Wednesday, January 26, 2022
spot_img
Homeರಾಜ್ಯಖಾಸಗಿ ಸ್ವಾಮ್ಯದ ಟೆಲಿಕಾಂ ರೀಚಾರ್ಜ್‌ ದರ ವಿಪರೀತ ಏರಿಕೆ - ಗ್ರಾಹಕರಿಗೆ ಹೊರೆ

ಖಾಸಗಿ ಸ್ವಾಮ್ಯದ ಟೆಲಿಕಾಂ ರೀಚಾರ್ಜ್‌ ದರ ವಿಪರೀತ ಏರಿಕೆ – ಗ್ರಾಹಕರಿಗೆ ಹೊರೆ

ಕಾರ್ಕಳ : ಖಾಸಗಿ ಟೆಲಿಕಾಂ ಕಂಪನಿಗಳು ಸಿಮ್ ರೀಚಾರ್ಜ್‌ ದರದಲ್ಲಿ ವಿಪರೀತವಾಗಿ ಹೆಚ್ಚಳ ಮಾಡುತ್ತಿರುವುದು ಗ್ರಾಹಕರಿಗೆ ಹೊರೆಯಾಗಿ ಪರಿಣಮಿಸಿದೆ. 2ಜಿ ಸಿಮ್ ಬಳಕೆದಾರರಿಗಂತೂ ಇದು ಅನಗತ್ಯ ಬರೆಯಾಗಿದೆ. ಪ್ರಮುಖವಾಗಿ ಗ್ರಾಮೀಣ ಪ್ರದೇಶಗಳಲ್ಲಿ ಇಂಟರ್ನೆಟ್ ಬಳಸದ ಶೇ. 30ರಷ್ಟು 2ಜಿ ಸಿಮ್ ಬಳಕೆದಾರರು ಹೆಚ್ಚಿನ ರೀಚಾರ್ಜ್‌ನಿಂದಾಗಿ ಅನಗತ್ಯ ಹಣ ಕಳೆದುಕೊಳ್ಳುವಂತಾಗಿರುವುದು ಗ್ರಾಹಕರ ಅಸಮಾಧಾನಕ್ಕೆ ಕಾರಣವಾಗಿದೆ.

ಆಫರ್‌ ಆಕರ್ಷಣೆ
ಆರಂಭದಲ್ಲಿ ಉಚಿತ ಇಂಟರ್ನೆಟ್, ಕಡಿಮೆ ಕರೆದರ ಮೊದಲಾದ ಆಫರ್‌, ಉತ್ಪಾದನ ವೆಚ್ಚಕ್ಕಿಂತಲೂ ಕಡಿಮೆ ದರ ನಿಗದಿಗೊಳಿಸಿ, ಗ್ರಾಹಕರನ್ನು ತನ್ನತ್ತ ಸೆಳೆದ ಕೆಲವೊಂದು ಖಾಸಗಿ ಸ್ವಾಮ್ಯದ ಟೆಲಿಕಾಂ ಕಂಪೆನಿಗಳು ಇದೀಗ ಏಕಾಏಕಿ ದರ ಏರಿಸುವ ಮೂಲಕ ಗ್ರಾಹಕರ ಆಕ್ರೋಶಕ್ಕೆ ಕಾರಣವಾಗಿದೆ. ಬಹುತೇಕ ಎಲ್ಲ ಖಾಸಗಿ ಕಂಪನಿಗಳು ಸ್ಪರ್ಧೆಗೆ ಬಿದ್ದಂತೆ ದರ ಏರಿಕೆ ಮಾಡುತ್ತಿದ್ದು, ಜನತೆ ಬಿಎಸ್‌ಎನ್‌ಎಲ್‌ನತ್ತ ಮುಖಮಾಡುವಂತೆ ಮಾಡಿದೆ.

