ಕಸ್ತೂರಿರಂಗನ್‌ ವರದಿ ವಿರೋಧ – ಚುನಾವಣಾ ಗಿಮಿಕ್‌

ಜನರ ಬಗ್ಗೆ ಕಾಳಜಿ ಇದ್ದರೆ ವರದಿ ರದ್ದುಪಡಿಸಿ : ಮುದ್ರಾಡಿ ಮಂಜುನಾಥ ಪೂಜಾರಿ ಆಗ್ರಹ

ಹೆಬ್ರಿ : ವಾಸ್ತವಕ್ಕೆ ವಿರುದ್ಧವಾದ ಕಸ್ತೂರಿರಂಗನ್‌ ವರದಿಯನ್ನು ರಾಜ್ಯ ಸರ್ಕಾರ ವಿರೋಧಿಸುತ್ತದೆ ಎಂದು ಮುಖ್ಯಮಂತ್ರಿ ಹೇಳಿರುವುದು ಮತ್ತು ಮಲೆನಾಡಿನ ಶಾಸಕರು ಕೇಂದ್ರ ಅರಣ್ಯ ಸಚಿವರಿಗೆ ಅಹವಾಲು ಸಲ್ಲಿಸಿರುವುದು ಇದೊಂದು ದೊಡ್ಡ ನಾಟಕ. ಚುನಾವಣಾ ಗಿಮಿಕ್‌, ಪ್ರತಿ ಸಲವೂ ಚುನಾವಣೆ ಹತ್ತಿರ ಬರುವಾಗ ಇಂತಹ ಸುಳ್ಳು ಭರವಸೆಯನ್ನು ನೀಡಿ ಜನರನ್ನು ಮೋಸಗೊಳಿಸಿ ಅತಂತ್ರ ಸ್ಥಿತಿಯಲ್ಲಿರುವ ಕಸ್ತೂರಿ ರಂಗನ್‌ ವರದಿಯ ವ್ಯಾಪ್ತಿಯ ಜನರ ಮತ ಗಿಟ್ಟಿಸುತ್ತಾರೆ. ನಿಜವಾಗಿ ಕೇಂದ್ರ ಸರ್ಕಾರಕ್ಕೆ ಜನರ ಬಗ್ಗೆ ಕಾಳಜಿ ಇದ್ದರೆ ಕೃಷಿ ಮಸೂದೆಯನ್ನು ವಾಪಾಸ್ಸು ಪಡೆದಂತೆ ಕಸ್ತೂರಿರಂಗನ್‌ ವರದಿಯನ್ನು ರದ್ದುಪಡಿಸಲಿ ಎಂದು ಹೆಬ್ರಿ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಮುದ್ರಾಡಿ ಮಂಜುನಾಥ ಪೂಜಾರಿ ಆಗ್ರಹಿಸಿದರು.

ಹೆಬ್ರಿ ಕಾಂಗ್ರೆಸ್‌ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಕಳೆದ ಹಲವು ವರ್ಷಗಳಿಂದ ಸಂಸದರು ಶಾಸಕರು ಮಲೆನಾಡಿನಲ್ಲಿ ಹುಲಿ ಯೋಜನೆ ಅನುಷ್ಠಾನ ಮಾಡಲ್ಲ. ಕಸ್ತೂರಿರಂಗನ್‌ ವರದಿಯನ್ನು ಜಾರಿ ಮಾಡಲು ಬಿಡುವುದಿಲ್ಲ ಎಂದು ಹೇಳುತ್ತಲೇ ಬಂದಿದ್ದಾರೆ. ಆದರೆ ಈ ತನಕ ಅಧಿಕೃತವಾಗಿ ತಿರಸ್ಕಾರ ಮಾಡಿಲ್ಲ. ಕನಿಷ್ಠ ಡೀಮ್ಡ್‌ ಫಾರೆಸ್ಟ್‌ ಸಮಸ್ಯೆಯನ್ನು ಇತ್ಯರ್ಥ ಮಾಡಲು ಬಿಜೆಪಿ ಸರ್ಕಾರಕ್ಕೆ ಸಾಧ್ಯವಾಗಿಲ್ಲ. ಜನರು ಕಷ್ಟಕ್ಕಾಗಿ ತಮ್ಮ ಜಮೀನು ಮಾರಾಟ ಮಾಡಲು ಬಯಸಿದರೆ ಅವರಿಗೆ ಡೀಮ್ಡ್‌ ಫಾರೆಸ್ಟ್‌ ನೆಪ ಮಾಡಿ ನಿರಾಕ್ಷೇಪಣಾ ಪತ್ರ ನೀಡುತ್ತಿಲ್ಲ ಎಂದು ಮಂಜುನಾಥ ಪೂಜಾರಿ ಹೇಳಿದರು.

