‘ಕ್ರೈಸ್ಥ’ ಧರ್ಮವನ್ನು ಪಾಲಿಸುವ ಕ್ರಿಶ್ಚಿಯನ್ ವ್ಯಕ್ತಿಗಳ ಆಸ್ತಿಯ ಕುರಿತು ವಾರಿಸುತನದ ಹಕ್ಕನ್ನು ನಿರ್ಧರಿಸುವ ಸಂದರ್ಭದಲ್ಲಿ “ಭಾರತೀಯ ವಾರಿಸು ಅಧಿನಿಯಮ 1925” ಅನ್ವಯವಾಗುತ್ತದೆ.
ಕ್ರಿಶ್ಚಿಯನ್ನರಲ್ಲಿ ‘ಅವಿಭಕ್ತ ಕುಟುಂಬ’ ಅಥವಾ ‘ಪಿತ್ರಾರ್ಜಿತ ಆಸ್ತಿ’ ಇವುಗಳ ಪರಿಕಲ್ಪನೆ ಇರುವುದಿಲ್ಲ. ಕ್ರಿಶ್ಚಿಯನ್ ವ್ಯಕ್ತಿಯು ಯಾವುದೇ ಸ್ವರೂಪ ಅಥವಾ ಮೂಲದಿಂದ ಆಸ್ತಿಯನ್ನು ಹೊಂದುವ ಸಂದರ್ಭದಲ್ಲಿ ಅದು ಆತನ ಸ್ವಯಾರ್ಜಿತ ಆಸ್ತಿ ಎಂದು ಪರಿಗಣಿಸಬೇಕಾಗುತ್ತದೆ. ಈ ಕಾರಣದಿಂದ ಒಬ್ಬ ಕ್ರಿಶ್ಚಿಯನ್ ವ್ಯಕ್ತಿ ತನ್ನ ಜೀವಿತಾವಧಿಯಲ್ಲಿ ತನ್ನ ಹೆಸರಿನಲ್ಲಿರುವ ಯಾವುದೇ ಮತ್ತು ಎಲ್ಲಾ ಆಸ್ತಿಯ ಮೇಲೆ ಸಂಪೂರ್ಣ ಮಾಲೀಕತ್ವವನ್ನು ಹೊಂದಿ ಅವೆಲ್ಲವನ್ನು ತನ್ನ ಸ್ವಂತ ಇಚ್ಛೆ ಮತ್ತು ನಿರ್ಧಾರದಂತೆ ಪರಾಭಾರೆ ಅಥವಾ ವಿಲೇವಾರಿ ಮಾಡುವ ಹಕ್ಕನ್ನು ಹೊಂದಿರುತ್ತಾನೆ ಮತ್ತು ಈ ಕಾರಣದಿಂದ ಕ್ರಿಶ್ಚಿಯನ್ ವ್ಯಕ್ತಿ ಜೀವಂತವಿರುವಾಗ್ಗೆ ತನ್ನ ಆಸ್ತಿಯ ಹಕ್ಕಿನ ಪರಾಭಾರೆ ಅಥವಾ ವಿಲೇವಾರಿ ಬಗ್ಗೆ ಸೂಕ್ತ ದಾಖಲೆಯನ್ನು ಬರೆಸಿಡದಿದ್ದಲ್ಲಿ, ಜೀವಮಾನದವರೆಗೆ ಆ ವ್ಯಕ್ತಿಯ ಸ್ವಂತ ಹಕ್ಕಿನ ಆಸ್ತಿಯ ಮೇಲೆ ಆತನ/ಆತಳ ಹೆಂಡತಿ/ಗಂಡ, ಮಕ್ಕಳು ಅಥವಾ ಇತರ ಸಂಬಂಧಿಕರಿಗೆ ಯಾವುದೇ ರೀತಿಯಲ್ಲಿ ಹಕ್ಕು ಇರುವುದಿಲ್ಲ. ಆತನ/ಆತಳ ವಾರಿಸುದಾರರು ಆಸ್ತಿಯ ಮೇಲಿನ ವಾರಿಸುತನದ ಹಕ್ಕನ್ನು ಆತನ/ಆತಳ ಮರಣಾನಂತರವೇ ಹೊಂದಲು ಅವಕಾಶ ಇರುತ್ತದೆ.