ಅನಗತ್ಯ ಹೊರೆ
ಮನೆಯಲ್ಲಿ ಹಿರಿಯರಿರುವ ಕೆಲವೊಂದು ಕುಟುಂಬಗಳಿಗೆ ಕೇವಲ ಇನ್‌ಕಮಿಂಗ್‌ ಕರೆ ಮಾತ್ರ ಅಗತ್ಯವಿರುವುದು. ಈ ಹಿಂದೆ ಅಂತಹ ಗ್ರಾಹಕರು ವಾರ್ಷಿಕ ಕನಿಷ್ಠ ದರ ಪಾವತಿಸಿ, ಸಿಮ್‌ ಜೀವಂತವಾಗಿರಿಸುತ್ತಿದ್ದರು. ಇದೀಗ ಇಂತಹ ಅವಕಾಶ ಸರಕಾರಿ ಸ್ವಾಮ್ಯದ ಬಿಎಸ್‌ಎನ್‌ಎಲ್‌ನಲ್ಲಿ ಮಾತ್ರವಿದೆ. ರೂ. 397 ಪಾವತಿಸಿದಲ್ಲಿ 2 ತಿಂಗಳ ಅನಿಯಮಿತ ಉಚಿತ ಕರೆಯೊಂದಿಗೆ ಇಂಟರ್‌ ನೆಟ್‌ ದೇಟಾದೊಂದಿಗೆ ಒಂದು ವರ್ಷ ಇನ್‌ಕಮಿಂಗ್‌ ಕರೆ ಸ್ವೀಕರಿಸಬಹುದಾಗಿದೆ. ಆದರೆ, ಇಂತಹ ಯಾವುದೇ ಆಫರ್‌ ಖಾಸಗಿ ಸ್ವಾಮ್ಯದ ಕಂಪನಿಯಲ್ಲಿಲ್ಲ.ತಿಂಗಳಿಗೆ ಕನಿಷ್ಠ ಇಂತಿಷ್ಟು ದರ ಪಾವತಿಸಲೇಬೇಕಾಗಿದೆ. ತಪ್ಪಿದ್ದಲ್ಲಿ ಕೆಲದಿನಗಳ ಅನಂತರ ಸಿಮ್‌ ನಿಷ್ಕ್ರಿಯಗೊಳ್ಳುವ ಅಪಾಯವಿದೆ.

ಆಸರೆಯಾಗುತ್ತಿರುವ ಬಿಎಸ್‌ಎಲ್‌ಎಲ್‌
ಖಾಸಗಿ ಕಂಪನಿಗಳು ಮನಬಂದಂತೆ ರೀಚಾರ್ಜ್‌ ದರ ಏರಿಕೆ ಮಾಡಿರುವ ಪರಿಣಾಮ ಇದೀಗ ಗ್ರಾಹಕರು ಸರಕಾರಿ ಸ್ವಾಮ್ಯದ ಬಿಎಸ್‌ಎನ್‌ಎಲ್‌ನತ್ತ ಮೊರೆಯಿಡುತ್ತಿರುವುದು ಅಂಕಿ ಸಂಖ್ಯೆಯಿಂದ ದೃಢವಾಗಿದೆ. ಕಳೆದ ತಿಂಗಳು ಅಂದರೆ ಡಿಸೆಂಬರ್‌ ಒಂದೇ ತಿಂಗಳಲ್ಲಿ 23 ಲಕ್ಷ ಮೊಬೈಲ್‌ ಗ್ರಾಹಕರು ಬಿಎಸ್‌ಎನ್‌ಎಲ್‌ ಚಂದದಾರರಾಗಿದ್ದಾರೆ. ಒಂದೇ ತಿಂಗಳಲ್ಲಿ 1 ಲಕ್ಷಕ್ಕೂ ಅಧಿಕ ಮಂದಿ ಫೈಬರ್‌ ಬ್ರಾಡ್‌ಬ್ಯಾಂಡ್‌ ಸಂಪರ್ಕ ಹೊಂದಿದ್ದಾರೆ. ಈ ಮೂಲಕ ಖಾಸಗಿ ಸ್ವಾಮ್ಯದ ಕಂಪನಿಗಳಿಗೆ ಪೈಪೋಟಿ ನೀಡಿದೆ.

