ಕಾರ್ಕಳ : ಕಾಂಗ್ರೇಸ್ ಆಡಳಿತಾವಧಿಯಲ್ಲಿ ಮಾಜಿ ಮುಖ್ಯಮಂತ್ರಿ ಎಂ. ವೀರಪ್ಪ ಮೊಯಿಲಿಯವರ ನಾಯಕತ್ವ ಹಾಗೂ ದಿ. ಗೋಪಾಲ ಭಂಡಾರಿಯವರ ಶಾಸಕತ್ವದ ಅವಧಿಯಲ್ಲಿ ಕಾರ್ಕಳ ವಿಧಾನಸಭಾ ಕ್ಷೇತ್ರಾದ್ಯಂತ ಪ್ರತಿ ಗ್ರಾಮ ಗ್ರಾಮಗಳಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರ, ಪ್ರೌಢಶಾಲೆ, ಪದವಿಪೂರ್ವ ಕಾಲೇಜು, ಸರಕಾರಿ ಪ್ರಥಮ ದರ್ಜೆ ಕಾಲೇಜು, ಸ್ನಾತಕೋತ್ತರ ಕೇಂದ್ರ, ಮಹಿಳಾ ಪಾಲಿಟೆಕ್ನಿಕ್, ವಿದ್ಯಾರ್ಥಿ ನಿಲಯಗಳು, ರಸ್ತೆ, ಕ್ರೀಡಾಂಗಣ, ಸಹಸ್ರ ಸಂಖ್ಯೆಯಲ್ಲಿ ಹಕ್ಕುಪತ್ರ, ಮನೆ ನಿವೇಶನಗಳು, ಆಶ್ರಯ ಮನೆಗಳು ಹಾಗೂ ಪುರಸಭಾ ವ್ಯಾಪ್ತಿಯಲ್ಲಿ ಒಳಚರಂಡಿ ಯೋಜನೆ, ಕುಡಿಯುವ ನೀರಿಗಾಗಿ ಮುಂಡ್ಲಿ ಜಲಾಶಯ ಯೋಜನೆ ಮೊದಲಾದ ಅಭಿವೃದ್ಧಿ ಕಾರ್ಯಗಳು ನಡೆದಿದೆ. ಸುಳ್ಳನ್ನೇ ಮನೆದೇವರನ್ನಾಗಿ ಮಾಡಿಕೊಂಡಿರುವ ಬಿಜೆಪಿಯವರಿಗೆ ಈ ಬಗ್ಗೆ ಅರಿವಿಲ್ಲದಿರುವುದು ಅವರ ಅಪ್ರಬುದ್ಧ ನಿಲುವಿನ ಬುದ್ಧಿಮತ್ತೆಗೆ ಸಾಕ್ಷಿಯಾಗಿದೆ ಎಂದು ಕಾರ್ಕಳ ಬ್ಲಾಕ್ ಕಾಂಗ್ರೇಸ್ ಪ್ರಕಟನೆಯಲ್ಲಿ ತಿಳಿಸಿದೆ.
ಸಿಇಟಿ ಮೊಯ್ಲಿ ಕೊಡುಗೆ
ಸಿಇಟಿ ಮೂಲಕ ತುಳಿತಕ್ಕೊಳಗಾದ ಕುಟುಂಬಗಳ ಮಕ್ಕಳೂ ಇಂಜಿನಿಯರಿಂಗ್ ಮತ್ತು ವೈದ್ಯಕೀಯ ಶಿಕ್ಷಣ ಪಡೆಯಲು ಅವಕಾಶ ಕಲ್ಪಿಸುವಂತಾಯಿತು. ಇದು ಮಾಜಿ ಮುಖ್ಯಮಂತ್ರಿ ಎಂ. ವೀರಪ್ಪ ಮೊಯಿಲಿಯವರ ಕೊಡುಗೆ. ಕಾಂಗ್ರೇಸ್ ಪಕ್ಷದ ಸಾಧನೆ ಮತ್ತು ಪಕ್ಷದ ಸ್ವಾಯತ್ತತೆಯನ್ನು ಟೀಕಿಸುವ ಮೊದಲು ಕಾರ್ಕಳ ವಿಧಾನಸಭಾ ಕ್ಷೇತ್ರದಲ್ಲಿ ಕಳೆದ 3 ಶಾಸಕತ್ವದ ಅವಧಿಗಳಲ್ಲಿ ತಾವು ಮಾಡಿದ ಸಾಧನೆಗಳೊಂದಿಗೆ 8. 25 ಕೋಟಿ ರೂ. ವೆಚ್ಚದ ಪಟ್ಟಿಬಾವು ಯೋಜನೆ, 108 ಕೋಟಿ ರೂ. ವೆಚ್ಚದ ಎಣ್ಣೆಹೊಳೆ ಯೋಜನೆ ಲೆಕ್ಕಪತ್ರವನ್ನು ಜನರ ಮುಂದಿಡಬೇಕೆಂದು ಕಾರ್ಕಳ ಬ್ಲಾಕ್ ಕಾಂಗ್ರೆಸ್ ಆಗ್ರಹಿಸಿದೆ.
ಕಾಂಗ್ರೇಸ್ ಯಾವತ್ತೂ ಪ್ರಜಾತಂತ್ರ ವ್ಯವಸ್ಥೆಯಲ್ಲಿ ವಿಶ್ವಾಸವಿರಿಸಿಕೊಂಡು ರಾಜಧರ್ಮದ ಪಥದಲ್ಲಿ ಜನಪರವಾಗಿ ಕಾರ್ಯನಿರ್ವಹಿಸುವುದು. ಕಾಂಗ್ರೆಸ್ನಲ್ಲಿ ಇರುವವರು ಆತ್ಮಸಾಕ್ಷಿಗೆ ಸರಿಯಾಗಿ ಪಕ್ಷದ ತತ್ವ ಸಿದ್ಧಾಂತಗಳನ್ನು ಮತ್ತು ದೇಶದ ಸಾರ್ವಭೌಮತೆಯನ್ನು ಗೌರವಿಸುವ ನಿಷ್ಠಾವಂತ ಕಾರ್ಯಕರ್ತರಾಗಿರುತ್ತಾರೆ. ಕೋಮು ವಿಷಬೀಜ ಬಿತ್ತಿ ಸಮಾಜವನ್ನು ವಿಂಗಡಿಸಿ, ಅಧಿಕಾರದ ಬೇಳೆ ಬೇಯಿಸಿಕೊಳ್ಳುವವರಿಗೆ ಇದು ಅರ್ಥವಾಗಲು ಸಾಧ್ಯವಿಲ್ಲ ಎಂದು ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಸದಾಶಿವ ದೇವಾಡಿಗ, ಪ್ರಧಾನ ಕಾರ್ಯದರ್ಶಿ ಪ್ರಭಾಕರ ಬಂಗೇರಾ ವಿವೇಕಾನಂದ ಶೆಣೈ, ಮಾಜಿ ತಾ.ಪಂ. ಸದಸ್ಯ ಸುಧಾಕರ ಶೆಟ್ಟಿ ಹೇಳಿಕೆಯಲ್ಲಿ ತಿಳಿಸಿದ್ದಾರೆ.









































