ಅನೂಹ್ಯ ಬಿಜೆಪಿ ರಣತಂತ್ರ

ವರುಣಾ, ಕನಕಪುರದಲ್ಲಿ ಪಕ್ಷದ ವರ್ಚಸ್ಸು ಪಣಕ್ಕಿಟ್ಟು ಸ್ಪರ್ಧೆ

ಬೆಂಗಳೂರು : ಚುನಾವಣೆಯಲ್ಲಿ ಸೋಲು ಮತ್ತು ಗೆಲುವಿನಷ್ಟೇ ಅದಕ್ಕಾಗಿ ಹೆಣೆಯುವ ರಣತಂತ್ರವೂ ರೋಚಕಗಿರುತ್ತದೆ. ಅದರಲ್ಲೂ ಬಿಜೆಪಿಯ ಈಗಿನ ನಾಯಕತ್ವ ಇಂಥ ಅನೂಹ್ಯ ರಣತಂತ್ರ ಹೆಣೆಯುವಲ್ಲಿ ನಿಸ್ಸೀಮ ಎನಿಸಿಕೊಂಡಿದೆ. ಬಿಜೆಪಿಯ ಚುನಾವಣಾ ಚಾಣಕ್ಯ ಅಮಿತ್‌ ಶಾ ರೂಪಿಸುವ ತಂತ್ರಗಳು ಎದುರಾಳಿಗಳನ್ನು ತಬ್ಬಿಬ್ಬುಗೊಳಿಸಿ ಬಿಡುತ್ತವೆ. ಇದೀಗ ಕರ್ನಾಟಕದ ವಿಧಾನಸಭೆ ಚುನಾವಣೆಯಲ್ಲೂ ಬಿಜೆಪಿ ಇದೇ ರೀತಿಯ ತಂತ್ರಗಾರಿಕೆಯನ್ನು ರೂಪಿಸಿರುವುದು ನಿಚ್ಚಳವಾಗುತ್ತದೆ. ಬಿಜೆಪಿ ಬಿಡುಗಡೆಗೊಳಿಸಿದ ಮೊದಲ ಮತ್ತು ಎರಡನೇ ಪಟ್ಟಿಯಲ್ಲೇ ಹಲವು ಅಚ್ಚರಿಗಳಿವೆ. ಗೆಲುವು ನಿಶ್ಚಿತ ಎಂಬ ಅಭ್ಯರ್ಥಿಯನ್ನು ಕೂಡ ಬದಲಾಯಿಸಿ ಹೊಸಮುಖಗಳಿಗೆ ಅವಕಾಶ ನೀಡುವ ತಂತ್ರಗಾರಿಕೆಯನ್ನು ರಚಿಸಲು ಬಿಜೆಪಿಯಿಯಿಂದ ಮಾತ್ರ ಸಾಧ್ಯ. 50ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಬಿಜೆಪಿ ಹೊಸ ಪ್ರಯೋಗಕ್ಕೆ ಮುಂದಾಗಿರುವುದು, ಕೆಲವು ಪ್ರಮುಖ ಕ್ಷೇತ್ರಗಳಿಗೆ ಆಯ್ಕೆ ಮಾಡಿರುವ ಅಭ್ಯರ್ಥಿಗಳನ್ನು ನೋಡುವಾಗ ಬಿಜೆಪಿ ಹೈಕಮಾಂಡ್‌ ಮನಸ್ಸಿನಲ್ಲಿ ಬೇರೆಯದ್ದೇ ಲೆಕ್ಕಾಚಾರ ಇರುವ ಸುಳಿವು ಸಿಗುತ್ತದೆ. ಇದಕ್ಕೆ ಉದಾಹರಣೆ ವರುಣಾ ಮತ್ತು ಕನಕಪುರ ಕ್ಷೇತ್ರಗಳು.

