ಸಾಮಾಜಿಕ ಜಾಲತಾಣಗಳ ಸುರಕ್ಷತೆ ಎನ್ನುವುದು ಡಿಜಿಟಲ್ ಯುಗದಲ್ಲಿ ನಾವು ಎದುರುಸುತ್ತಿರುವ ಅತಿ ದೊಡ್ಡ ಸವಾಲು. ಇಂದು ಸಾಮಾಜಿಕ ಜಾಲತಾಣ ಸಮಾಜದ ಮುಖ್ಯ ಅಂಗವಾಗಿದ್ದು ಜಾತಿ, ಮತ, ಬಡವ , ಶ್ರೀಮಂತ , ಹಿರಿಯ, ಕಿರಿಯ ಎಂಬ ಭೇದವಿಲ್ಲದೆ ಪ್ರತಿಯೊಬ್ಬರೂ ಕೂಡ ಬಳಸುವಂತಹ ಮತ್ತು ನಂಬುವಂತಹ ಮಾಧ್ಯಮವಾಗಿಬಿಟ್ಟಿದೆ.
ವಿಶ್ವದಲ್ಲಿ ಅಂದಾಜು 3.81 ಶತಕೋಟಿ ಜನರು ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯರಾಗಿದ್ದಾರೆ.ಹಲವಾರು ಸಾಮಾಜಿಕ ಜಾಲತಾಣಗಳು ಜನರಿಗೆ ಮನೋರಂಜನೆ, ಸುದ್ದಿ, ಮಾಹಿತಿಗಳನ್ನು ಕುಳಿತಲ್ಲಿಯೆ ದೊರೆಯುವಂತೆ ಮಾಡಿದೆ.ಸಾಮಾಜಿಕ ಜಾಲತಾಣವು ಜನರನ್ನು ಅತಿವೇಗವಾಗಿ ತಲುಪುವ ಮಾಧ್ಯಮವಾಗಿ ಬೆಳೆದುನಿಂತಿದೆ. ಜನರು ಸಾಮಾಜಿಕ ಜಾಲತಾಣಗಳ ಸೆಳೆತಕ್ಕೆ ಒಳಗಾಗಲು ಮುಖ್ಯ ಕಾರಣ ಯೂಟ್ಯೂಬ್ , ಫೇಸ್ಬುಕ್,ವಾಟ್ಸಪ್, ಟಿಕ್ ಟಾಕ್ ನಂತಹ ಮನೋರಂಜನೆ ಮತ್ತು ಸುದ್ದಿವಾಹಕ ತಾಣಗಳು. ವಾಟ್ಸಪ್, ಇನ್ಸ್ಟಾಗ್ರಾಂ, ಟೆಲಿಗ್ರಾಮ್ ನಂತಹ appಗಳಿಂದ ಸಂದೇಶವನ್ನು ಅತಿವೇಗವಾಗಿ ಕಳುಹಿಸಿ ಸಂಪರ್ಕ ಸಾಧಿಸಬಹುದು .ಅದರ ಜೊತೆಗೆ ಅಮೆಜಾನ್, ಒಎಲ್ಎಕ್ಸ್ , ಫ್ಲಿಪ್ ಕಾರ್ಟ್ ನಂಥ ಹಲವಾರು ತಾಣಗಳು ಇಂದು ಇಡೀ ಜಾಗತಿಕ ಮಾರುಕಟ್ಟೆ ನಮ್ಮ ಕೈ ಬೆರಳ ತುದಿಯಲ್ಲಿ ದೊರಕುವಂತೆ ಮಾಡಿಬಿಟ್ಟಿದೆ . ಹೀಗಿರುವಾಗ ಜನರು ಆಕರ್ಷಿತರಾಗದೇ ಇರುವರೇ?
ಪ್ರತಿಯೊಬ್ಬರಿಗೆ ತಿಳಿದಿರುವಂತೆ ಇತ್ತೀಚೆಗೆ ಭಾರತ ಸರ್ಕಾರ ಚೀನದ appಗಳನ್ನು ನಿಷೇಧಿಸಿತು, ಅದಕ್ಕೆ ಸರ್ಕಾರ ಕೊಟ್ಟ ಕಾರಣ ಸಾಮಾಜಿಕ ಜಾಲತಾಣದ ಮೂಲಕ ಭಾರತೀಯರ ವೈಯಕ್ತಿಕ ಮಾಹಿತಿಯನ್ನು ಕದಿಯುತ್ತಿದೆ ಮತ್ತು ಮಾರಾಟ ಮಾಡುತ್ತಿದ್ದಾರೆ ಎಂದು.ಹೀಗೆ ಅಂತರಾಷ್ಟ್ರೀಯ ಮಟ್ಟದಲ್ಲಿ ಸಾಮಾಜಿಕ ಜಾಲತಾಣದಲ್ಲಿ ದೊಡ್ಡಮಟ್ಟದ ಕದ್ದಾಲಿಕೆ ನಡೆಯುತ್ತಿದೆ ಹಾಗೂ ಇಂತಹ ಸಾಮಾಜಿಕ ಜಾಲತಾಣಗಳಲ್ಲಿ ಮಹಿಳೆಯರ ಮತ್ತು ಮಕ್ಕಳ ಭಾವಚಿತ್ರ ಮತ್ತು ವೀಡಿಯೋಗಳನ್ನು ತಿರುಚಿ ಅದನ್ನ ದುರುಪಯೋಗ ಪಡಿಸಲಾಗುತ್ತಿದೆ. ಹಲವಾರು ಸುಳ್ಳು ಖಾತೆಗಳ ಮೂಲಕ ಜನರನ್ನು ವಂಚಿಸುವಂತಹ ದೊಡ್ಡ ಜಾಲವೇ ಸಕ್ರಿಯವಾಗಿದೆ. ಹೆಚ್ಚಾಗಿ ಆನ್ಲೈನ್ ಮಾರುಕಟ್ಟೆಯಲ್ಲಿ ಸುಳ್ಳು ಮಾಹಿತಿ ಕೊಟ್ಟು ನಕಲಿ ವಸ್ತುಗಳನ್ನು ಮಾರಾಟ ಮಾಡಲಾಗುತ್ತದೆ ಹಾಗೂ ಕ್ಯಾಶ್ ಲೆಸ್ ಟ್ರಾನ್ಸಾಕ್ಷನ್ ( cashless transaction) ಗಾಗಿ ಹಲವಾರು ತಾಣಗಳು ಪ್ರಾರಂಭವಾಗಿವೆ.ಇವುಗಳ ಮೂಲಕ ವಂಚನೆ ಎಸಗಿದ ನೂರಾರು ಪ್ರಕರಣಗಳು ಇಂದು ನಮ್ಮ ಕಣ್ಣ ಮುಂದೆ ಇವೆ. ಪೋಲಿಸ್ ಇಲಾಖೆಗೂ ಜಾಲತಾಣದಲ್ಲಿ ನಡೆಯುವ ಅಪರಾಧ ಮತ್ತು ವಂಚನೆಗಳನ್ನು ಪತ್ತೆಹಚ್ಚುವುದು ಜಟಿಲವಾಗಿದೆ.
