ಕಾರ್ಕಳ: 15 ವರ್ಷದ ಬಾಲಕ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಕೆರ್ವಾಶೆಯ ಹಪ್ಪನಡ್ಕ ಹೊಳೆಬದಿಯಲ್ಲಿ ಸಂಭವಿಸಿದೆ. ಬಾಲಕನನ್ನು ಪಡಿಬೆಟ್ಟು ನರಸಿಂಹರಾವ್ ಸ್ಮಾರಕ ಪದವಿ ಪೂರ್ವ ಕಾಲೇಜಿನ ಹೈಸ್ಕೂಲ್ ವಿಭಾಗದ 9ನೇ ತರಗತಿಯ ವಿದ್ಯಾರ್ಥಿ ಧನುಶ್ ಎಂದು ಗುರುತಿಸಲಾಗಿದೆ. ಈತ ಕೆರ್ವಾಶೆ ಗ್ರಾಮದ ದೊನ್ನಡ್ಕ ಪೆರುಮಗ್ಗೇರಿನ ರಾಮಣ್ಣ ಪೂಜಾರಿ ಎಂಬವರ ಪುತ್ರ.
ಡಿ.15 ರಂದು ಮಿಯ್ಯಾರಿನ ಬೋರ್ಕಟ್ಟೆಯಲ್ಲಿರುವ ಅಜ್ಜಿ ಮನೆಗೆ ತಾಯಿ ಹಾಗೂ ತಂಗಿಯೊಂದಿಗೆ ಹೋಗಿ ಡಿ.17ರಂದು ವಾಪಸಾಗಿದ್ದ. ಬಳಿಕ ಅಡಕೆ ಸುಲಿಯುವ ಕೆಲಸಕ್ಕೆಂದು ಹೋದವನು ವಾಪಸಾಗಿರಲಿಲ್ಲ. ಭಾನುವಾರ ತಂದೆ ಸೊಪ್ಪು ತರಲೆಂದು ಹಪ್ಪನಡ್ಕ ಹೊಳೆ ಬದಿಗೆ ಹೋದಾಗ ಮರದ ಕೊಂಬೆಯಲ್ಲಿ ಧನುಶ್ ಶವ ನೇತಾಡುತ್ತಿರುವುದು ಕಂಡುಬಂತು. ಶಾಲೆಯಿಂದ ಉಳಿದ ಮಕ್ಕಳು ಪ್ರವಾಸಕ್ಕೆ ಹೋಗಿದ್ದು, ಧನುಶ್ ಹೋಗಿರಲಿಲ್ಲ. ಈ ದುಃಖದಲ್ಲಿ ಆತ್ಮಹತ್ಯೆ ಮಾಡಿಕೊಂಡಿರಬೇಕು ಎನ್ನಲಾಗಿದೆ. ಅಜೆಕಾರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.



















