ಕಾರ್ಕಳ: ನಿಷ್ಠುರವಾದಿಯಾಗಿ ಓಲೈಕೆ ರಾಜಕಾರಣ ಮಾಡದೆ, ಸ್ವಾಭಿಮಾನವನ್ನು ಪಣಕ್ಕಿಟ್ಟು ಆತ್ಮಾಭಿಮಾನಕ್ಕೆ ಭಂಗ ಬಂದಾಗ ಮಂತ್ರಿ ಪದವಿಯನ್ನೇ ತೊರೆದ ವಿದುರನನ್ನು ಮಂತ್ರಿ ಪದವಿಗೆ ಭಾಷ್ಯ ಬರೆದವನು ಎಂದು ವರ್ಣಿಸಿದ್ದಾನೆ ಶ್ರೀಕೃಷ್ಣ. ವಿದುರನು ಧೃತರಾಷ್ಟ್ರನಿಗೆ ಉಪದೇಶಿಸಿದ ಮಾತುಗಳು ರಾಜತಾಂತ್ರಿಕ ನೆಲೆಯಲ್ಲಿ ಬಹಳ ಬೆಲೆಬಾಳುವ ಮಾತುಗಳಾಗಿದ್ದು ‘ವಿದುರ ನೀತಿ’ಯೆಂದೇ ಪ್ರಸಿದ್ಧವಾಗಿರುವ ಈ ಉಪದೇಶಗಳು ಸರ್ವ ಕಾಲದ ರಾಜಕಾರಣಕ್ಕೆ ಸಲ್ಲುವ ಮಾತುಗಳಾಗಿವೆ ಎಂಬುದಾಗಿ ವಿದ್ವಾಂಸ ಡಾ. ವಿನಾಯಕ ಭಟ್ ಗಾಳಿಮನೆ ಹೇಳಿದರು.
ಕಾರ್ಕಳದ ಪ್ರಕಾಶ್ ಹೋಟೆಲ್ ಇದರ ‘ಸಂಭ್ರಮ’ ಸಭಾಂಗಣದಲ್ಲಿ ನಡೆದ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಕನ್ನಡ ಸಂಘ ಕಾಂತಾವರ, ಅಲ್ಲಮಪ್ರಭು ಪೀಠ ಕಾಂತಾವರ ಮತ್ತು ಅಖಿಲ ಭಾರತೀಯ ಸಾಹಿತ್ಯ ಪರಿಷದ್ ಕಾರ್ಕಳ ತಾಲೂಕು ಘಟಕ ಇವುಗಳ ಸಹಭಾಗಿತ್ವದಲ್ಲಿ 2026 ರ ವರ್ಷಪೂರ್ತಿ ಪ್ರತೀ ತಿಂಗಳು ನಡೆಯುತ್ತಿರುವ ಮಹಾಭಾರತ ಭಾವದೀಪ ಎಂಬ ಉಪನ್ಯಾಸ ಮಾಲೆಯ ದಶಮ ಸೋಪಾನದಲ್ಲಿ ಅವರು ‘ಉದ್ಯೋಗ ಪರ್ವ, ಕುರುಕ್ಷೇತ್ರ ಪರ್ವ’ ದ ಬಗ್ಗೆ ಮಾತನಾಡುತ್ತಾ ಇಂದಿನ ರಾಜಕೀಯಕ್ಕೆ ಕುರುಕ್ಷೇತ್ರ ಹೇಗೆ ಅನ್ವಯವಾಗುತ್ತದೆ ಎಂದು ತಿಳಿಸಿದರು.

ಚಿಂತೆಯಲ್ಲಿದ್ದ ಧೃತರಾಷ್ಟ್ರನಿಗೆ ವಿದುರನ ಮಾತುಗಳು ಒಪ್ಪಿತವಾದರೂ, ಮಮಕಾರವನ್ನು ತ್ಯಜಿಸುವ ಅಧ್ಯಾತ್ಮಿಕ ಮಾರ್ಗವನ್ನು ಆತನಿಗೆ ಸನತ್ ಸುಜಾತರು ಬೋಧಿಸಿದರೂ ಮಕ್ಕಳ ಮೇಲಿನ ಮಮಕಾರ ಆತನಿಗೆ ಯಾರ ಮಾತನ್ನೂ ಕೇಳದಂತೆ ಮಾಡಿತು. ನಂತರ ಯುದ್ಧವನ್ನೇ ಆಯ್ಕೆ ಮಾಡಿಕೊಂಡಿದ್ದರಿಂದ ಯುದ್ಧ ಅನಿವಾರ್ಯವಾಗುವಂತಾಯಿತು ಅಂದರು.
ಡಾ.ನಾ.ಮೊಗಸಾಲೆ, ನಿತ್ಯಾನಂದ ಪೈ, ಮಿತ್ರಪ್ರಭಾ ಹೆಗ್ಡೆ ಮತ್ತು ಏರ್ ವೈಸ್ ಮಾರ್ಷಲ್ ರಮೇಶ್ ಕಾರ್ಣಿಕ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಶಾರ್ವರಿ ಶ್ಯಾನುಭಾಗ್ ಪ್ರಾರ್ಥಿಸಿದರು.ಸದಾನಂದ ನಾರಾವಿ ಸ್ವಾಗತಿಸಿ, ಸುಲೋಚನಾ ಬಿ.ವಿ. ನಿರ್ವಹಿಸಿದರು. ಜಗದೀಶ್ ಗೋಖಲೆ ವಂದಿಸಿದರು.








