ವರುಣಾ ಕ್ಷೇತ್ರದಲ್ಲಿ ಸಚಿವ ವಿ. ಸೋಮಣ್ಣ ಮತ್ತು ಕನಕಪುರ ಕ್ಷೇತ್ರದಲ್ಲಿ ಸಚಿವ ಆರ್‌. ಅಶೋಕ್‌ ಅವರನ್ನು ಬಿಜೆಪಿ ಕಣಕ್ಕಿಳಿಸಿದೆ. ಈ ಮೂಲಕ ತನ್ನ ವಿರೋಧ ಪಕ್ಷದ ಇಬ್ಬರು ಪ್ರಮುಖ ಅಭ್ಯರ್ಥಿಗಳ ಸುಲಭ ಗೆಲುವಿನ ಕನಸನ್ನು ಭಗ್ನಗೊಳಿಸಿದೆ. ಬಿಜೆಪಿ ಇಂತಹ ಕಠಿಣ ನಿರ್ಧಾರ ಕೈಗೊಳ್ಳಲು ಏನು ಕಾರಣ ಎಂಬುದು ಇದೀಗ ರಾಜ್ಯ ರಾಜಕೀಯದಲ್ಲಿ ನಡೆಯುತ್ತಿರುವ ಚರ್ಚೆ.
ಮಾಜಿ ಮುಖ್ಯಮಂತ್ರಿ ಹಾಗೂ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ವರುಣಾ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ. ಅದೇ ರೀತಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಕನಕಪುರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ. ಇವರೇ ಕಾಂಗ್ರೆಸ್‌ ಗೆದ್ದರೆ ಮುಖ್ಯಮಂತ್ರಿ ಪಟ್ಟದ ರೇಸಿನಲ್ಲಿರುವ ಪ್ರಮುಖರು. ಅದಕ್ಕಾಗಿ ಇಬ್ಬರ ನಡುವೆ ಗುದ್ದಾಟ ನಡೆಯುತ್ತಿರುವುದು ರಹಸ್ಯವಾಗಿ ಉಳಿದಿಲ್ಲ. ಆದರೆ ಈ ಎರಡೂ ಕ್ಷೇತ್ರಗಳಿಗೆ ಪ್ರಬಲ ಅಭ್ಯರ್ಥಿಗಳನ್ನು ಕಣಕ್ಕಿಳಿಸುವ ಮೂಲಕ ಬಿಜೆಪಿ ಈ ಸಲದ ವಿಧಾನಸಭೆ ಚುನಾವಣೆಯನ್ನು ರಣರೋಚಕವಾಗುವಂತೆ ಮಾಡಿದೆ. ಒಂದು ವೇಳೆ ಎರಡು ಕ್ಷೇತ್ರಗಳಲ್ಲಿ ಕನಿಷ್ಠ ಒಂದರಲ್ಲಾದರೂ ಗೆಲುವು ಸಾಧ್ಯಾವಾದರೆ ಅದು ಇತಿಹಾಸವೇ ಆಗುತ್ತದೆ. ಗೆಲ್ಲದಿದ್ದರೂ ವಿರೋಧಿಗಳ ಗೆಲುವಿನ ಅಂತರವನ್ನು ಗಣನೀಯ ಪ್ರಮಾಣದಲ್ಲಿ ತಗ್ಗಿಸಿದರೂ ಅದು ಉಂಟು ಮಾಡುವ ಪರಿಣಾಮವೂ ಕಡಿಮೆಯದ್ದಲ್ಲ.

ವಿ. ಸೋಮಣ್ಣ ಮತ್ತು ಆರ್‌. ಅಶೋಕ್‌ ತಮ್ಮ ತಮ್ಮ ಸ್ವಂತ ಕ್ಷೇತ್ರಗಳಲ್ಲಿ ಸ್ಪರ್ಧಿಸುತ್ತಿದ್ದಾರಾದರೂ, ಅದರ ಜತೆಗೆ ಅನುಕ್ರಮವಾಗಿ ವರುಣಾ ಮತ್ತು ಕನಕಪುರ ವಿಧಾನಸಭಾ ಕ್ಷೇತ್ರದಿಂದಲೂ ತಮ್ಮ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ. ಸಿದ್ದರಾಮಯ್ಯ ಮತ್ತು ಶಿವಕುಮಾರ್‌ ಅವರ ಗೆಲುವನ್ನು ಕಠಿಣಗೊಳಿಸುವ ಉದ್ದೇಶದಿಂದ ಈ ಇಬ್ಬರೂ ಪ್ರಬಲ ಅಭ್ಯರ್ಥಿಗಳನ್ನು ಬಿಜೆಪಿ ಕಣಕ್ಕಿಳಿಸಿದೆ ಎನ್ನಲಾಗಿದೆ.

