ಬರೋಬ್ಬರಿ ಒಂಬತ್ತು ವರ್ಷಗಳ ನಂತರ 1999ರಲ್ಲಿ ಪಾಕಿಸ್ಥಾನ ತಂಡ ಭಾರತಕ್ಕೆ ಪ್ರವಾಸ ಬಂದಿತ್ತು.ಎರಡು ಟೆಸ್ಟ್ ಪಂದ್ಯಗಳ ಸರಣಿಯಲ್ಲಿ ಮೊದಲ ಪಂದ್ಯ ಚೆನ್ನೈನಲ್ಲಿ ನಡೆದಿದ್ದು, ಭಾರತ ಅಲ್ಲಿ ಸೋತಿತ್ತು. ಎರಡನೇ ಪಂದ್ಯ ದಿಲ್ಲಿಯ ಫಿರೋಜ್ ಷಾ ಕೋಟ್ಲಾ ಮೈದಾನದಲ್ಲಿ ಆರಂಭವಾಗಿತ್ತು.
ಮೊದಲು ಬ್ಯಾಟಿಂಗ್ ಆರಂಭಿಸಿದ ಭಾರತ 420 ರನ್ ಪೇರಿಸಿತ್ತು. ಇದನ್ನು ಬೆನ್ನತ್ತಿದ್ದ ಪಾಕ್ ಯಾವೊಂದು ವಿಕೆಟ್ ಕಳಕೊಳ್ಳದೆ 101 ರನ್ ಕಲೆ ಹಾಕಿತ್ತು. ತಂಡದ ಕಪ್ತಾನ ಮಹಮ್ಮದ್ ಅಜರುದ್ದೀನ್ ಕುಂಬ್ಳೆ ಮೇಲೆ ವಿಶ್ವಾಸವಿಟ್ಟಿದ್ದರು.ಊಟದ ನಂತರ ಬೌಲಿಂಗ್ ದಾಳಿ ಆರಂಭಿಸಿದ ಕುಂಬ್ಳೆಗೆ ಮೊದಲ ವಿಕೆಟ್ ಸಿಕ್ಕಿತು. ಇಲ್ಲೊಂದು ಅದೃಷ್ಟದ ಆಟವೂ ನಡೆದಿತ್ತು.ಸಾಮಾನ್ಯವಾಗಿ ಬೌಲರ್ ಗಳು ಬೌಲಿಂಗ್ ಗೆ ಇಳಿಯುವ ಮುನ್ನ ತಮ್ಮ ಕ್ಯಾಪ್ ಹಾಗೂ ಸ್ವೆಟ್ಟರ್ ಅನ್ನು ಅಂಪೈರ್ ಗೆ ಹಸ್ತಾಂತರಿಸುತ್ತಾರೆ. ಆದರೆ ಫಿರೋಜ್ ಷಾ ಕೋಟ್ಲಾದಲ್ಲಿ ನಡೆದ ಟೆಸ್ಟ್ ಪಂದ್ಯದಲ್ಲಿ ಅನಿಲ್ ಕುಂಬ್ಳೆ ತಮ್ಮ ಪ್ರತಿ ಓವರ್ ಗೂ ಮುನ್ನ ಕ್ಯಾಪ್ ಹಾಗೂ ಸ್ವೆಟ್ಟರ್ ಅನ್ನು ತೆಂಡೂಲ್ಕರ್ ಗೆ ಕೊಟ್ಟಿದ್ದರು. ತೆಂಡೂಲ್ಕರ್ ಅದನ್ನು ಅಂಪೈರ್ ಕನ್ನಡಿಗ ಎ. ವಿ. ಜಯಪ್ರಕಾಶ್ ಗೆ ಹಸ್ತಾಂತರಿಸಿದ್ದರು. ಹೀಗೆ ಮಾಡುವುದರಿಂದ ಅದೃಷ್ಟ ಖುಲಾಯಿಸುತ್ತದೆಂದೇ ತಂಡದವರು ನಂಬಿದ್ದರು. ಕಾಕತಾಳೀಯವೋ ಏನೋ, ಪ್ರತಿ ಬಾರಿ ಕ್ಯಾಪ್ ಹಾಗೂ ಸ್ವೆಟ್ಟರ್ ಅನ್ನು ತೆಂಡೂಲ್ಕರ್ ಮೂಲಕ ಅಂಪೈರ್ ಗೆ ಹಸ್ತಾಂತರಿಸಿದಾಗಲೂ ಕುಂಬ್ಳೆ ವಿಕೆಟ್ ಪಡೆದಿದ್ದರು!
