ಉಡುಪಿ, ಬೈಂದೂರು, ಮಂಗಳೂರಿನಲ್ಲಿ ಕಾರ್ಯಕರ್ತರ ಸಭೆ
ಬೆಂಗಳೂರು: ವಿಧಾನಸಭೆ ಚುನಾವಣೆಗೆ ದಿನಗಣನೆ ಪ್ರಾರಂಭವಾಗಿರುವಂತೆಯೇ ಕೇಂದ್ರದ ನಾಯಕರು ರಾಜ್ಯಕ್ಕೆ ಬೆನ್ನುಬೆನ್ನಿಗೆ ಬರಲಾರಂಭಿಸಿದ್ದಾರೆ. ಇದೀಗ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ. ಪಿ. ನಡ್ಡಾ ಇಂದಿನಿಂದ ಮೂರು ದಿನ ರಾಜ್ಯ ಪ್ರವಾಸ ಕೈಗೊಳ್ಳಲಿದ್ದಾರೆ.
ಉಡುಪಿ ಮತ್ತು ಬೇಲೂರಲ್ಲಿ ನಾಯಕರ ಜತೆ ಸಭೆ ನಡೆಸಲಿದ್ದಾರೆ. ನಂತರ ಮಂಗಳೂರಿನ ಕಾರ್ಯಕ್ರಮವೊಂದರಲ್ಲಿ ಭಾಗಿಯಾಗಲಿದ್ದಾರೆ. ಬಳಿಕ ಚಿಕ್ಕಮಗಳೂರಿನಲ್ಲಿ ನಡೆಯುವ ಬೈಕ್ ರ್ಯಾಲಿಯಲ್ಲಿ ಭಾಗಿಯಾಗಲಿದ್ದಾರೆ.
ನಡ್ಡಾ ಶೃಂಗೇರಿ ಮಠಕ್ಕೆ ಭೇಟಿ ನೀಡಿ, ರಾತ್ರಿ ಅಲ್ಲಿಯೇ ತಂಗಲಿದ್ದಾರೆ. ಹಿಂದೂ ಪವಿತ್ರ ಸ್ಥಳ ಶೃಂಗೇರಿ ಶಾರದಾ ಮಠವು ನಾಲ್ಕು ಪ್ರಮುಖ ಪೀಠಗಳಲ್ಲಿ ಒಂದು. ಇದನ್ನು ಅದ್ವೈತ ವೇದಾಂತದ ಪ್ರತಿಪಾದಕರಾದ ಆದಿಗುರು ಶಂಕರಾಚಾರ್ಯರು ಸ್ಥಾಪಿಸಿದ್ದಾರೆ. ಹಾಸನದಲ್ಲಿ ಬಿಜೆಪಿ ಜಿಲ್ಲಾ ಕಾರ್ಯಕರ್ತರ ಸಮ್ಮೇಳನದಲ್ಲಿ ಭಾಗವಹಿಸುತ್ತಾರೆ.
ಬಿಜೆಪಿ ಪಾಲಿಗೆ ದಕ್ಷಿಣ ಭಾರತದಲ್ಲಿ ಕರ್ನಾಟಕ ಭದ್ರಕೋಟೆಯಾಗಿದೆ. ಅತಿ ದೊಡ್ಡ ರಾಜ್ಯದಲ್ಲಿ ಪಕ್ಷವನ್ನು ಮತ್ತೆ ಅಧಿಕಾರಕ್ಕೆ ತರುವುದು ಸವಾಲಿನ ಕೆಲಸವಾಗಿದೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಹಲವು ಟ್ವಿಸ್ಟ್‌ಗಳ ನಂತರ ಬಹುಮತದ ಕೊರತೆಯ ಹೊರತಾಗಿಯೂ, ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಆಫರೇಷನ್ ಕಮಲ ಮುಖಾಂತರ ಜೆಡಿಎಸ್ ಮತ್ತು ಕಾಂಗ್ರೆಸ್‌ನ ಅನೇಕ ಶಾಸಕರನ್ನು ಬಿಜೆಪಿಗೆ ಕರೆತಂದರು. ಇದರ ಪರಿಣಾಮವಾಗಿ ಜುಲೈ 2022ರಲ್ಲಿ ರಾಜ್ಯದಲ್ಲಿದ್ದ ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರ ಪತನವಾಗಿ ಯಡಿಯೂರಪ್ಪ ಮುಖ್ಯಮಂತ್ರಿಯಾದರು.




















