“ಸಾರ್ವಭೌಮತೆ ನಾಲ್ಕು ಗುಣಕೆ ಗುಣರಾಜ್ಯದಲಿ|
ಧೈರ್ಯ ಮೊದಲಿನದೆರಡನೆಯದು ಮತಿಯೋಜೆ||
ಸರ್ವದಯೆ ಮೂರನೆಯದದುವೆ ನೀತಿಯ ಮೂಲ|
ನಿರ್ಮಮತ್ವವೆ ಮುಕುಟ-ಮಂಕುತಿಮ್ಮ|”.

ನಮ್ಮಲ್ಲಿರುವ ಅನೇಕ ಗುಣಗಳಲ್ಲಿ ಪ್ರಾಮುಖ್ಯತೆಯನ್ನು ಪಡೆದ ಅತ್ಯುತ್ತಮ ಗುಣಗಳು ನಾಲ್ಕು ಮಾತ್ರ.ಅದರಲ್ಲಿ ಮೊದಲನೆಯದು ಧೈರ್ಯ.ಎರಡನೆಯದು ನಮ್ಮ ಬುದ್ಧಿಶಕ್ತಿ. ಮೂರನೆಯದು ನೀತಿಗೆ ಮೂಲವಾದ ಎಲ್ಲಾ ಪ್ರಾಣಿಗಳ ಮೇಲೂ ಕರುಣೆತೋರುವ ಸರ್ವದಯಾ ಗುಣ.ಉಳಿದೆಲ್ಲಾ ಗುಣಗಳಿಗೂ ಕಿರೀಟಪ್ರಾಯವಾದ ನಾಲ್ಕನೆಯ ಗುಣವೆಂದರೆ ನಿರ್ಮಮತೆ ಎಂದು ಮಾನ್ಯ ಡಿವಿಜಿ ಯವರು ನಮ್ಮಲ್ಲಿ ಅಗತ್ಯವಾಗಿ ಇರಬೇಕಾದ ಶ್ರೇಷ್ಠ ಗುಣಗಳ ಬಗ್ಗೆ ಈ ಮುಕ್ತಕದಲ್ಲಿ ಹೇಳಿದ್ದಾರೆ.
'ಧೈರ್ಯಂ ಸರ್ವತ್ರ ಸಾಧನಂ' ಎಂಬಂತೆ ಬದುಕನ್ನು ಗೆಲ್ಲಲು ಬೇಕಾದ ಪ್ರಧಾನ ಶಕ್ತಿ ಧೈರ್ಯ. ಧೈರ್ಯ ಇಲ್ಲದಿದ್ದರೆ ನಮ್ಮಲ್ಲಿರುವ ಯಾವ ಶಕ್ತಿಯನ್ನು ಉಪಯೋಗಿಸಲಾಗದು.ಯಾವಾತನು ಸಂಕಷ್ಟದಲ್ಲಿ ತನ್ನ ಸ್ವರೂಪವನ್ನು ಬಿಡುವುದಿಲ್ಲವೊ ಅವನೇ ಧನ್ಯ.ಸೂರ್ಯನ ಕಿರಣಗಳಿಂದ ಮಂಜುಗಡ್ಡೆ ಕರಗಿದರೂ ಅದು ತನ್ನ ಶೈತ್ಯ ಗುಣವನ್ನು ಬಿಡುವುದಿಲ್ಲ ಹಾಗೆಯೇ ನಾವು ಕೂಡ ಆಪತ್ತಿನಿಂದ ಸ್ವಲ್ಪ ವಿಚಲಿತವಾಗಬಹುದು! ಆದರೆ ಧೈರ್ಯ ಕೆಡದೆ ಅದರಿಂದ ಪಾರಾಗುವ ಚಿಂತನೆಯನ್ನು ನಡೆಸಬೇಕು.ನಮಗೆಲ್ಲಾ ಆದರ್ಶಪ್ರಾಯರಾದ ರಾಮನಾಗಲಿ, ಧರ್ಮರಾಯನಾಗಲಿ ತಮಗೆದುರಾದ ಆಪತ್ತುಗಳಿಗೆ ಎದೆಗುಂದದೆ ವಿವೇಕದಿಂದ ಯೋಚಿಸಿ ಕಾರ್ಯಪ್ರವೃತ್ತರಾಗಿ ಯಶಸ್ಸನ್ನು ಕಂಡವರಾಗಿದ್ದಾರೆ. ಹೀಗೆ ಧೈರ್ಯ ಎಲ್ಲಾ ಒಳಿತಿಗೂ ಪ್ರಮುಖ ಸಾಧನವಾಗಿರುವುದರಿಂದ ಅದು ಮೊದಲನೆಯದಾಗಿ ನಮ್ಮಲ್ಲಿರಬೇಕು ಎಂದಿದ್ದಾರೆ.