ಒಂದು ವರ್ಷದ ಹಿಂದೆ ವಿಶ್ವಾದ್ಯಂತ ಸಂಚಲನ ಮೂಡಿಸಿದ್ದ ಬ್ಲೂವೇಲ್ ಗೇಮ್ ಆಟವು ಸಾಮಾಜಿಕ ಜಾಲತಾಣಗಳ ಮೂಲಕ ಮಕ್ಕಳಿಗೆ, ಯುವಕರಿಗೆ ಪರಿಚಯವಾಗಿ ಹಲವಾರು ಯುವಕರಿಗೆ ಆತ್ಮಹತ್ಯೆಗೆ ಪ್ರೇರಣೆಯನ್ನು ನೀಡಿ ಸಾವಿಗೆ ಕಾರಣವಾಗಿತ್ತು. ನಂತರ ಇದನ್ನ ಸರ್ಕಾರ ನಿಷೇಧಿಸಿತ್ತು .
ಇಂದು ಸಾಮಾಜಿಕ ಜಾಲತಾಣ ಎಷ್ಟು ಉಪಕಾರಿಯೋ ಅಷ್ಟೇ ಅಪಕಾರಿಯಾಗುತ್ತಿದೆ. ಆದರಿಂದ ಸಾಮಾಜಿಕ ಜಾಲತಾಣಗಳ ಸುರಕ್ಷತೆಯ ಬಗ್ಗೆ ಸರಕಾರ ಮತ್ತು ಜನತೆ ಎಚ್ಚರ ವಹಿಸಬೇಕಾಗಿದೆ. ಪ್ಲೇ ಸ್ಟೋರ್ ನಂತಹ ತಾಣಗಳಲ್ಲಿ ಹಲವಾರು ರೀತಿಯ ಆ್ಯಪ್ ಗಳು ಸಿಗುತ್ತವೆ. ಅವುಗಳಲ್ಲಿ ಯಾವುದು ಕೆಡುಕನ್ನು ಬೆಂಬಲಿಸುತ್ತದೆಯೋ ಅದರ ವಿರುದ್ಧ ಕ್ರಮ ಕೈಗೊಳ್ಳ ಬೇಕಾಗಿದೆ . ಸಾಮಾಜಿಕ ಜಾಲತಾಣಗಳಲ್ಲಿ ಬರುವ ಸುದ್ದಿಗಳ ಸತ್ಯಾಸತ್ಯತೆಯನ್ನು ತಿಳಿದು ಹಂಚಬೇಕಾಗಿದೆ ಹಾಗೂ ಸುಳ್ಳು ಸುದ್ದಿಗಳ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಗಮನವಹಿಸಿ ಆಗುವಂತಹ ಕೆಡುಕನ್ನು ತಡೆಯಬೇಕಾಗಿದೆ.
ಆದಷ್ಟು ನಮ್ಮ ಮತ್ತು ಕುಟುಂಬದವರ ಭಾವಚಿತ್ರವನ್ನು ಹಂಚಿಕೊಳ್ಳುವಾಗ ಎಚ್ಚರ ವಹಿಸಬೇಕು. ಸಾಮಾಜಿಕ ಜಾಲತಾಣಗಳು ಎಷ್ಟು ಸಹಕಾರಿಯಾದರು ಅದು ಅಧಿಕವಾದರೆ ಜೀವಕ್ಕೆ ಕುತ್ತು ತರಬಹುದು ಆದರಿಂದ ಸಮಾಜ ಮತ್ತು ಸರಕಾರ ಒಟ್ಟಾಗಿ ಸಾಮಾಜಿಕ ಜಾಲತಾಣಗಳ ಸುರಕ್ಷತೆಯ ಬಗ್ಗೆ ಕ್ರಮ ಕೈಗೊಳ್ಳಬೇಕಾಗಿದೆ.
ಶ್ರಾವ್ಯಾ ಜಿ.ನಾಯ್ಕ್
(10ನೇ ತರಗತಿ -ಶ್ರೀ ಮದ್ ಭುವನೇಂದ್ರ ಆಂಗ್ಲ ಮಾಧ್ಯಮ ಪ್ರೌಢಶಾಲೆ ಕಾರ್ಕಳ)









































