ಕಾರ್ಕಳ : ಮಳೆಗಾಲ ಆರಂಭವಾಗುತ್ತಿದ್ದಂತೆ ಕಾರ್ಕಳ ತಾಲೂಕಿನಲ್ಲಿ ಸಿಡಿಲು ಗುಡುಗಿನ ಅಬ್ಬರ ಜೋರಾಗಿಯೇ ಇದೆ. ಈ ವರ್ಷವಂತೂ ಗುಡುಗಿನ ಆರ್ಭಟ ಜಾಸ್ತಿಯೇ ಗೋಚರಿಸುತ್ತಿದ್ದು ಜನತೆ ಭಯಭೀತಿಗೊಂಡಿದ್ದಾರೆ. ಸಿಡಿಲಿನ ಆಘಾತಕ್ಕೆ ಕಾರ್ಕಳದಲ್ಲಿ ಜೀನಹಾನಿಯಾಗಿದೆ. ಜಾನುವಾರು ಸಾವಿಗೀಡಾಗಿವೆ. ಹಲವೆಡೆ ವಿದ್ಯುತ್ ಪರಿಕರ ಸುಟ್ಟು ಕರಕಲಾಗಿದೆ. ಹೀಗಾಗಿ ಸಿಡಿಲಿನ ತೀವ್ರತೆ ಹೆಚ್ಚಿರುವ ಪ್ರದೇಶಗಳಲ್ಲಿ ಸರಕಾರ ಮಿಂಚುಬಂಧಕ ಅಳವಡಿಸುವುದು ಅತಿ ಅಗತ್ಯವಾಗಿದೆ.
ಕಳೆದ ನಾಲ್ಕೈದು ವರ್ಷದಿಂದೀಚೆಗೆ ಕಾರ್ಕಳ – ಹೆಬ್ರಿ ಪರಿಸರದಲ್ಲಿ ಹಲವಾರು ಮಂದಿ ಸಿಡಿಲಿಗೆ ಬಲಿಯಾಗಿದ್ದಾರೆ. ಇದೇ ತಿಂಗಳ 25ರಂದು ನೂರಾಲ್‌ಬೆಟ್ಟು ಜಾಣಮನೆ ಜಿಗೀಶ್ ಜೈನ್ (41), ಕಳೆದ ವರ್ಷ ನೀರೆ ಗ್ರಾಮದ ವಾದಿರಾಜ ಆಚಾರ್ಯ (65), ಅದಕ್ಕಿಂತಲೂ ಹಿಂದಿನ ವರ್ಷ ಕಾಂತಾವರ ಗ್ರಾಮದ ನೀಲಯ್ಯ (60) ಸಿಡಿಲಾಘಾತಕ್ಕೆ ಸಾವಿಗೀಡಾಗಿದ್ದರು. ಹಲವಾರು ಜಾನುವಾರುಗಳು ಸಿಡಿಲಿನ ಆಘಾತಕ್ಕೆ ಜೀವ ತೆತ್ತಿದ್ದಾವೆ. ಸಾಕಷ್ಟು ವಿದ್ಯುತ್ ಟ್ರಾನ್ಸ್ ಫಾರ್ಮರ್, ವಿದ್ಯುತ್ ಪರಿಕರ ಹಾನಿಗೀಡಾಗಿದೆ.
2013ರಲ್ಲಿ ಅಜೆಕಾರು ಪಂಚಾಯತ್ ಕಾರ್ಯದರ್ಶಿ ರಮೇಶ್ ನಾಯ್ಕ್ ಸಿಡಿಲು ಬಡಿದು ಸಾವಿಗೀಡಾಗಿದ್ದರು. ಅದೇ ವರ್ಷ ಮತ್ತೆರಡು ಜೀವ ಕಾರ್ಕಳದಲ್ಲಿ ಸಿಡಿಲ ಆಘಾತಕ್ಕೆ ಬಲಿಯಾಗಿದೆ. ಇದರಿಂದ ನೊಂದ ಅಂದಿನ ತಹಶೀಲ್ದಾರ್ ಜಗನ್ನಾಥ್ ರಾವ್ ಸಿಡಿಲ ತೀವ್ರತೆ ಇರುವ ಪ್ರದೇಶದಲ್ಲಿ ಮಿಂಚುಬಂಧಕ ಅಳವಡಿಸುವಂತೆ ಅಂದಿನ ಜಿಲ್ಲಾಧಿಕಾರಿಯವರಿಗೆ ಮನವಿ ಮಾಡಿಕೊಂಡಿದ್ದರು. ಅವರ ಪ್ರಯತ್ನದ ಫಲವಾಗಿ ಅಂದು ಕಾರ್ಕಳದ ಮೂರು ಕಡೆ ಮಿಂಚುಬಂಧಕ ಅಳವಡಿಕೆಯಾಗಿತ್ತು.
ಮುನ್ನೆಚ್ಚರಿಕೆ ಅಗತ್ಯ
ಮಳೆ, ಗುಡುಗು ಮುನ್ಸೂಚನೆ ದೊರೆಯುತ್ತಿದ್ದಂತೆ ಮನೆ, ಕಚೇರಿಯ ವಿದ್ಯುತ್ ಹಾಗೂ ಲ್ಯಾಂಡ್ ಲೈನ್ ಸಂಪರ್ಕ ಕಡಿತಗೊಳಿಸಬೇಕು. ಪ್ಲಗ್‌ನಿಂದ ಸಂಪರ್ಕ ತೆಗೆದುಹಾಕಬೇಕು. ವಿದ್ಯುತ್ ಕಂಬದ ಹತ್ತಿರ ಸುಳಿಯಬಾರದು. ಈ ಮೂಲಕ ಸಿಡಿಲಿನಿಂದ ರಕ್ಷಣೆ ಪಡೆಯಬಹುದಾಗಿದೆ ಎಂದು ಮೆಸ್ಕಾಂ ಎಇಇ ದಿಲೀಪ್ ಹೇಳಿದರು.
ಸಿಡಿಲು ಆ್ಯಪ್ ನಿಂದ ಮಾಹಿತಿ
ಸರಕಾರ ಗುಡುಗು ಸಿಡಿಲಿನ ಬಗ್ಗೆ ಸಾರ್ವಜನಿಕರಿಗೆ ಮಾಹಿತಿ ಒದಗಿಸುವ ಸಲುವಾಗಿ sidilu ಆ್ಯಪ್ ಅಭಿವೃದ್ಧಿಪಡಿಸಿದೆ. ಕರ್ನಾಟಕ ರಾಜ್ಯ ವಿಕೋಪ ನಿರ್ವಹಣಾ ಕೇಂದ್ರ ಅಭಿವೃದ್ಧಿಪಡಿಸಿದ್ದು, ಈ ಮೂಲಕ ಸ್ಥಳೀಯ ವ್ಯಾಪ್ತಿಯಲ್ಲಿ ಗುಡುಗು ಬಗ್ಗೆ ನಿಖರ ಮಾಹಿತಿ ಒದಗಿಸುತ್ತಿದೆ. ಸಾರ್ವಜನಿಕರು ತಮ್ಮ ಮೊಬೈಲ್ ಪ್ಲೇಸ್ಟೋರ್‌ನಲ್ಲಿ ಈ ಆ್ಯಪ್ ಡೌನ್‌ಲೋಡ್ ಮಾಡಿಕೊಂಡು ಮಾಹಿತಿ ಪಡೆಯಬಹುದಾಗಿದೆ.