ಕಾರ್ಕಳ : ಜೀವನದಲ್ಲಿ ಮೌಲ್ಯ ಅನುಸರಿಸಬೇಕೇ ಹೊರತು ಹಣವನ್ನಲ್ಲ. ಇಂದಿನ ಯಾಂತ್ರಿಕ ಬದುಕಿನಲ್ಲಿ ಭಾವನೆಗೆ ಬೆಲೆ ಇಲ್ಲದಾಗಿದೆ ಎಂದು ಶ್ರೀ ಕ್ಷೇತ್ರ ಕೇಮಾರು ಸಾಧನಾಶ್ರಮದ ಶ್ರೀ ಈಶ ವಿಠಲದಾಸ ಸ್ವಾಮೀಜಿ ನುಡಿದರು.
ಅವರು ಜ. 11ರಂದು ಶ್ರೀ ಭಕ್ತವತ್ಸಲ ಅಯ್ಯಪ್ಪ ಸೇವಾ ಸಮಿತಿ ಮುರತ್ತಂಗಡಿ- ಸಾಣೂರು ವತಿಯಿಂದ ನಡೆದ ಅಯ್ಯಪ್ಪ ಸ್ವಾಮಿ ಮಹಾಪೂಜೆ, ಗಣೇಶ್ ಶೆಟ್ಟಿ ಅವರ 25ನೇ ವರ್ಷದ ಶಬರಿಮಲೆ ಯಾತ್ರೆ ಪ್ರಯುಕ್ತ ನಡೆದ ಗುರುವಂದನಾ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದರು.
ವಿದೇಶಿಗರು ನಮ್ಮ ಸಂಸ್ಕೃತಿ ಅನುಸರಿಸುತ್ತಿರುವ ಈ ಸಮಯದಲ್ಲಿ ನಾವು ನಮ್ಮ ಸಂಸ್ಕೃತಿಯನ್ನು ಮರೆಯುವ ಘಟ್ಟದಲ್ಲಿದ್ದೇವೆ. ನಮ್ಮ ಸಂಸ್ಕೃತಿ-ಸಂಸ್ಕಾರ ರೂಢಿಸಿಕೊಳ್ಳವುದು ಅಗತ್ಯ. ಮಹಾಕಾವ್ಯಗಳಾದ ರಾಮಾಯಣ-ಮಹಾಭಾರತ ಕೇವಲ ದೇವರು, ಧರ್ಮದ ಬಗ್ಗೆ ಮಾತ್ರವಲ್ಲದೇ ದಿನನಿತ್ಯ ನಾವು ಹೇಗೆ ಬದುಕಬೇಕು ಎಂಬುವುದನ್ನು ತಿಳಿಸಿಕೊಡುವುದು ಎಂದು ಸ್ವಾಮೀಜಿ ಹೇಳಿದರು.

ಗಣೇಶ್ ಶೆಟ್ಟಿ ಕಾರ್ಯ ಶ್ಲಾಘನೀಯ
ಒಂದು ಸಾಮಾನ್ಯ ಕುಟುಂಬದಿಂದ ಬಂದಿರುವ ಗಣೇಶ್ ಶೆಟ್ಟಿ ಅವರು ದೂರದ ಗೋವಾದಲ್ಲಿ ಉದ್ಯಮ ನಡೆಸಿ ತನ್ನ ಆದಾಯದ ಒಂದು ಭಾಗವನ್ನು ತನ್ನೂರಿನ ಸಾಮಾಜಿಕ ಕಾರ್ಯಗಳಿಗೆ ತೊಡಗಿಸಿಕೊಂಡಿರುತ್ತಾರೆ. ಧಾರ್ಮಿಕ ಕ್ಷೇತ್ರಕ್ಕೂ ಸಾಕಷ್ಟು ಕೊಡುಗೆ ನೀಡುತ್ತ ಬಂದಿರುವ ಅವರು ಗುರುವಂದನೆ ಸಲ್ಲಿಸುವ ಮೂಲಕ ತನ್ನ ಶಿಕ್ಷಕರಿಗೆ ವಿಶೇಷ ಗೌರವ ಸಲ್ಲಿಸಿದ್ದಾರೆ ಎಂದು. ಅವರ ಕಾರ್ಯ ಶ್ಲಾಘನೀಯವೆಂದು ನಿವೃತ್ತ ಶಿಕ್ಷಕ ರಮಾನಾಥ್ ಶೆಣೈ ಇರ್ವತ್ತೂರು ಹೇಳಿದರು
ನಿವೃತ್ತ ಪ್ರಾಂಶುಪಾಲ ಮಾಧವ್ ಭಟ್ ಮಾತನಾಡಿ, ಗುರುಶಿಷ್ಯರ ಸಂಬಂಧ ಶಿಥಿಲವಾಗುತ್ತಿರುವ ಇಂದಿನ ಸನ್ನಿವೇಶದಲ್ಲಿ ಗುರುವಂದನೆ ಕಾರ್ಯ ಹೆಚ್ಚು ಅರ್ಥಪೂರ್ಣವೆಂದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಆಳ್ವಾಸ್ ವಿದ್ಯಾಸಂಸ್ಥೆ ಆಡಳಿತಾಧಿಕಾರಿ ಬಾಲಕೃಷ್ಣ ಶೆಟ್ಟಿ , ಮನುಷ್ಯ ತಾನು ಹುಟ್ಟಿದ ದಿನ ಮತ್ತೊಂದು ತಾನು ಏಕೆ ಹುಟ್ಟಿದೆ ಎಂದು ಅರ್ಥ ಮಾಡಿಕೊಂಡ ದಿನವನ್ನು ಸದಾ ಸ್ಮರಿಸಬೇಕೆಂದರು.
ಸನ್ಮಾನ
ನಿವೃತ್ತ ಮುಖ್ಯ ಶಿಕ್ಷಕಿ ಕೆ. ಸುಶೀಲ, ನಿವೃತ್ತ ಉಪನ್ಯಾಸಕ ಕೆ.ವಿ. ಭಂಡಾರಿ, ಕೆ. ರಮೇಶ್ ಆಚಾರ್ಯ, ವೆಂಕಟರಾಜ್ ಭಟ್, ಪೆರ್ವಾಜೆ ಪ್ರೌಢ ಶಾಲಾ ಮುಖ್ಯ ಶಿಕ್ಷಕಿ ಹರ್ಷಿಣಿ ವಿಜಯರಾಜ್, ಮಾಧವ ಭಟ್ ಅವರನ್ನು ಸನ್ಮಾನಿಸಲಾಯಿತು.
ಗುರುಸ್ವಾಮಿ ಗಣೇಶ್‌ಶೆಟ್ಟಿ ಸ್ವಾಗತಿಸಿ, ದೀಕ್ಷಿತ್ ಆಚಾರ್ಯ ಸಾಣೂರು ಪ್ರಾರ್ಥಿಸಿದರು. ಮೋಹನ್ ಶೆಟ್ಟಿ ನಿರೂಪಿಸಿ, ಸುನೀಲ್ ಶೆಟ್ಟಿ ವಂದಿಸಿದರು.











