ಶಿವಮೊಗ್ಗ, ಡಿ.4: ಶಿವಮೊಗ್ಗದಲ್ಲಿ ಗುರುವಾರ ಬಜರಂಗ ದಳದ ಕಾರ್ಯಕರ್ತರೊಬ್ಬರ ಮೇಲೆ ಮರಣಾಂತಿಕ ಹಲ್ಲೆ ನಡೆದ ಬಳಿಕ ಉದ್ವಿಗ್ನ ಪರಿಸ್ಥಿತಿ ನೆಲೆಸಿದೆ. ಅಲ್ಲಲ್ಲಿ ಗಲಭೆಗಳು ನಡೆದಿದ್ದು, ಪರಿಸ್ಥಿತಿ ಕೈಮೀರುವ ಸಾಧ್ಯತೆ ಗೋಚರಿಸಿದ ಬಳಿಕ ಶಿವಮೊಗ್ಗ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ.
ಗೋವುಗಳ ರಕ್ಷಣೆ ಕಾರ್ಯ ಮಾಡುತ್ತಿದ್ದ ಬಜರಂಗದಳದ ಸಹ ಸಂಚಾಲಕ ನಾಗೇಶ್ ಮೇಲೆ ದುಷ್ಕರ್ಮಿಗಳು ಹಲ್ಲೆ ನಡೆಸಿದ್ದು, ಗಾಯಗೊಂಡಿರುವ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಬಳಿಕ ಗೋಪಾಳದಲ್ಲಿ ಮೂವರಿಗೆ ಥಳಿಸಿ ಒಬ್ಬನಿಗೆ ಇರಿಯಲಾಗಿದ್ದು, ಘಟನೆ ಬಳಿಕ ಶಿವಮೊಗ್ಗದಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಹಿನ್ನೆಲೆಯಲ್ಲಿ ನಗರದಾದ್ಯಂತ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ.
ನಾಗೇಶ್ ಗುರುವಾರ ಬೆಳಿಗ್ಗೆ ವಾಯುವಿಹಾರ ಮುಗಿಸಿ ಮನೆಗೆ ತೆರಳುವಾಗ ಲಷ್ಕರ್ ಮೊಹಲ್ಲಾದಲ್ಲಿ ಮೂವರು ದುಷ್ಕರ್ಮಿಗಳು ಹಲ್ಲೆ ನಡೆಸಿದ್ದಾರೆ. ಗಂಭೀರವಾಗಿ ಗಾಯಗೊಂಡಿದ್ದ ನಾಗೇಶ್ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಘಟನೆ ವಿಚಾರ ತಿಳಿಯುತ್ತಿದ್ದಂತೆ ಅವರ ಬೆಂಬಲಿಗರು ಆಸ್ಪತ್ರೆ ಮುಂಭಾಗ ಜಮಾಯಿಸಿದ್ದರು. ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಧ್ಯಾಹ್ನ ಶಿವಮೊಗ್ಗ ನಗರ ಕೋಟೆ ಠಾಣಾ ವ್ಯಾಪ್ತಿಯಲ್ಲಿ ಎರಡು ಕೋಮಿನ ನಡುವೆ ಘರ್ಷಣೆ ಕೂಡ ಉಂಟಾಗಿತ್ತು. ಈ ಕುರಿತು ಕೋಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಘಟನೆ ಬಳಿಕ ಶಿವಮೊಗ್ಗದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು. ಈ ಹಿನ್ನೆಲೆಯಲ್ಲಿ ಶಿವಮೊಗ್ಗ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿಗೊಳಿಸಿ ತಹಶೀಲ್ದಾರ್ ಆದೇಶ ಹೊರಡಿಸಿದ್ದಾರೆ.
ಬಜರಂಗ ದಳದ ಮುಖಂಡನ ಮೇಲೆ ಹಲ್ಲೆ ಬಳಿಕ ಶಿವಮೊಗ್ಗ ಉದ್ವಿಗ್ನ : ನಿಷೇಧಾಜ್ಞೆ ಜಾರಿ



