ಈ ಎರಡೂ ಕ್ಷೇತ್ರಗಳಲ್ಲಿ ಬಿಜೆಪಿ ದುರ್ಬಲವಾಗಿದೆ. ಆದರೆ ಪ್ರಬಲ ಅಭ್ಯರ್ಥಿಗಳನ್ನು ಕಣಕ್ಕಿಳಿಸುವ ಮೂಲಕ, ಕದನ ರೋಚಕತೆಯನ್ನು ಹೆಚ್ಚಿಸಿರುವುದು ಉತ್ತಮ ಚಿಂತನೆಯ ನಡೆ ಎಂದು ರಾಜ್ಯ ಬಿಜೆಪಿ ನಾಯಕರು ಹೇಳುತ್ತಾರೆ. ದಕ್ಷಿಣ ಕರ್ನಾಟಕ ಪ್ರದೇಶದಲ್ಲಿ ಈ ಇಬ್ಬರೂ ಪ್ರಬಲ ಅಭ್ಯರ್ಥಿಗಳು, ಪಕ್ಷ ಸಂಘಟನೆಗೆ ಗಣನೀಯ ಕೊಡುಗೆ ನೀಡಬಲ್ಲರು ಎಂಬುದು ಬಿಜೆಪಿ ಹೈಕಮಾಂಡ್‌ ಆಶಾಭಾವನೆಯಾಗಿದೆ. ಅಲ್ಲದೇ ಈ ಪ್ರದೇಶದಲ್ಲಿ ಪಕ್ಷದ ಕಾರ್ಯಕ್ಷಮತೆಯನ್ನು ಸುಧಾರಿಸಲು, ಇದೊಂದು ಸುವರ್ಣ ಅವಕಾಶ ಎಂದು ಬಿಜೆಪಿ ಹೈಕಮಾಂಡ್‌ ಭಾವಿಸಿದೆ. ಈ ಎರಡು ಕ್ಷೇತ್ರಗಳಲ್ಲಿ ಈ ಸಲ ಗೆಲ್ಲಬಹುದು ಎಂಬ ಖಚಿತ ವಿಶ್ವಾಸ ಬಿಜೆಪಿ ಹೈಕಮಾಂಡಿಗಿಲ್ಲ. ಅದೇನಿದ್ದರೂ 50:50 ಸಾಧ್ಯತೆ. ಆದರೆ ಪ್ರಬಲ ಸ್ಪರ್ಧೆಯೊಡ್ಡುವ ಮೂಲಕ ಕ್ಷೇತ್ರಗಳಲ್ಲಿ ಬಿಜೆಪಿಗೆ ಒಂದು ಭದ್ರ ನೆಲೆ ಒದಗಿಸುವುದು ಪಕ್ಷದ ದೂರಾಲೋಚನೆ. ಎರಡೂ ಕ್ಷೇತ್ರಗಳಲ್ಲಿ ಕಾಂಗ್ರೆಸ್‌ ನೆಲೆ ಹೊಂದಿರುವುದು ಪಕ್ಷದ ವರ್ಚಸ್ಸಿನಿಂದ ಅಲ್ಲ, ಬದಲಾಗಿ ನಾಯಕರ ವೈಯಕ್ತಕ ವರ್ಚಸ್ಸಿನ ಮೇಲೆ. ನಾಳೆ ಶಿವಕುಅಮರ್‌ ಮತ್ತು ಸಿದ್ದರಾಮಯ್ಯ ನೇಪಥ್ಯಕ್ಕೆ ಸರಿದ ಮೇಲೆ ಕಾಂಗ್ರೆಸ್‌ ಈ ಎರಡು ಕ್ಷೇತ್ರಗಳಲ್ಲಿ ಈಗಿರುವಷ್ಟೇ ಬಲವಾದ ಹಿಡಿತ ಹೊಂದಿರುತ್ತದೆ ಎನ್ನಲಾಗದು. ಹೀಗೆ ಮುಂದಿನ ಲೆಕ್ಕಾಚಾರ ಇಟ್ಟುಕೊಂಡು ಪಕ್ಷಕ್ಕೆ ಒಂದು ನೆಲೆ ಕಲ್ಪಿಸುವುದು ಬಿಜೆಪಿಯ ಲೆಕ್ಕಾಚಾರ.

ಪ್ರಮುಖ ಒಕ್ಕಲಿಗ ನಾಯಕರಾದ ಆರ್. ಅಶೋಕ್ ಮತ್ತು ಲಿಂಗಾಯತ ನಾಯಕರಾದ ವಿ. ಸೋಮಣ್ಣ‌ ಇಬ್ಬರೂ ತಮ್ಮ ಸಮುದಾಯಗಳಲ್ಲಿ ಪ್ರಬಲರೆಂದು ಪರಿಗಣಿಸಲ್ಪಟ್ಟಿದ್ದಾರೆ. ಈ ಸಮುದಾಯಗಳ ಮತಗಳನ್ನು ವಿಭಜಿಸುವಲ್ಲಿ ಈ ನಾಯಕರ ವರ್ಚಸ್ಸು ಬಳಕೆಯಾದರೆ ಅಷ್ಟರ ಮಟ್ಟಿಗೆ ಸಿದ್ದರಾಮಯ್ಯ ಮತ್ತು ಡಿಕೆಶಿ ಗೆಲುವಿನ ಹಾದಿ ಕಠಿಣವಾಗುತ್ತದೆ. ಈ ಕಾರಣಕ್ಕೆ ವರುಣಾ ಮತ್ತು ಕನಕಪುರ ಎರಡೂ ಕ್ಷೇತ್ರಗಳಲ್ಲಿ ಬಿಜೆಪಿ ತನ್ನ ಎಲ್ಲಾ ಸಂಪನ್ಮೂಲಗಳನ್ನು ಹೂಡಲು ಯೋಜಿಸಿದೆ. ಇಬ್ಬರೂ ಅಭ್ಯರ್ಥಿಗಳು ಉತ್ತಮವಾಗಿ ಕಾರ್ಯನಿರ್ವಹಿಸಿದರೆ ಮುಂದಿನ ದಿನಗಳಲ್ಲಿ ಅವರ ಕುಟುಂಬದ ಇತರ ಸದಸ್ಯರಿಗೆ ಸೀಟು ನೀಡುವ ಭರವಸೆ ನೀಡಲಾಗಿದೆ.

