ಬೆಂಗಳೂರು: ಎ. 1 ರಿಂದ ರಾಜ್ಯದ ಎಲ್ಲಾ ಶಾಲೆಗಳಲ್ಲಿ12 ರಿಂದ 14 ವರ್ಷದೊಳಗಿನ ಮಕ್ಕಳಿಗೆ ಕೊರ್ಬಾವ್ಯಾಕ್ಸ್ ಲಸಿಕೆ ನೀಡಲಾಗುತ್ತದೆ ಎಂದು ಆರೋಗ್ಯ ಸಚಿವ ಕೆ ಸುಧಾಕರ್ ತಿಳಿಸಿದ್ದಾರೆ.
ರಾಜ್ಯ ಸರ್ಕಾರವು ಮಾ. 16 ರಿಂದ ಲಸಿಕಾ ಅಭಿಯಾನ ಆರಂಭಿಸಿದ್ದು 20 ಲಕ್ಷ ಮಕ್ಕಳಿಗೆ ಲಸಿಕೆ ನೀಡುವ ಗುರಿ ಹೊಂದಿದೆ. ಆದರೆ ಇದುವರಗೆ ಕೇವಲ 6.3 ಲಕ್ಷ ಮಕ್ಕಳಿಗೆ ಮಾತ್ರ ವ್ಯಾಕ್ಸಿನ್ ನೀಡಲಾಗಿದೆ. 12-14 ವರ್ಷ ವಯಸ್ಸಿನವರಿಗೆ ಕೋವಿಡ್ ಲಸಿಕೆ ಅಭಿಯಾನವು ನಿಧಾನ ಗತಿಯಲ್ಲಿ ನಡೆಯುತ್ತಿರುವುದರಿಂದ ರಾಜ್ಯ ಸರ್ಕಾರ ಎಲ್ಲಾ ಶಾಲೆಗಳಲ್ಲಿ ಲಸಿಕೆ ಹಾಕಲು ನಿರ್ಧರಿಸಿದೆ. 2010 ಮಾ. 28 ರೊಳಗೆ ಜನಿಸಿರುವ ಮಕ್ಕಳು ಲಸಿಕೆ ಪಡೆಯಲು ಅರ್ಹರಾಗಿರುತ್ತಾರೆ ಎಂದು ಹೇಳಿದ್ದಾರೆ.
ಅರ್ಹ ಮಕ್ಕಳಿಗೆ ಲಸಿಕೆ ಹಾಕುವ ದಿನಾಂಕವನ್ನು ಮುಂಚಿತವಾಗಿ ತಿಳಿಸಲು ಆರೋಗ್ಯ ಮತ್ತು ಶಿಕ್ಷಣ ಇಲಾಖೆಗಳು ಜಂಟಿಯಾಗಿ ಮೈಕ್ರೋ ಪ್ಲಾನಿಂಗ್ ಅಭಿಯಾನವನ್ನು ಕೈಗೊಳ್ಳಲಿವೆ. ಶಾಲೆಯಿಂದ ಹೊರಗುಳಿದ ಮಕ್ಕಳಿಗೆ ಕೋವಿಡ್ ಲಸಿಕೆ ಹಾಕಲು, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಗೆ ವಿವರಗಳನ್ನು ನೀಡುವಂತೆ ಶಿಕ್ಷಣ ಇಲಾಖೆಗೆ ಸರ್ಕಾರ ಸೂಚಿಸಿದೆ. ಶಾಲೆಗಳಲ್ಲಿನ ಲಸಿಕಾ ಕೇಂದ್ರಗಳಲ್ಲಿ ವೀಕ್ಷಣಾ ಕೊಠಡಿ ಸೇರಿದಂತೆ ಮೂರು ಕೊಠಡಿಗಳನ್ನು ಅಳವಡಿಸಿ, ಮಾಸ್ಕ್ ಧರಿಸುವುದು, ಸ್ಯಾನಿಟೈಸರ್ ಬಳಸುವುದು ಮತ್ತು ಕೋವಿಡ್ ನಿಯಮ ಅನುಸರಿಸುವುದು ಕಡ್ಡಾಯವಾಗಿದೆ. ನೋಂದಣಿಗಾಗಿ ಪೋಷಕರ ದೂರವಾಣಿ ಸಂಖ್ಯೆಯನ್ನು ಬಳಸಬೇಕು ಮತ್ತು ಪೋಷಕರು ಮೊಬೈಲ್ ಫೋನ್ ಹೊಂದಿಲ್ಲದಿದ್ದಲ್ಲಿ ಮುಖ್ಯೋಪಾಧ್ಯಾಯರ ಫೋನ್ ಸಂಖ್ಯೆಯನ್ನು ಬಳಸಬೇಕು ಎಂದು ಸುತ್ತೋಲೆಯಲ್ಲಿ ತಿಳಿಸಲಾಗಿದೆ.

ಶಾಲೆಯಿಂದ ನೀಡಿದ ಗುರುತಿನ ಚೀಟಿ ಅಥವಾ ಆಧಾರ್ ಕಾರ್ಡ್ ಅನ್ನು ಲಸಿಕೆ ಪಡೆಯುವ ವೇಳೆ ಪುರಾವೆಯಾಗಿ ಬಳಸಬೇಕು. ನೋಂದಣಿ ಆನ್‌ಲೈನ್‌ನಲ್ಲಿ ನಡೆಯಲಿದ್ದು ಪೋಷಕರ ಅನುಮತಿ ಕಡ್ಡಾಯವಾಗಿದೆ ಎಂದು ತಿಳಿಸಿದರು.




























