ಅಯೋಧ್ಯೆ ಮತ್ತು ಕಾರ್ಕಳಕ್ಕೆ ಕೊಂಡಿಯಾದ ಕೃಷ್ಣಶಿಲೆ

ಶಿಲ್ಪಿಗಳ ತವರೂರಿನಿಂದ ಪ್ರಭು ಶ್ರೀರಾಮನ ವಿಗ್ರಹಕ್ಕೆ ತೆರಳಿದ ಶಿಲಾಕಲ್ಲು

ಕಾರ್ಕಳ : ಶಿಲ್ಪಕಲೆಗಳ ತವರೂರು ಎಂದೇ ಪ್ರಸಿದ್ಧಿಯಾಗಿರುವ ಕರಿಯಕಲ್ಲಿನ ನಾಡು ಕಾರ್ಕಳದ ಕೃಷ್ಣಶಿಲೆಗೆ ಅಯೋಧ್ಯೆಯ ರಾಮನಾಗುವ ಭಕ್ತಿಯೋಗ. ಕಾರ್ಕಳದ ಶಿಲಾಕಲ್ಲಿನಿಂದ ಅಯೋಧ್ಯೆಯಲ್ಲಿ ರಾಮಲಲ್ಲಾನ ವಿಗ್ರಹ ರೂಪ ಪಡೆಯುವುದರೊಂದಿಗೆ ಭಾರತದ ಇತಿಹಾಸದಲ್ಲಿ ಕಾರ್ಕಳದ ಹೆಸರು ಅಜರಾಮರವಾಗಿ ಉಳಿಯಲಿದೆ.

2020 ಆಗಸ್ಟ್‌ 5 ರಂದು ಪ್ರಧಾನಿ ನರೇಂದ್ರ ಮೋದಿಯಿಂದ ಶಂಕುಸ್ಥಾಪನೆಯಾಗಿ ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ಭರದಿಂದ ನಿರ್ಮಾಣ ಆಗುತ್ತಿರುವ ಪ್ರಭು ಶ್ರೀ ರಾಮಚಂದ್ರರ ಭವ್ಯ ದೇಗುಲದಲ್ಲಿ ಪ್ರತಿಷ್ಠಾಪನೆಗೊಳ್ಳಲಿರುವ ರಾಮಲಲ್ಲಾನ ಮೂರ್ತಿಗೆ ಮಾ. 16 ರಂದು ಕಾರ್ಕಳದ ಈದು ಗ್ರಾಮದ ತುಂಗ ಪೂಜಾರಿಯವರ ಭೂಮಿಯಲ್ಲಿದ್ದ ಜಗತ್ತಿನ ಅತ್ಯಂತ ಶ್ರೇಷ್ಠ ಶಿಲೆಯು ತೆರಳಿದೆ.

ಕಾರ್ಕಳದ ಜನತೆಗೂ ಅಯೋಧ್ಯೆಗೂ ಕೊಂಡಿಯಂತೆ ಕಾರ್ಯನಿರ್ವಹಿಸಿದ್ದು ಕಾರ್ಕಳ ವಿಶ್ವ ಹಿಂದೂ ಪರಿಷತ್ ಬಜರಂಗದಳದ ಕಾರ್ಯಕರ್ತರು. ವಿಶ್ವ ಹಿಂದೂ ಪರಿಷತ್‌ ಪ್ರಮುಖರು ತಿಂಗಳ ಹಿಂದೆ ಕಾರ್ಕಳದ ಕೃಷ್ಣಶಿಲೆಯ ಕುರಿತು ಕಾರ್ಕಳ ಘಟಕದವರ ಬಳಿ ವಿಚಾರಿಸಿದ್ದು, ಬಳಿಕ ತುಂಗಾ ಪೂಜಾರಿಯವರ ಭೂಮಿಯಲ್ಲಿದ್ದ ಕಲ್ಲನ್ನು ಗುರುತಿಸಲಾಯಿತು. ಪ್ರಖ್ಯಾತ ವಾಸ್ತುತಜ್ಞ ಕುಶ್ದೀಪ್‌ ಬನ್ಸಾಲ್‌, ಕಲ್ಲು ತಜ್ಞರು, ವಿಜ್ಞಾನಿಗಳು ಕಾರ್ಕಳ ಭೇಟಿ ನೀಡಿ ಇಲ್ಲಿನ ಕಲ್ಲು ಪರೀಕ್ಷಿಸಿದ್ದರು. ಈ ಶಿಲೆಯು 9 ಟನ್‌ ತೂಕ, 9.5 ಅಡಿ ಉದ್ದ, 6 ಅಡಿ ಅಗಲ ಮತ್ತು 4 ಅಡಿ ದಪ್ಪವಿದ್ದು ಮಾ. 16 ರಂದು ಘಟಕದ ನೇತೃತ್ವದಲ್ಲಿ ಕಲ್ಲನ್ನು ಅಯೋಧ್ಯೆಗೆ ಲಾರಿಯ ಮೂಲಕ ಸಾಗಿಸಲಾಯಿತು.

