ಮಹಾರಾಷ್ಟ್ರ: ಆಸ್ಪತ್ರೆಯಲ್ಲಿ ಭೀಕರ ಅಗ್ನಿ ದುರಂತ- 10 ಮಕ್ಕಳ ಸಾವು

ಮುಂಬೈ : ಮಹಾರಾಷ್ಟ್ರದ ಆಸ್ಪತ್ರೆಯಲ್ಲಿ ಸಂಭವಿಸಿದ ಭೀಕರ ಬೆಂಕಿ ಅವಘಡದಲ್ಲಿ ಕನಿಷ್ಠ 10 ಮಕ್ಕಳು ಸಾವನ್ನಪ್ಪಿರುವ ಘಟನೆ ಶನಿವಾರ ಮುಂಜಾನೆ ನಡೆದಿದೆ. ಮಹಾರಾಷ್ಟ್ರದ ಭಂಡಾರ ಜಿಲ್ಲೆಯ ಜನರಲ್ ಆಸ್ಪತ್ರೆಯಲ್ಲಿ ಈ ಘಟನೆ ಸಂಭವಿಸಿದ್ದು, ರಾತ್ರಿ 2 ಗಂಟೆ ಸುಮಾರಿಗೆ ನವಜಾತ ಶಿಶುಗಳಿದ್ದ ತೀವ್ರ ನಿಗಾಘಟಕದಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಕೆಲವೇ ನಿಮಿಷಗಳಲ್ಲಿ ಬೆಂಕಿಯ ಕೆನ್ನಾಲಿಗೆ ಇಡೀ ವಾರ್ಡ್‌ ವ್ಯಾಪಿಸಿದ್ದು, ವಾರ್ಡ್ ನಲ್ಲಿದ್ದ 10 ಮಕ್ಕಳು ಸಾವನ್ನಪ್ಪಿದ್ದಾರೆ.
ಬೆಂಕಿ ಗೋಚರವಾಗುತ್ತಿದ್ದಂತೆಯೇ ಆಸ್ಪತ್ರೆ ಸಿಬ್ಬಂದಿ ಬೆಂಕಿ ನಂದಿಸುವ ಕಾರ್ಯಕ್ಕೆ ಮುಂದಾದರು. ಅಲ್ಲದೆ ಶಿಶುಗಳನ್ನು ಬೇರೆಡೆ ರವಾನೆ ಮಾಡುವ ಕಾರ್ಯ ಮಾಡಿದರಾದರೂ, ಅಷ್ಟೊತ್ತಿಗಾಗಲೇ ಬೆಂಕಿ ಕ್ಷಣಮಾತ್ರದಲ್ಲಿ ಇಡೀ ವಾರ್ಡ್ ವ್ಯಾಪಿಸಿತು. ಸಿಬ್ಬಂದಿಗಳ ಹರಸಾಹಸದಿಂದಾಗಿ 7 ಮಕ್ಕಳನ್ನು ರಕ್ಷಿಸಲಾಗಿದೆ. ಮೃತಪಟ್ಟ ಮಕ್ಕಳು ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು ಎಂದು ಸ್ಥಳೀಯ ಪೊಲೀಸರು ಮಾಹಿತಿ ನೀಡಿದ್ದಾರೆ.
ಬೆಂಕಿ ಕಾಣಿಸಿಕೊಳ್ಳಲು ನಿಖರವಾದ ಕಾರಣ ಇನ್ನಷ್ಟೇ ತಿಳಿದುಬರಬೇಕಷ್ಟೇ. ಮೇಲ್ನೋಟಕ್ಕೆ ಶಾರ್ಟ್ ಸರ್ಕ್ಯೂಟ್ ಆಗಿರಬಹುದು ಎಂದು ಹೇಳಲಾಗುತ್ತಿದೆ. ಈ ಕುರಿತು ತನಿಖೆ ನಡೆಸಲಾಗುವುದು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.















































































error: Content is protected !!
Scroll to Top