ಪ್ರಾಕೃತಿಕ ವಿಕೋಪ ಕುರಿತು ಸಭೆ : ಜೀವಹಾನಿಯಾಗದಂತೆ ಎಚ್ಚರಿಕೆ ವಹಿಸುವಂತೆ ತಹಶೀಲ್ದಾರ್‌ ಸೂಚನೆ

ಕಾರ್ಕಳ : ಮಳೆ, ಗಾಳಿ, ಸಿಡಿಲು ಮೊದಲಾದ ಸಂದರ್ಭಗಳಲ್ಲಿ ತಾಲೂಕಿನ ವಿವಿಧೆಡೆ ಸಂಭವನೀಯ ಪ್ರಾಕೃತಿಕ ವಿಕೋಪಗಳನ್ನು ಎದುರಿಸುವಲ್ಲಿ ಎಲ್ಲ ಇಲಾಖೆಗಳು ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುವಂತೆ ತಹಶೀಲ್ದಾರ್‌ ಪುರಂದರ ಹೆಗ್ಡೆ ತಿಳಿಸಿದರು.
ತಾಲೂಕು ಪಂಚಾಯತ್ ಸಭಾಭವನದಲ್ಲಿ ಬುಧವಾರ ಪ್ರಾಕೃತಿಕ ವಿಕೋಪ ಕುರಿತು ಆಯೋಜಿಸಿದ ಸಭೆಯಲ್ಲಿ ವಿವಿಧ ಇಲಾಖಾಧಿಕಾರಿಗಳ ಜೊತೆ ಸಮಾಲೋಚನೆ ನಡೆಸಿದ ಅವರು ಪ್ರಾಕೃತಿಕ ವಿಕೋಪದಿಂದ ಜೀವಹಾನಿಯಾಗದಂತೆ ಎಚ್ಚರಿಕೆ ವಹಿಸಬೇಕು ಎಂದರು.
ತಾಲೂಕಿನ ಮುಂಡ್ಕೂರು, ಮುಂಡ್ಲಿ, ಇನ್ನಾ, ಸೂಡಾ, ಎಣ್ಣೆಹೊಳೆ ಮೊದಲಾದೆಡೆ ಮಳೆಗಾಲದಲ್ಲಿ ನೀರು ಹರಿದು ತೊಂದರೆಯಾಗುತ್ತದೆ. ಮಳೆಗಾಲದ ಸಂದರ್ಭ ಆ ಪ್ರದೇಶಗಳತ್ತ ಹೆಚ್ಚು ಗಮನ ನೀಡಬೇಕು.
ಆರೋಗ್ಯ ಇಲಾಖೆ ಸಿಬ್ಬಂದಿ ಸೋಂಕು ಹರಡದಂತೆ ಎಚ್ಚರಿಕೆ ವಹಿಸಬೇಕು. ಅಗ್ನಿಶಾಮಕ ದಳ, ಸಣ್ಣ ನೀರಾವರಿ ಇಲಾಖೆ ಸಿಬ್ಬಂದಿ ಈ ದಿಸೆಯಲ್ಲಿ ಜಾಗೃತರಾಗಿರಬೇಕು. ತಾಲ್ಲೂಕು ವ್ಯಾಪ್ತಿಯಲ್ಲಿ ರಸ್ತೆ ಬಿರುಕು ಉಂಟಾಗಿ ವಾಹನ ಸಂಚಾರಕ್ಕೆ ತೊಡಕುಂಟಾಗುವುದನ್ನು ತಪ್ಪಿಸಬೆಕು. ಪ್ರಾಕೃತಿಕ ವಿಕೋಪದಲ್ಲಿ ಮನೆ ಕುಸಿತದಂತಹ ಸಂದರ್ಭದಲ್ಲಿ ತುರ್ತು ಪರಿಹಾರ, ಪರಿಕರ, ಅವಶ್ಯಕತೆಗಳನ್ನು ಲಿಖಿತವಾಗಿ ಕೇಳಿ ತಾಲೂಕು ಆಡಳಿತದಿಂದ ಪಡೆಯಬಹುದು. ಎಲ್ಲ ಇಲಾಖೆಗಳು ದಿನಪೂರ್ತಿ ಸಿದ್ಧರಿರಬೇಕು ತಿಳಿಸಿದರು.
ತಾಲ್ಲೂಕು ಪಂಚಾಯತ್‌ ಕಾರ್ಯನಿರ್ವಹಣಾಧಿಕಾರಿ ಶಶಿಧರ್ ಜಿ.ಎಸ್. ಮಾತನಾಡಿ ಕೋವಿಡ್ ಹಾಗೂ ಪ್ರಾಕೃತಿಕ ವಿಕೋಪ ಇವೆರಡನ್ನೂ ನಾವು ಸಮರೋಪಾದಿಯಲ್ಲಿ ಎದುರಿಸಬೇಕಾಗಿದೆ ಎಂದರು.

ಈಜುಪಟುಗಳ ಮಾಹಿತಿ ನೀಡಿ-ಸಂಪತ್‌ ಕುಮಾರ್
ವೃತ್ತ ನೀರೀಕ್ಷಕ ಸಂಪತ್ ಕುಮಾರ್ ಮಾತನಾಡಿ, ಪ್ರಾಕೃತಿಕ ವಿಕೋಪದಡಿ ಸಂತ್ರಸ್ಥರಾದವರಿಗೆ ಗಂಜಿ ಕೇಂದ್ರ ಮಾಹಿತಿ, ಮಳೆ ನೆರೆಯ ಸಂದರ್ಭ ತಾಲೂಕಿನ ಈಜುಗಾರರ ಮಾಹಿತಿ, ದೋಣಿ ನಡೆಸುವವರ ವಿಳಾಸ, ಸಂಪರ್ಕ ಸಂಖ್ಯೆ ಪೊಲೀಸ್ ಇಲಾಖೆಗೆ ನೀಡಬೇಕು. ಅಧಿಕಾರಿಗಳು ಬದಲಾಗಿದ್ದರೆ ಆ ಸ್ಥಾನದಲ್ಲಿರುವವರ ಮಾಹಿತಿಯನ್ನೂ ಒದಗಿಸುವಂತೆ ಕೇಳಿಕೊಂಡರು. ‌
ಕ್ಲಪ್ತ ಸಮಯದಲ್ಲಿ ಕಾಮಗಾರಿ ಪೂರ್ಣ-ರೂಪಾ ಶೆಟ್ಟಿ
ಪುರಸಭಾ ಮುಖ್ಯಾಧಿಕಾರಿ ರೂಪಾ ಶೆಟ್ಟಿ ಮಾತನಾಡಿ, ಪುರಸಭಾ ವ್ಯಾಪ್ತಿಯಲ್ಲಿ ಒಳಚರಂಡಿ ಕಾಮಗಾರಿ ನಡೆಯುತ್ತಿದ್ದು, ಸಾರ್ವಜನಿಕರಿಗೆ ತೊಂದರೆಯಾಗಬಾರದೆಂಬ ನಿಟ್ಟಿನಲ್ಲಿ ಕ್ಲಪ್ತ ಸಮಯದಲ್ಲಿ ಕಾಮಗಾರಿ ಮುಗಿಸಲಾಗುವುದು ಎಂದರು. ಶಶಿಧರ್‌ ಜಿ.ಎಸ್.‌ ಸಭೆ ನಿರ್ವಹಿಸಿದರು.

























































































































error: Content is protected !!
Scroll to Top