ಪವರ್ ಇಲಾಖೆಯಲ್ಲಿ ಸಂಸ್ಕೃತಿ ತರುವ, ಸಂಸ್ಕೃತಿ ಇಲಾಖೆಗೆ ಪವರ್ ತರುವ ಕಾರ್ಯವಾಗಲಿದೆ
ರವೀಂದ್ರ ಕಲಾಕ್ಷೇತ್ರದ ಮೆಟ್ಟಿಲುಗಳಿಗೆ ನಮಸ್ಕರಿಸಿದ ಸಚಿವರು
ಬೆಂಗಳೂರು : ಪ್ರತಿದಿನ ಕನ್ನಡ ಪತ್ರಿಕೆಯೊಂದನ್ನು ಓದುವ ಹಾಗೂ ತಿಂಗಳಿಗೊಂದು ಕನ್ನಡ ಪುಸ್ತಕ ಕೊಂಡು ಓದುವ ಹಾಗೆಯೇ ಎರಡು ತಿಂಗಳಿಗೊಂದು ಕನ್ನಡ ಚಲನಚಿತ್ರ ನೋಡುವ ಅಭ್ಯಾಸ ಮಾಡಿಕೊಂಡರೆ ಆ ಮೂಲಕವೇ ಕನ್ನಡ ಭಾಷೆ ಮತ್ತು ಸಂಸ್ಕೃತಿ ಬೆಳೆಯಲಿದೆ ಎಂದು ಕನ್ನಡ ಮತ್ತು ಸಂಸ್ಕೃತಿ, ಇಂಧನ ಸಚಿವ ವಿ. ಸುನೀಲ್ ಕುಮಾರ್ ಹೇಳಿದ್ದಾರೆ.


ಆ. 11ರಂದು ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದ ಆವರಣದಲ್ಲಿ ಭಾರತಾಂಬೆ ಹಾಗೂ ಕನ್ನಡಾಂಬೆಯ ಭಾವಚಿತ್ರಗಳಿಗೆ ಪುಷ್ಪಾರ್ಚನೆ ಮಾಡುವ ಮೂಲಕ ಇಲಾಖೆ ಸಚಿವರಾಗಿ ಕಾರ್ಯಾರಂಭ ಮಾಡಿದರು.
ಪವರ್ ಇಲಾಖೆಯಲ್ಲಿ ಸಂಸ್ಕೃತಿ ತರುವ, ಸಂಸ್ಕೃತಿ ಇಲಾಖೆಗೆ ಪವರ್ ತುಂಬುವ ಕೆಲಸ ಮಾಡಬೇಕಿದೆ, ಅದನ್ನು ಅತ್ಯಂತ ಪ್ರಾಮಾಣಿಕವಾಗಿ ಮಾಡುತ್ತೇನೆ ಎಂದು ಅವರು ಹೇಳಿದರು. ಎರಡು ಇಲಾಖೆಗಳ ಆಡಳಿತ ಸುಧಾರಣೆಗೆ ಮತ್ತು ಕಾರ್ಯಕ್ರಮಗಳ ಸಮರ್ಥ ಅನುಷ್ಠಾನಕ್ಕೆ ಬೇಕಾಗುವ ಎಲ್ಲಾ ಕ್ರಮಗಳನ್ನು ನಿರ್ದಾಕ್ಷಿಣ್ಯವಾಗಿ ಕೈಗೊಳ್ಳುತ್ತೇನೆ ಎಂದು ಅವರು ಹೇಳಿದರು.

ಇದೇ ಸಂದರ್ಭದಲ್ಲಿ 2019 ಮತ್ತು 20 ನೇ ಸಾಲಿನ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಜಾನಪದಶ್ರೀ ಪ್ರಶಸ್ತಿ ಪುರಸ್ಕೃತೆ ಶ್ರೀಮತಿ ಭೀಮವ್ವ ದೊಡ್ಡ ಬಾಳವ್ವ ಶಿಳ್ಳೆಕ್ಯಾತ ರ, ಹುಟ್ಟು ಬಿ. ವಿ. ಕಾರಂತ ಪ್ರಶಸ್ತಿಗೆ ಆಯ್ಕೆ, ಹೆಚ್.ವಿ. ವೆಂಕಟಸುಬ್ಬಯ್ಯ ಅವರಿಗೆ ಪ್ರಶಸ್ತಿ ಪ್ರದಾನ ಮಾಡಿದರು.
ಆ ನಂತರ ಕಲಾಕ್ಷೇತ್ರದ ಆವರಣದಲ್ಲಿ ಇರುವ ಕನ್ನಡ ಪುಸ್ತಕ ಪ್ರಾಧಿಕಾರದ ಸಿರಿಗನ್ನಡ ಮಾರಾಟ ಮಳಿಗೆಗೆ ಭೇಟಿ ಕೊಟ್ಟು ಕನಕಾವಲೋಕನ, ಪುಸ್ತಕ ಹಾಗೂ ಡಿವಿಜಿ ಅವರ ನೆನಪಿನ ಚಿತ್ರಗಳು ಮತ್ತು ಶಿವರಾಮ ಕಾರಂತರ ನಾಟಕಗಳು ಎಂಬ ಮೂರು ಪುಸ್ತಕಗಳನ್ನು ದುಡ್ಡುಕೊಟ್ಟು ಖರೀದಿ ಮಾಡಿದರು. ಬಳಿಕ ಕ್ಯಾಂಟೀನ್‌ನಲ್ಲಿ ಸಾಹಿತಿ ಮತ್ತು ಕಲಾವಿದರ ಜೊತೆ ಕಾಫಿ ಸೇವಿಸಿದರು.
ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಟಿ .ಎಸ್. ನಾಗಾಭರಣ, ಗಡಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸಿ. ಸೋಮಶೇಖರ್, ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷ ಡಾ. ಎಂ. ಎನ್. ನಂದೀಶ್ ಹಂಚೆ, ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ವಸಂತಕುಮಾರ್ ಬಿ.ವಿ., ಕರ್ನಾಟಕ ಚಲನಚಿತ್ರ ಅಕಾಡೆಮಿ ಅಧ್ಯಕ್ಷ ಸುನಿಲ್ ಪುರಾಣಿಕ್, ಸಂಗೀತ ನೃತ್ಯ ಅಕಾಡೆಮಿ ಅಧ್ಯಕ್ಷ ಆನೂರು ಅನಂತ ಕೃಷ್ಣಶರ್ಮ, ಕರ್ನಾಟಕ ಲಲಿತಕಲಾ ಅಕಾಡೆಮಿ ಅಧ್ಯಕ್ಷ ಮಹಿಂದ್ರ, ವಿಧಾನ ಪರಿಷತ್ ಸದಸ್ಯೆ ತಾರಾ ಅನುರಾಧ, ಕಲಾವಿದೆ ಮಾಳವಿಕಾ ಅವಿನಾಶ್, ಮೈಸೂರು ರಂಗಾಯಣ ನಿರ್ದೇಶಕ ಅಡ್ಡಂಡ ಕಾರ್ಯಪ್ಪ, ಕನಕ ಅಧ್ಯಯನ ಪೀಠದ ಸುಮ್ಮನೆ ಸಮನ್ವಯಾಧಿಕಾರಿ ಎಂ. ಆರ್. ಸತ್ಯನಾರಾಯಣ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕಾರ್ಯದರ್ಶಿ ಜೇ. ರವಿಶಂಕರ್ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

















