ಸಂಪಾದಕೀಯ : ಅಂಕಗಳೇ ಜೀವನವಲ್ಲ – ಬದುಕು ಅದಕ್ಕಿಂತ ದೊಡ್ಡದು

ಇಂದು ಎಸೆಸೆಲ್ಸಿ ಪರೀಕ್ಷೆಯ ಫಲಿತಾಂಶ. ರಾಜ್ಯದಾದ್ಯಂತ ಪರೀಕ್ಷೆ ಬರೆದ 8.5 ಲಕ್ಷ ವಿದ್ಯಾರ್ಥಿಗಳು ಬಹಳ ಕಾತರತೆಯಿಂದ ಫಲಿತಾಂಶಕ್ಕಾಗಿ ಕಾಯುತ್ತಿದ್ದಾರೆ. ಈ ಬಾರಿ ಮಕ್ಕಳ ವಾಟ್ಸಪ್ ನಂಬರಿಗೆ ಎಸೆಸೆಲ್ಸಿ ಬೋರ್ಡ್ ಫಲಿತಾಂಶವನ್ನು ಮೆಸೇಜ್ ಮಾಡುವುದರ ಮೂಲಕ ಇನ್ನಷ್ಟು ಅನುಕೂಲ ಮಾಡಿಕೊಟ್ಟಿದೆ.

ಕೋರೋನಾ ಸಂತ್ರಸ್ತ ಬ್ಯಾಚ್ ಇದು !
ಈ ಬಾರಿಯ ಎಸೆಸೆಲ್ಸಿ ಬ್ಯಾಚ್ ನಿಜವಾದ ಅರ್ಥದಲ್ಲಿ ಕೊರೋನ ಸಂತ್ರಸ್ತ ಬ್ಯಾಚ್ ಎಂದು ಕರೆಯಲ್ಪಟ್ಟಿದೆ. ಈ ಬ್ಯಾಚಿನ ವಿದ್ಯಾರ್ಥಿಗಳಿಗೆ ಎಂಟು, ಒಂಬತ್ತು ತರಗತಿಯಲ್ಲಿ ಸರಿಯಾಗಿ ಪಾಠಗಳು ಆಗಿಲ್ಲ. ಪರೀಕ್ಷೆಯೂ ಆಗಿರಲಿಲ್ಲ. ಅದು ಎಲ್ಲರಿಗೂ ಗೊತ್ತಿದೆ. ಅದರಿಂದ ವಿದ್ಯಾರ್ಥಿ ಸ್ನೇಹಿ ಪ್ರಶ್ನೆ ಪತ್ರಿಕೆ ನೀಡಲಾಗಿತ್ತು. ಮೌಲ್ಯಮಾಪನದಲ್ಲಿ ಕೂಡ ಹೆಚ್ಚು ಸಪೋರ್ಟ್ ಮಾಡಿ ಉತ್ತರ ಪತ್ರಿಕೆ ತಿದ್ದಲಾಗಿದೆ ಎನ್ನುವ ವರದಿ ಬಂದಿದೆ. ಅದರ ಜೊತೆಗೆ ಎಸೆಸೆಲ್ಸಿ ಬೋರ್ಡ್ ಕೂಡ 10 ಅಂಕಗಳ ಗ್ರೇಸ್ ಅಂಕ ಕೊಡುವ ತೀರ್ಮಾನ ಮಾಡಿದ್ದು, ಈ ಬಾರಿ ರಾಜ್ಯದಲ್ಲಿ 90 % ಫಲಿತಾಂಶ ನಿರೀಕ್ಷೆ ಮಾಡಬಹುದಾಗಿದೆ. ಹಾಗೇನಾದರೂ ಆದರೆ ಈ ಫಲಿತಾಂಶವು ಸಾರ್ವಕಾಲಿಕ ದಾಖಲೆ ಬರೆಯಲಿದೆ. ನ್ಯೂಸ್ ಕಾರ್ಕಳ ಫಲಿತಾಂಶಕ್ಕೆ ಕಾಯುತ್ತಿರುವ ಎಲ್ಲ ಮಕ್ಕಳಿಗೂ ಶುಭ ಕೋರುತ್ತಿದೆ.