ಕಾರ್ಕಳ ತಾಲೂಕಿನ ಹಲವು ಕಡೆ ಜಾಗ ಅಕ್ರಮ ಮಾಡಿ ಹಲವು ವರ್ಷಗಳಿಂದ ಕುಳಿತವರಿಗೆ ಒಕ್ಕಲೆಬ್ಬಿಸಲು ತಹಶೀಲ್ಧಾರ್‌ ನೋಟಿಸ್‌ ನೀಡಿದ್ದಾರೆ. ಹೀಗಾದರೇ ಬಿಜೆಪಿಗೆ ಬಡವರ ಬಗ್ಗೆ ಕಾಳಜಿ ಎಲ್ಲಿದೆ. ಈಗ ಜಿಲ್ಲಾ ಪಂಚಾಯಿತಿ ತಾಲೂಕು ಪಂಚಾಯಿತಿ ಚುನಾವಣೆ ಸಮೀಪಿಸುತ್ತಿರುವಾಗ ಕಸ್ತೂರಿರಂಗನ್‌ ವರದಿಗೆ ನಮ್ಮ ವಿರೋಧವಿದೆ ಎಂದು ಜನರನ್ನು ದಾರಿ ತಪ್ಪಿಸುತ್ತಿದ್ದಾರೆ ಎಂದು ಮಂಜುನಾಥ ಪೂಜಾರಿ ದೂರಿದರು.

ಕಾಂಗ್ರೆಸ್‌ ಅಭ್ಯರ್ಥಿ ಮಂಜುನಾಥ ಭಂಡಾರಿ ಅವರಿಗೆ ಮತನೀಡಿ
ವಿಧಾನ ಪರಿಷತ್‌ ಚುನಾವಣೆಯ ಕಾಂಗ್ರೆಸ್‌ ಅಭ್ಯರ್ಥಿ ಮಂಜುನಾಥ ಭಂಡಾರಿ ಅವರಿಗೆ ಹೆಬ್ರಿ ಮತ್ತು ಕಾರ್ಕಳ ಬ್ಲಾಕ್‌ ಕಾಂಗ್ರೆಸ್‌ ವ್ಯಾಪ್ತಿಯ ಕಾಂಗ್ರೆಸ್‌ ಬೆಂಬಲಿತ ಮತ್ತು ಪಕ್ಷೇತರ ಗ್ರಾಮ ಪಂಚಾಯಿತಿ ಸದಸ್ಯರು ನೀಡಿ ಗೆಲ್ಲಿಸುವಂತೆ ಹೆಬ್ರಿ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಮುದ್ರಾಡಿ ಮಂಜುನಾಥ ಪೂಜಾರಿ ಮನವಿ ಮಾಡಿದರು.

ಉಡುಪಿ ಜಿಲ್ಲಾ ಕಾಂಗ್ರೆಸ್‌ ಉಪಾಧ್ಯಕ್ಷ ನೀರೆ ಕೃಷ್ಣ ಶೆಟ್ಟಿ, ಮಹಿಳಾ ಕಾಂಗ್ರೆಸ್‌ ಅಧ್ಯಕ್ಷೆ ರಂಜನಿ ಹೆಬ್ಬಾರ್‌ ಕಬ್ಬಿನಾಲೆ, ಪಂಚಾಯಿತಿರಾಜ್‌ ವಿಭಾಗದ ಅಧ್ಯಕ್ಷೆ ಶಶಿಕಲಾ ಡಿ. ಪೂಜಾರಿ, ಬ್ಲಾಕ್‌ ಕಾಂಗ್ರೆಸ್‌ ಕಾರ್ಯದರ್ಶಿ ಸಂತೋಷ್‌ ಕುಮಾರ್‌ ಉಪಸ್ಥಿತರಿದ್ದರು.

















































error: Content is protected !!
Scroll to Top