ನೆಲ್ಲಿಕಾರು ಶಿಲೆಯೆಂದೇ ಪ್ರಸಿದ್ಧಿ ಕೃಷ್ಣಶಿಲೆ
ಜಗತ್ತಿನ ಅತ್ಯಂತ ವಿಶೇಷವಾದ ಶಿಲಾಕಲ್ಲು ಕೃಷ್ಣಶಿಲೆಯು ಕಾರ್ಕಳದಿಂದ ಅಯೋಧ್ಯೆಗೆ ಹೊರಡಿರುವುದು ಕಾರ್ಕಳದ ಭೂಮಿಯನ್ನು ಪಾವನಗೊಳಿಸಿದೆ ಎಂದರೆ ತಪ್ಪಾಗಲಾರದು. ಕಾರ್ಕಳ ಎಂದಾಕ್ಷಣ ಮೊದಲು ಸ್ಮರಣೆಗೆ ಬರುವುದೇ ಇಲ್ಲಿನ ಶಿಲ್ಪಕಲೆ. ಮುಖ್ಯವಾಗಿ ನೆಲ್ಲಿಕಾರಿನ ಕೃಷ್ಣಶಿಲೆ ದೇಶದಾದ್ಯಂತ ಪ್ರಸಿದ್ಧಿಯನ್ನು ಪಡೆದಿರುವುದು ಹೆಮ್ಮೆಯ ಸಂಗತಿ.

2020ರಲ್ಲಿ ರಾಷ್ಟ್ರಪತಿ ಭವನ ಸೇರಿರುವ ಮಹಾಭಾರತದ ದೃಶ್ಯವನ್ನೊಳಗೊಂಡ ಮೂರ್ತಿ, ಭಗವಾನ್ ಶ್ರೀ ಬಾಹುಬಲಿ, ಹಿರಿಯಂಗಡಿ ಬಸದಿಯ ಮಾನಸ್ತಂಭ ಪ್ರತಿಕೃತಿ, ವರಕವಿ ಮುದ್ದಣ, ನಾಗರಾಜ ನಾಗರಾಣಿ, ಸೋಮೇಶ್ವರ ಸ್ತಂಭ, ಗಜ-ಸಿಂಹ, ಗೇಟ್ ವೇ, ಕಲ್ಲಿನ ಕಾರಂಜಿ, ಚೆನ್ನಕೇಶವ ಹೀಗೆ ಒಟ್ಟು 10 ಮೂರ್ತಿಗಳು ನೆಲ್ಲಿಕಾರು ಕೃಷ್ಣಶಿಲೆಯಿಂದ ಕೆತ್ತನೆಗೊಂಡಿರುವುದಾಗಿದೆ. ಇನ್ನು ದೆಹಲಿಯ ಅಹಿಂಸಾ ಸ್ಥಳದಲ್ಲಿ ಪ್ರತಿಷ್ಠಾಪನೆಯಾದ ಪದ್ಮಾಸನ ಭಂಗಿಯಲ್ಲಿರುವ ಮಹಾವೀರನ ಪ್ರತಿಮೆ, ರಾಜಸ್ಥಾನದ ಅಲ್ವಾರ್ ಜಿಲ್ಲೆಯಲ್ಲಿನ ಚಂದ್ರಪ್ರಭಾ ತೀರ್ಥಂಕರರ ಪ್ರತಿಮೆ, ರಿಲಾಯನ್ಸ್‌ನ ಮುಖೇಶ್‌ ಅಂಬಾನಿ ಅವರು ಗುರುವಾಯೂರು ಶ್ರೀಕೃಷ್ಣ ದೇವಸ್ಥಾನಕ್ಕೆ ಅರ್ಪಿಸಿದ ಶಿವೇಲಿ ಮಂಟಪದಲ್ಲಿನ 25 ಅಡಿ ಎತ್ತರದ ಸ್ತಂಭ ಚತುಷ್ಠಯಗಳಲ್ಲಿನ ಶಿಲೆಯು ಕಾರ್ಕಳದ್ದೇ ಆಗಿದೆ.

✒️ನಳಿನಿ ಎಸ್. ಸುವರ್ಣ































































































error: Content is protected !!
Scroll to Top