ಎರಡನೆಯದಾಗಿ ಯಾವುದಾದರೂ ವಿಷಯವನ್ನು ವಿವೇಚಿಸುವ, ನಿರ್ಣಯಿಸುವ,ತಿಳಿದುಕೊಳ್ಳುವ ಮತ್ತು ಅರ್ಥಮಾಡಿಕೊಳ್ಳುವ ಬುದ್ಧಿಶಕ್ತಿಯು ನಮ್ಮಲ್ಲಿರಬೇಕಾಗುತ್ತದೆ. ‘ಬುದ್ದಿಯಲಿ ತನುಮನವ ತಿದ್ದಿಕೊಳುತಿರಬೇಕು’ ಎಂಬ ದಾಸವಾಣೆಯಂತೆ ನಮ್ಮ ದೇಹ ಮತ್ತು ಮನಸ್ಸನ್ನು ತಿದ್ದುವ ಬುದ್ದಿಶಕ್ತಿ ಸದಾ ಜಾಗೃತವಾಗಿರಬೇಕು.ಅನೇಕ ಸಂದರ್ಭದಲ್ಲಿ ನಾವೇನಾದರೂ ತಪ್ಪು ಮಾಡಿದಾಗ ‘ನಿನಗೇನು ಬುದ್ದಿಯಿಲ್ಲವಾ?’ ಅಂತ ಪ್ರಾಜ್ಞರು ಕೇಳುತ್ತಾರೆ. ಬುದ್ದಿ ಇದ್ದರೆ ಸಾಲದು ಅದನ್ನು ಸರಿಯಾಗಿ ಸಕಾಲಕ್ಕೆ ಬಳಸಬೇಕು.
ಮೂರನೆಯದಾದ ‘ಸರ್ವದಯೆ’ ,ಅಂದರೆ ಎಲ್ಲಾ ಜೀವಿಗಳ ಮೇಲಿರುವ ಕರುಣೆ. ಸಮಾನತೆಯ ಸಂದೇಶ ಸಾರಿದ ಮಾನತಾವಾದಿ ಬಸವಣ್ಣ “ದಯವಿಲ್ಲ ಧರ್ಮವದಾವುದಯ್ಯ,ದಯವೇ ಬೇಕು ಸಕಲ ಪ್ರಾಣಿಗಳೆಲ್ಲರಲ್ಲಿಯೂ ,ದಯವೇ ಧರ್ಮದ ಮೂಲವಯ್ಯ,ಕೂಡಲ ಸಂಗಯ್ಯನಂತಲ್ಲದೊಲ್ಲನಯ್ಯ” ಎಂಬ ವಚನದಲ್ಲಿ ದಯೆಯ ಮಹತ್ವವನ್ನು ಸುಂದರವಾಗಿ ತಿಳಿಸಿದ್ದಾರೆ. ಮಾನವೀಯತೆ ಹುಟ್ಟುವುದು ದಯಾಮಯವಾದ ಮನಸ್ಸಿನಿಂದ ಮಾತ್ರ ಸಾಧ್ಯ.ವಿಶ್ವದ ಎಲ್ಲಾ ಧರ್ಮಗಳ ಸಾರವಾಗಿರುವ ದಯೆ ಎಂಬ ಅಂತಃಕರಣ ಜಗತ್ತಿನಲ್ಲಿರುವ ಎಲ್ಲರ ಜೀವನಾಡಿಗಳಲ್ಲಿ ಹರಿದಾಗ ಜೀವನ ನಂದನವಾಗುವುದು.
ಮೇಲೆ ಹೇಳಿದ ಮೂರೂ ಗುಣಗಳಿಗೂ ಕಿರೀಟಪ್ರಾಯವಾದುದು ನಾಲ್ಕನೆಯ ಗುಣವಾದ ನಿರ್ಮಮತೆ ಅಂದರೆ ಯಾವುದೇ ಮೋಹಕ್ಕೆ ಒಳಗಾಗದಿರುವುದು.ತನ್ನದು ಎನ್ನುವ ಸಂಕುಚಿತ ಮನೋಭಾವದಿಂದ ಹೊರಬಂದು ಸಕಲ ಜೀವರಾಶಿಗಳಲ್ಲಿಯೂ ಪರಬ್ರಹ್ಮನನ್ನೇ ಕಾಣುವಂತಾಗಬೇಕು.ಮೋಹ ಮಮತೆ ಮಮಕಾರಗಳ ಬಂಧನವಿಲ್ಲದೆ ಪರಿಶುದ್ಧರಾಗಿ ಬದುಕಿನಲ್ಲಿ ಮುನ್ನಡೆದಾಗಲೇ ಜೀವನ ಸಾರ್ಥಕವಾಗುವುದಲ್ಲವೆ?

ಅಧ್ಯಕ್ಷರು, ಸಾಹಿತ್ಯ ಪರಿಷತ್ ಕಾರ್ಕಳ ಘಟಕ