ಒಬ್ಬ ಕ್ರಿಶ್ಚಿಯನ್ ವ್ಯಕ್ತಿ ತನ್ನ ಜೀವಿತಾವಧಿಯಲ್ಲಿ ಸ್ವಂತ ಇಚ್ಛೆ ಮತ್ತು ನಿರ್ಧಾರದಿಂದ ತನ್ನ ಹೆಸರಿನ ಆಸ್ತಿಯ ವಿಲೇವಾರಿ ತನ್ನ ಜೀವನಾಂತ್ಯದ ನಂತರ ಯಾವ ರೀತಿಯಲ್ಲಿ ಆಗಬೇಕು ಅಥವಾ ತನ್ನ ಆಸ್ತಿಯ ಮುಂದಿನ ವಾರಿಸುದಾರರು ಯಾರಾಗಬೇಕು ಎಂಬ ಬಗ್ಗೆ ಸೂಕ್ತ ವೀಲುನಾಮೆ ಅಥವಾ ಇತರ ಯಾವುದಾದರೂ ಸೂಕ್ತ ದಾಖಲೆಯನ್ನು ಬರೆಸಿಟ್ಟಲ್ಲಿ ಆತನ ಮರಣಾನಂತರ ಆತನ ಆಸ್ತಿಯ ವಿಲೇವಾರಿಯು ಅಂತಹ ದಾಖಲೆಯಲ್ಲಿ ವಿವರಿಸಿದ ಪ್ರಕಾರವೇ ಆಗತಕ್ಕದ್ದು.
ಮೃತ ಕ್ರಿಶ್ಚಿಯನ್ ಪುರುಷನು ಮೃತಪಟ್ಟಲ್ಲಿ ಆತನು ತನ್ನ ವಿಧವೆ ಪತ್ನಿಯನ್ನು ಹಾಗೂ ನೇರ ವಂಶಜರನ್ನು ಹೊಂದಿದ್ದರೆ ಆತನ ಒಟ್ಟು ಆಸ್ತಿಯ ಮೂರನೇ ಒಂದು ಭಾಗಕ್ಕೆ ಆತನ ವಿಧವೆ ಪತ್ನಿ ಹಾಗೂ ಉಳಿದ ಮೂರನೇ ಎರಡು ಭಾಗಕ್ಕೆ ಆತನ ಎಲ್ಲಾ ನೇರ ವಂಶಜರು ಒಟ್ಟಾಗಿ ಹಕ್ಕುದಾರರಾಗಿರುತ್ತಾರೆ.
ಮೃತನು ತನ್ನ ನೇರ ವಂಶಜರನ್ನು ಹೊಂದಿರದೇ ತನ್ನ ವಿಧವೆ ಪತ್ನಿಯನ್ನು ಮತ್ತು ರಕ್ತ ಸಂಬಂಧಿಗಳನ್ನು ಹೊಂದಿದ್ದಲ್ಲಿ ಆತನ ಒಟ್ಟು ಆಸ್ತಿಯಲ್ಲಿ ಅರ್ಧದಷ್ಟನ್ನು ಆತನ ವಿಧವೆ ಪತ್ನಿ ಮತ್ತು ಉಳಿದ ಅರ್ಧ ಭಾಗಕ್ಕೆ ರಕ್ತ ಸಂಬಂಧಿಗಳು ಒಟ್ಟಾಗಿ ಹಕ್ಕುದಾರರಾಗಿರುತ್ತಾರೆ.
ಮೃತನು ತನ್ನ ಯಾವುದೇ ನೇರ ವಂಶಜರನ್ನು ಮತ್ತು ರಕ್ತ ಸಂಬಂಧಿಗಳನ್ನು ಹೊಂದಿರದೇ ಕೇವಲ ತನ್ನ ವಿಧವೆ ಪತ್ನಿಯನ್ನು ಹೊಂದಿದ್ದಲ್ಲಿ ಆತನ ಸಂಪೂರ್ಣ ಆಸ್ತಿಗೆ ಆಕೆಯೇ ಹಕ್ಕುದಾರರಾಗುತ್ತಾಳೆ.
ಮೃತನ ವಿಧವೆ ಹೆಂಡತಿ, ನೇರ ವಂಶಜರು ಹಾಗೂ ಇತರ ರಕ್ತ ಸಂಬಂಧಿಗಳು ಯಾರೂ ಇಲ್ಲದಿದ್ದಲ್ಲಿ, ಆತನ ಎಲ್ಲಾ ಆಸ್ತಿಯು ಸರಕಾರಕ್ಕೆ ಸೇರುತ್ತದೆ.
ಮೃತ ಕ್ರಿಶ್ಚಿಯನ್ ಮಹಿಳೆಯು ಮೃತಪಟ್ಟಲ್ಲಿ ಕ್ರಿಶ್ಚಿಯನ್ ಪುರುಷನ ಆಸ್ತಿಯನ್ನು ಆತನ ವಿಧವೆ ಹೆಂಡತಿ ಎಷ್ಡು ಪ್ರಮಾಣದಲ್ಲಿ ಮತ್ತು ಯಾವ ವಿಧದಲ್ಲಿ ಪಡೆಯುತ್ತಾಳೆಯೋ ಅದೇ ವಿಧದಲ್ಲಿ ಮೃತ ಕ್ರಿಶ್ಚಿಯನ್ ಮಹಿಳೆಯ ಆಸ್ತಿಯನ್ನು ಆಕೆಯ ಪತಿ ಪಡೆಯುತ್ತಾನೆ.

ಕೆ. ವಿಜೇಂದ್ರ ಕುಮಾರ್
ಹಿರಿಯ ವಕೀಲರು, ಕಾರ್ಕಳ
ಮೊ : 98452 32490/96116 82681