ಇಂಗ್ಲೆಂಡ್ ನ ಜಿಮ್ ಲೇಕರ್ ಸಾಧನೆಯನ್ನು ಸರಿಗಟ್ಟಿ ಹತ್ತೂ ವಿಕೆಟ್ ಗಳನ್ನು ಪಡೆದು ವಿಶ್ವದಾಖಲೆ ಮೆರೆದ ಕುಂಬ್ಳೆ ಸಾಧನೆ ಹಿಂದೆ ಉಳಿದ ಬೌಲರ್ ಗಳ ಕೃಪಾಕಟಾಕ್ಷವೂ ಇದೆ. ಕುಂಬ್ಳೆ 9 ವಿಕೆಟ್ ಪಡೆದು ವಿಶ್ವ ದಾಖಲೆಯ ಹೊಸ್ತಿಲಲ್ಲಿರುವಾಗ ಬೌಲಿಂಗ್ ಮಾಡುತ್ತಿದ್ದ ಶ್ರೀನಾಥ್ ತಮ್ಮ ಓವರ್ ನ ಎಲ್ಲಾ ಬಾಲ್ ಗಳನ್ನು ವೈಡ್ ಎಸೆದಿದ್ದರಂತೆ.ತನಗೆ ಅಪ್ಪಿತಪ್ಪಿಯೂ ವಿಕೆಟ್ ಸಿಗಬಾರದು. ಹಾಗೊಂದು ವೇಳೆ ಸಿಕ್ಕರೆ ಕುಂಬ್ಳೆ ವಿಶ್ವ ದಾಖಲೆಯ ಕನಸು ನುಚ್ಚುನೂರಾಗುತ್ತದೆಂದು ಶ್ರೀನಾಥ್ ವೈಡ್ ಬಾಲ್ ಎಸೆದಿದ್ದರು.
ಇತ್ತ ಪಾಕ್ ಪರ ಬ್ಯಾಟಿಂಗ್ ಮಾಡುತ್ತಿದ್ದ ವಾಸಿಮ್ ಅಕ್ರಂ ಹಾಗೂ ಮಹಮ್ಮದ್ ಯೂನಸ್ ರನ್ ಔಟ್ ಆಗಿ ಕುಂಬ್ಳೆಗೆ 10ನೇ ವಿಕೆಟ್ ನಿರಾಕರಿಸುವ ಪಣ ತೊಟ್ಟಿದ್ದರು. ಆದರೆ ಕುಂಬ್ಳೆ ಅದೃಷ್ಟ ಚೆನ್ನಾಗಿತ್ತು.61ನೇ ಓವರ್ ನಲ್ಲಿ ಅಕ್ರಂ ವಿಕೆಟ್ ಪಡೆದು 10 ವಿಕೆಟ್ ಗಳ ವಿಶ್ವದಾಖಲೆ ಬರೆದರು.
ಕ್ರಿಕೆಟ್ ಕಿಂಡಿ: ಕುಂಬ್ಳೆ 10 ವಿಕೆಟ್ ವಿಶ್ವದಾಖಲೆಯ ಹಿಂದೆ ಇತ್ತು ಸಚಿನ್ ಕೈಚಳಕ







