ಅಂಕಗಳೆ ಬದುಕು ಅಲ್ಲ ! ಬದುಕು ಅದಕ್ಕಿಂತ ದೊಡ್ಡದು
ಎಸೆಸೆಲ್ಸಿ ಪರೀಕ್ಷೆಯು ನಿಮ್ಮ ಶೈಕ್ಷಣಿಕ ಪಥದಲ್ಲಿ ಒಂದು ನಿಲ್ದಾಣ ಮಾತ್ರ. ಅದೇ ಅಂತಿಮ ಅಲ್ಲ. ಯಾವುದಾದರೂ ಕಾರಣಕ್ಕೆ ಕಡಿಮೆ ಅಂಕ ಬಂದಿದ್ದರೆ ದುಃಖ ಪಡುವ ಅಗತ್ಯವಿಲ್ಲ. ನಿಮ್ಮ ಶಾಲೆಯನ್ನು ಸಂಪರ್ಕ ಮಾಡಿ ನಿಮ್ಮ ಉತ್ತರ ಪತ್ರಿಕೆಯ ಛಾಯಾಪ್ರತಿ ( ಜೆರಾಕ್ಸ್ ಪ್ರತಿ) ತರಿಸುವ ಅವಕಾಶ ಇದೆ. ಅಲ್ಲಿಯೂ ನ್ಯಾಯ ಸಿಗದೆ ಇದ್ದರೆ ನಿಮ್ಮ ಉತ್ತರ ಪತ್ರಿಕೆಯ ಪುನರ್ ಮೌಲ್ಯಮಾಪನ ಮಾಡಿಸುವ ಅವಕಾಶವಿದೆ. ಈ ಎರಡೂ ಅವಕಾಶವನ್ನು ನೀವು ದಯವಿಟ್ಟು ಉಪಯೋಗ ಮಾಡಿಕೊಳ್ಳಿ.
ಇಷ್ಟೆಲ್ಲ ಮಾಡಿಯೂ ಅಂಕಗಳು ಕಡಿಮೆ ಆದರೆ ವ್ಯಥೆ ಪಡುವ ಅಗತ್ಯ ಇಲ್ಲ. ಅಥವಾ ಅಳುತ್ತ ಕುಳಿತುಕೊಳ್ಳಬೇಡಿ. ಒಂದೊಮ್ಮೆ ಫಲಿತಾಂಶ ಫೇಲ್ ಆಗಿದ್ದರೆ ಜೂನ್ ತಿಂಗಳ ಅಂತ್ಯದಲ್ಲಿ ಮತ್ತೆ ಪೂರಕ ಪರೀಕ್ಷೆ ಇದೆ. ಒಂದೂವರೆ ತಿಂಗಳಲ್ಲಿ ಮತ್ತೆ ಓದಿ ಪಾಸ್ ಮಾಡಬಹುದಾಗಿದೆ. ನೀವು ಇದೇ ವರ್ಷ ಕಾಲೇಜು ಸೇರಬಹುದು. ನಿಮ್ಮ ಒಂದು ವರ್ಷ ವ್ಯರ್ಥ ಆಗುವುದಿಲ್ಲ.