ಸುಧಾರಣೆ ಅಗತ್ಯ
ಖಾಸಗಿ ಕಂಪೆನಿಗಳಿಗೆ ಸ್ಪರ್ಧೆ ನೀಡುವ ನಿಟ್ಟಿನಲ್ಲಿ ಬಿಎಸ್‌ಎನ್‌ಎಲ್‌ ನಿಗಮವನ್ನು ಸರಕಾರ ಮತ್ತಷ್ಟು ಬಲಪಡಿಸುವುದು ಅಗತ್ಯ. ಖಾಸಗಿಯವರ ಲಾಬಿ, ಬೆಳವಣಿಗೆ ದೃಷ್ಟಿಯಿಂದ ಸಾರ್ವಜನಿಕ ವಲಯದ ಬಿಎಸ್‌ಎನ್‌ಎಲ್‌ ಅನ್ನು ಸರಕಾರ ಕಡೆಗಣಿಸಬಾರದು. ಆರೋಗ್ಯಕರ ಸ್ಪರ್ಧೆಯಿಲ್ಲದೇ ಹೋದರೆ ಅಂತಿಮವಾಗಿ ಜನತೆಗೆ ಹೊರೆಯಾಗುವುದು ಖಚಿತ. 4 ಜಿ ಅಳವಡಿಕೆಗಾಗಿ 5 ವರ್ಷಗಳ ಹಿಂದೆಯೇ ಬಿಎಸ್‌ಎನ್‌ಎಲ್‌ ಸುಮಾರು 6 ಸಾವಿರ ಕೋಟಿ ರೂ. ಪರಿಕರ ಖರೀದಿಸಿದ್ದರೂ ಅದಕ್ಕಿನ್ನೂ ಬೇಕಾದ ಅನುಮತಿ ಸರಕಾರದಿಂದ ಸಿಕ್ಕಿಲ್ಲ. ಹೀಗಾಗಿ ಬಿಎಸ್‌ಎನ್‌ಎಲ್‌ 3ಜಿ ಹಂತದಲ್ಲೇ ಕಾರ್ಯನಿರ್ವಹಿಸುತ್ತಿದೆ. ಇದರ ಹೊರತಾಗಿ ಫೈಬರ್ ಬ್ರಾಡ್‌ ಬ್ಯಾಂಡ್‌ ಉತ್ತಮವಾಗಿ ಸೇವೆ ನೀಡುತ್ತಿದೆ. ಅಗತ್ಯ ಸಿಬ್ಬಂದಿ, ಹೊಸ ತಂತ್ರಜ್ಞಾನ ಅಳವಡಿಸಿದಲ್ಲಿ ಬಿಎಸ್‌ಎನ್‌ಎಲ್‌ ಬಲಗೊಂಡು ಗ್ರಾಹಕಸ್ನೇಹಿಯಾಗುವುದರಲ್ಲಿ ಎರಡು ಮಾತಿಲ್ಲ. ಖಾಸಗಿ ಸಂಸ್ಥೆಗಳಿಂತಲೂ ಉತ್ತಮ ಸೇವೆ ನೀಡಬಹುದಾಗಿದೆ. ಸರಕಾರ ಇಚ್ಛಾಶಕ್ತಿ, ಬದ್ಧತೆ ತೋರಿದಲ್ಲಿ ಸಾರ್ವಜನಿಕ ವಲಯದ ಬಿಎಸ್‌ಎನ್‌ಎಲ್‌ ಮತ್ತೆ ತನ್ನ ಗತವೈಭವ ಸಾರುವುದು ನಿಶ್ವಿತ.

>

LEAVE A REPLY

Please enter your comment!
Please enter your name here

Most Popular

Recent Comments

ಧರಣೇಂದ್ರ ಕುಮಾರ್ on ವಿಶ್ವಕ್ಕೆ ಕನಕ: ಕನಕದಾಸ
ಧರಣೇಂದ್ರ ಕುಮಾರ್ on ತುಳಸಿ ಪೂಜೆಯ ಮಹತ್ವ
ಧರಣೇಂದ್ರ ಕುಮಾರ್ on ಕಗ್ಗದ ಸಂದೇಶ
error: Content is protected !!