ ವ್ಯಕ್ತಿಯು ಒಂದು ವರ್ಷದ ವರೆಗಿನ ಜೈಲು ಶಿಕ್ಷೆ ಅಥವಾ ಜುಲ್ಮಾನೆಯಿಂದ ಅಥವಾ ಅವೆರಡರಿಂದಲೂ ದಂಡಿತನಾಗಬೇಕಾಗುತ್ತದೆ. ಅದೇ ರೀತಿ ಚುನಾವಣೆಯಲ್ಲಿ ಅನುಚಿತ ಪ್ರಭಾವವನ್ನು ಬೀರುವ ಅಥವಾ ಇನ್ನೊಬ್ಬನಂತೆ ನಟಿಸುವ ಅಪರಾಧವನ್ನು ಮಾಡಿದಕ್ಕಾಗಿ ಸಂಬಂಧಪಟ್ಟ ಅಪರಾಧಿಯು ಒಂದು ವರ್ಷದವರೆಗಿನ ಅವಧಿಯ ಜೈಲು ಶಿಕ್ಷೆ ಅಥವಾ ಜುಲ್ಮಾನೆಯಿಂದ ಅಥವಾ ಅವೆರಡರಿಂದಲೂ ದಂಡಿತನಾಗಬೇಕಾಗುತ್ತದೆ. ಯಾವುದೇ ವ್ಯಕ್ತಿಯು ಸಾರ್ವತ್ರಿಕ ಚುನಾವಣೆಯ ಫಲಿತಾಂಶದ ಮೇಲೆ ಪ್ರತಿಕೂಲ ಪರಿಣಾಮವಾಗಬೇಕೆಂಬ ದುರುದ್ದೇಶದಿಂದ ಒಬ್ಬ ಅಭ್ಯರ್ಥಿಯ ವೈಯಕ್ತಿಕ ಚಾರಿತ್ರ್ಯದ ಅಥವಾ ನಡತೆಯ ಕುರಿತು ಸುಳ್ಳು ಸುದ್ದಿಯನ್ನು, ಸುಳ್ಳು ಹೇಳಿಕೆಯನ್ನು ಸತ್ಯಸಂಗತಿಯೆಂದು ತಾತ್ಪರ್ಯವಾಗುವ ಹಾಗೆ ಮಾಡಿದರೆ ಅಥವಾ ಪ್ರಕಟಿಸಿದರೆ ಆತನು ಚುನಾವಣಾ ಅಪರಾಧಕ್ಕಾಗಿ ಶಿಕ್ಷೆಗೆ ಗುರಿಯಾಗಬೇಕಾಗುತ್ತದೆ.

ಯಾವುದೇ ಸಾರ್ವತ್ರಿಕ ಚುನಾವಣೆಗೆ ಸಂಬಂಧಿಸಿದಂತೆ ಅಥವಾ ಚುನಾವಣೆಗೆ ಸಂಬಂಧಿಸಿ ಮಾಡಿದ ವೆಚ್ಚಗಳ ಕುರಿತು ಲೆಕ್ಕ ಪತ್ರಗಳನ್ನು ಇಡಲು ಚುನಾವಣಾ ಆಯೋಗವು ರೂಪಿಸಿರುವ ನಿಯಮಾವಳಿಗಳನ್ನು ಉಲ್ಲಂಘಿಸುವುದು ಚುನಾವಣಾ ಅಪರಾಧವಾಗಿದ್ದು ಇದಕ್ಕೆ ಸಂಬಂದಪಟ್ಟ ವ್ಯಕ್ತಿಯು ಚುನಾವಣಾ ಅಪರಾಧಕ್ಕಾಗಿ ಶಿಕ್ಷೆಗೆ ಗುರಿಯಾಗಬೇಕಾಗುತ್ತದೆ.

✒️ ಕೆ. ವಿಜೇಂದ್ರ ಕುಮಾರ್, ವಕೀಲರು, ಕಾರ್ಕಳ
ಮೊ: 98452 32490/ 96116 82681

























































error: Content is protected !!
Scroll to Top