ಕಾರ್ಕಳ: ಕಾರ್ಕಳ ತಾಲೂಕನ್ನು ಪ್ರವಾಸೋದ್ಯಮ ಕ್ಷೇತ್ರದಲ್ಲಿ ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಹಾಗೂ ಪರಶುರಾಮ ತುಳುನಾಡಿನ ಸೃಷ್ಟಿಕರ್ತ ಎನ್ನುವಂತಹ ಕಲ್ಪನೆಗಳ ಹಿನ್ನೆಲೆಯಲ್ಲಿ ಕುರುಹಿಗಾಗಿ ಪರಶುರಾಮ ಥೀಮ್ ಪಾರ್ಕ್ ನಿರ್ಮಾಣವಾಗುತ್ತಿದ್ದು ಇದರ ಯಶಸ್ವಿ ಕಾರ್ಯಕ್ರಮಕ್ಕೆ ತಾಲೂಕಿನ ಎಲ್ಲಾ ಗ್ರಾಮಗಳ ಸಹಕಾರ ಅವಶ್ಯ ಎಂದು ಇಂಧನ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ವಿ. ಸುನೀಲ್ ಕುಮಾರ್ ಅಭಿಪ್ರಾಯ ವ್ಯಕ್ತಪಡಿಸಿದರು. ಜ.11 ರಂದು ನಡೆದ ಕುಕ್ಕುಂದೂರು ಗ್ರಾ. ಪಂ ವ್ಯಾಪ್ತಿಯ ಜನತೆಯೊಡನೆ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು.
ನಮ್ಮೂರಿನ ಪ್ರಸಿದ್ಧಿಯ ಪ್ರಚಾರಕರ್ತರು ನಾವಾಗಬೇಕು
ಪ್ರವಾಸೋದ್ಯಮ ದೃಷ್ಟಿಯಿಂದ ಮುಂದಿನ 5 ವರ್ಷಗಳಲ್ಲಿ ಪರಶುರಾಮ ಥೀಮ್ ಪಾರ್ಕ್ ನಲ್ಲಿ ಅಭಿವೃದ್ಧಿ ಚಟುವಟಿಕೆಗಳು ನಡೆಯಲಿದ್ದು, ಅದರ ಮೊದಲ ಹಂತದ ಉದ್ಘಾಟನೆಯು ಜ. 27 ರಂದು ನಡೆಯಲಿದೆ. ಇದನ್ನು ವೈಭರಿಕರಿಸಿ ಕಾರ್ಕಳದ ಕೀರ್ತಿಯನ್ನು ವಿಶ್ವಮಟ್ಟದಲ್ಲಿ ರಾರಾಜಿಸುವಂತೆ ಮಾಡುವ ಪ್ರಚಾರಕರು ನಾವಾಗಬೇಕು ಎಂದರು.
ಶಂಖನಾದದೊಂದಿಗೆ ಪ್ರತಿಮೆಯ ಲೋಕಾರ್ಪಣೆ
ಕಾರ್ಯಕ್ರಮದ ರೂಪುರೇಷೆಗಳನ್ನು ವಿವರಿಸಿದ ಅವರು ಪರಶುರಾಮನ ಕಂಚಿನ ಪ್ರತಿಮೆ ಶಂಖನಾದದೊಂದಿಗೆ ಲೋಕಾರ್ಪಣೆಯಾಗಲಿದ್ದು, ಶಂಖನಾದ ಮಾಡುವವರು ಕ್ಲಪ್ತ ಸಮಯದಲ್ಲಿ ಭಾಗಿಯಾಗುವಂತೆ ಹಾಗೂ ಸ್ವಯಂ ಸೇವಕರಾಗಿ ಬರುವವರಿಗೆ ಹೆಸರು ನೋಂದಾವಣೆ ಈಗಾಗಲೇ ಪ್ರಾರಂಭವಾಗಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಕುಕ್ಕುಂದೂರು ಗ್ರಾಮದ ಜನರು ನೋಂದಾವಣೆ ಮಾಡಿಕೊಳ್ಳುವಂತೆ ತಿಳಿಸಿದರು.

ಕಾರ್ಯಕ್ರಮದಲ್ಲಿ ಕುಕ್ಕುಂದೂರು ಗ್ರಾ. ಪಂ. ಅಧ್ಯಕ್ಷೆ ಶಶಿಮಣಿ ಸಂಪತ್ತ್, ಗೇರು ಅಭಿವೃದ್ಧಿ ನಿಗಮದ ಅಧ್ಯಕ್ಷ ಮಣಿರಾಜ ಶೆಟ್ಟಿ, ಜನಜಾಗೃತಿ ವೇದಿಕೆಯ ಮಾಜಿ ಅಧ್ಯಕ್ಷ ಕಮಲಾಕ್ಷ ನಾಯಕ್, ಅಜೆಕಾರು ಪದ್ಮಗೋಪಾಲ ಎಜುಕೇಶನ್ ಟ್ರಸ್ಟ್‌ನ ಅಧ್ಯಕ್ಷ ಸುಧಾಕರ ಶೆಟ್ಟಿ, ಉದ್ಯಮಿ ಜ್ಯೋತಿ ಪೈ, ಚೇತನ ವಿಶೇಷ ಶಾಲೆಯ ಅಧ್ಯಕ್ಷ ರಘುನಾಥ್ ಶೆಟ್ಟಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕುಕ್ಕುಂದೂರು ಗ್ರಾ. ಪಂ. ಸದಸ್ಯರು, ಊರ ಪರಮುಖರು, ಸಂಘ ಸಂಸ್ಥೆಗಳ ಪ್ರಮುಖರು, ಉದ್ಯಮಿಗಳು ಮೊದಲಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
