ಎಸೆಸೆಲ್ಸಿ ಪರೀಕ್ಷೆಯಲ್ಲಿ ಫೇಲ್ ಆದವರು ಅನೇಕರು ಮುಂದೆ ಜೀವನದಲ್ಲಿ ಬಹು ದೊಡ್ಡ ಸಾಧನೆ ಮಾಡಿದ್ದಾರೆ!
ಕನ್ನಡದ ಖ್ಯಾತ ಪತ್ರಕರ್ತ ರವಿ ಬೆಳಗೆರೆ ಎಸೆಸೆಲ್ಸಿ ಪರೀಕ್ಷೆ ಫೇಲ್ ಆಗಿದ್ದರು. ಮತ್ತೆ ಪಾಸ್ ಆಗಿ ಮುಂದೆ ಪತ್ರಿಕೋದ್ಯಮ ವಿಭಾಗದಲ್ಲಿ ಚಿನ್ನದ ಪದಕದ ಜೊತೆಗೆ ಸ್ನಾತಕೋತ್ತರ ಪದವಿ ಪಡೆದು ಕನ್ನಡವನ್ನು ಬೆಳಗಿದರು.
ನಮ್ಮ ದೇಶದ ಗಣಿತ ಲೆಜೆಂಡ್ ಶ್ರೀನಿವಾಸ್ ರಾಮಾನುಜಂ ಪಿಯುಸಿ ಪ್ರವೇಶ ಪರೀಕ್ಷೆಯಲ್ಲಿ ಫೇಲ್ ಆಗಿದ್ದರು. ಮುಂದೆ ಲಂಡನ್‌ ಗೆ ತೆರಳಿ ಕ್ಯಾಂಬ್ರಿಜ್ ವಿವಿಯಲ್ಲಿ ಓದಿ ಗಣಿತದಲ್ಲಿ ಚಿನ್ನದ ಪದಕದ ಜೊತೆಗೆ ಉನ್ನತ ಪದವಿ ಪಡೆದರು.
ಅಬ್ದುಲ್ ಕಲಾಂ ಅವರು ಪೈಲಟ್ ಪರೀಕ್ಷೆಯಲ್ಲಿ ತೇರ್ಗಡೆ ಆಗಿರಲಿಲ್ಲ. ಆದರೆ, ಮುಂದೆ ಮಹಾ ವಿಜ್ಞಾನಿ, ಅತ್ಯುತ್ತಮ ರಾಷ್ಟ್ರಪತಿ ಆಗಲು ಅವರಿಗೆ ಈ ಸೋಲು ಅಡ್ಡಿ ಆಗಲೇ ಇಲ್ಲ. ಖ್ಯಾತ ಹಿಂದಿ ಸಿನೆಮಾ ನಟ, ನಿರ್ಮಾಪಕ ಅಮೀರ್ ಖಾನ್ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಫೇಲ್ ಆದರು. ಆದರೆ ಮುಂದೆ ಶಿಕ್ಷಣದ ಹುಳುಕುಗಳ ಮೇಲೆ ಅನೇಕ ಪ್ರಸಿದ್ಧ ಸಿನೆಮಾ ಮಾಡಿ ಯಶಸ್ಸು ಕಂಡರು. 10 ತರಗತಿಯಲ್ಲಿ ಫೇಲ್ ಆಗಿದ್ದ ತ.ರಾ.ಸು. ಮುಂದೆ ಕನ್ನಡದಲ್ಲಿ ನೂರಕ್ಕಿಂತ ಹೆಚ್ಚು ಅದ್ಭುತವಾದ ಕಾದಂಬರಿಗಳನ್ನು ರಚಿಸಿದ್ದಾರೆ. ತರಗತಿಯಲ್ಲಿ ಫೇಲ್ ಆಗಿದ್ದ ಧೀರುಬಾಯಿ ಅಂಬಾನಿ ಭಾರತದ ಅತೀ ಶ್ರೇಷ್ಟ ಉದ್ಯಮಿ ಆದರು. ಅಮಿತಾಬ್ ಬಚ್ಚನ್, ರಾಜೀವ್ ಗಾಂಧಿ, ವಾಜಪೇಯಿ, ಆರ್. ಕೆ. ನಾರಾಯಣ್ ಮೊದಲಾದವರು ಒಂದಲ್ಲ ಒಂದು ಪರೀಕ್ಷೆಯಲ್ಲಿ ಫೇಲ್ ಆದವರೆ ಆಗಿದ್ದಾರೆ. ಆದರೆ ಅವರು ಮುಂದೆ ಬದುಕನ್ನು ಕಟ್ಟಿಕೊಂಡ ರೀತಿಯು ಅದ್ಭುತವೇ ಆಗಿತ್ತು. ಇದರ ಅರ್ಥ ನೀವು ಫೇಲ್ ಆಗಬೇಕು ಎಂದಲ್ಲ. ನೀವು ಜಾಣ ಮಕ್ಕಳು. ಖಂಡಿತವಾಗಿಯೂ ಪಾಸ್ ಆಗುತ್ತೀರಿ.

ನಿಮಗೆ ಶುಭವಾಗಲಿ.



































































































































































































































error: Content is protected !!
Scroll to Top