ದೊಡ್ಡ ನಾಯಕರನ್ನು ಅವರ ಕ್ಷೇತ್ರಗಳಿಗೆ ಸೀಮಿತಗೊಳಿಸುವ ಇನ್ನೊಂದು ಉದ್ದೇಶವೂ ಇದರ ಹಿಂದೆ ಇದೆ. ಕ್ಷೇತ್ರದಲ್ಲಿ ಎದುರಾಳಿ ಪ್ರಬಲನಾಗಿದ್ದರೆ ಹೆಚ್ಚು ಗಮನ ಹರಿಸಬೇಕಾಗುತ್ತದೆ. ಕ್ಷೇತ್ರದಲ್ಲೇ ಹೆಚ್ಚು ದಿನಗಳನ್ನು ಕಳೆಯಬೇಕಾಗುತ್ತದೆ. ಹೀಗಾದರೆ ರಾಜ್ಯ ವ್ಯಾಪಿ ಓಡಾಡಿ ಪ್ರಚಾರ ಮಾಡಲು ಕ್ಷಣವಾಗುತ್ತದೆ. ಡಿಕೆಶಿ ಮತ್ತು ಸಿದ್ದರಾಮಯ್ಯ ತಮ್ಮ ಕ್ಷೇತ್ರಗಳಿಗೆ ಹೆಚ್ಚು ಗಮನ ಹರಿಸುವಂತಾದರೆ ಉಳಿದ ಕಡೆ ಇದರ ಪರಿಣಾಮದ ಲಾಭ ಸಿಗಬಹುದು ಎಂಬುದು ಬಿಜೆಪಿಯ ಇನ್ನೊಂದು ಲೆಕ್ಕಾಚಾರ. ಒಟ್ಟಾರೆ ವಿಪಕ್ಷದ ಪ್ರಚಾರವನ್ನು ದುರ್ಬಲಗೊಳಿಸಿ ಉಳಿದೆಡೆಯಿರುವ ಅಭ್ಯರ್ಥಿಗಳಿಗೆ ಅನುಕೂಲ ಮಾಡಿಕೊಡುವ ತಂತ್ರಗಾರಿಕೆ ಕೆಲವೊಮ್ಮೆ ಕೆಲಸ ಮಾಡುತ್ತದೆ ಎನ್ನುವುದು ಬಿಜೆಪಿಗೆ ಗೊತ್ತಿದೆ. ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಈ ಬಾರಿಯ ಚುನಾವಣೆಯಲ್ಲಿ ಸ್ಪರ್ಧಿಸದಿದ್ದರೂ ಇಂತಹದ್ದೊಂದು ರಣತಂತ್ರ ಹೆಣೆಯುವಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ್ದಾರೆ ಎಂದು ಹೇಳಲಾಗುತ್ತಿದೆ.

ಬಿಜೆಪಿಯ ಮೊದಲ ಪಟ್ಟಿಯಲ್ಲಿ 50ಕ್ಕೂ ಹೆಚ್ಚು ಅಭ್ಯರ್ಥಿಗಳು ಲಿಂಗಾಯತ ಸಮುದಾಯಕ್ಕೆ ಸೇರಿದವರಾಗಿದ್ದರೆ, ಸುಮಾರು 40 ಮಂದಿ ಒಕ್ಕಲಿಗ ಸಮುದಾಯದವರು. 2018ರ ಚುನಾವಣೆಯಲ್ಲಿ ಬಿಜೆಪಿ 55 ಲಿಂಗಾಯತ ಅಭ್ಯರ್ಥಿಗಳನ್ನು ಕಣಕ್ಕಿಳಿಸಿತ್ತು. ಅದೇ ರೀತಿ ಬಿಎಸ್‌ ಯಡಿಯೂರಪ್ಪ ಹಲವಾರು ಬೆಂಬಲಿಗರು ಈ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ ಎಂಬುದು ವಿಶೇಷ.
ಜ್ಯೋತಿ ರಮೇಶ್‌

































































































error: Content is protected !!
Scroll to Top