ರಾಜಕೀಯ ಪಕ್ಷಗಳಿಂದ ಕೊರೊನ ನಿಯಮ ಉಲ್ಲಂಘನೆ : ಹೈಕೋರ್ಟ್‌ ತರಾಟೆ

ಬೆಂಗಳೂರು, ನ. 20 : ರಾಜಕೀಯ ಪಕ್ಷಗಳ rally ಹಾಗೂ ಇತರ ಕಾರ್ಯಕ್ರಮಗಳಲ್ಲಿ ಕೊರೊನ ನಿಯಮ ಉಲ್ಲಂಘನೆಯಾಗುತ್ತಿರುವುದಕ್ಕೆ ಸರಕಾರವನ್ನು ತರಾಟೆ ತೆಗೆದುಕೊಂಡಿರುವ ಹೈಕೋರ್ಟ್‌ ಮಾನ್ಯತೆ ಪಡೆದಿರುವ ಎಲ್ಲಾ ರಾಜಕೀಯ ಪಕ್ಷಗಳನ್ನು ಪ್ರತಿವಾದಿಗಳನ್ನಾಗಿ ಸೇರಿಸುವಂತೆ ಈ ಸಂಬಂಧ ದೂರು ನೀಡಿರುವ ಅರ್ಜಿದಾರ ಪುತ್ತಿಗೆ ರಮೇಶ್ ಅವರಿಗೆ ಸೂಚಿಸಿದೆ.
ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಪಾಲಿಸುವುದು ಸೇರಿ ಕೊರೊನ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸುವಂತೆ ರಾಜ್ಯ ಸರ್ಕಾರಕ್ಕೆ ನಿರ್ದೇಶಿಸಲು ಕೋರಿ ಲೆಟ್ಜ್ ಕಿಟ್ ಫೌಂಡೇಶನ್ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎ.ಎಸ್.ಓಕ ಅವರ ನೇತೃತ್ವದ ವಿಭಾಗೀಯ ಪೀಠ ಈ ಸೂಚನೆ ನೀಡಿ ವಿಚಾರಣೆಯನ್ನು ನ.24ಕ್ಕೆ ಮುಂದೂಡಿತು.
ರಾಜಕೀಯ ಪಕ್ಷಗಳ rally ಹಾಗೂ ಇತರ ಕಾರ್ಯಕ್ರಮಗಳಲ್ಲಿ ರಾಜಕಾರಣಿಗಳು ಮಾಸ್ಕ್‌ ಧರಿಸುತ್ತಿಲ್ಲ, ಸಾಮಾಜಿಕ ಅಂತರ ಕಾಯ್ದುಕೊಳ್ಳುತ್ತಿಲ್ಲ. ಆದರೂ ಅವರ ವಿರುದ್ಧ ಏಕೆ ಕ್ರಮ ಕೈಗೊಂಡಿಲ್ಲ ಎಂದು ಸರ್ಕಾರವನ್ನು ಮುಖ್ಯ ನ್ಯಾಯಮೂರ್ತಿ ಓಕಾ ಪ್ರಶ್ನಿಸಿದ್ದಾರೆ.
ಮಾಸ್ಕ್ ಹಾಕದವರನ್ನು ಜೈಲಿಗೆ ಕಳುಹಿಸುವ ಉದ್ದೇಶ ಸರ್ಕಾರಕ್ಕೆ ಇಲ್ಲ. ಈ ಬಗ್ಗೆ ಕಾನೂನಿಗೆ ಸೂಕ್ತ ತಿದ್ದುಪಡಿ ತರಲಾಗುವುದು. ದಂಡಕಟ್ಟಿಸಿಕೊಳ್ಳಲು ಅವಕಾಶವಿರುವಂತೆ ತಿದ್ದುಪಡಿ ತರಲಾಗುವುದು. ರಾಜಕೀಯ ಪಕ್ಷಗಳ ರ್ಯಾಲಿಗಳಲ್ಲಿ ಭಾಗವಹಿಸಿ ಕೊರೊನ ನಿಯಮ ಉಲ್ಲಂಘಿಸಿದ ಒಟ್ಟು 680 ಜನರಿಗೆ ದಂಡ ವಿಧಿಸಲಾಗಿದೆ. ನಿಯಮ ಉಲ್ಲಂಘಿಸಿದ ರಾಜಕಾರಣಿಗಳಿಗೂ ದಂಡ ವಿಧಿಸಲಾಗಿದೆ ಎಂದು ಈ ವೇಳೆ ಸರ್ಕಾರಿ ವಕೀಲ ವಿಕ್ರಮ್ ಹುಯಿಲುಗೋಳ ನ್ಯಾಯಾಲಯಕ್ಕೆ ಮಾಹಿತಿ ನೀಡಿದರು.
ಈ ಉತ್ತರದಿಂದ ಅಸಮಾಧಾನಗೊಂಡ ಮುಖ್ಯ ನ್ಯಾಯಮೂರ್ತಿಗಳು, ರಾಜ್ಯ ಸರ್ಕಾರ ಜನ ಸಾಮಾನ್ಯರು ಮತ್ತು ರಾಜಕಾರಣಿಗಳು ನಡುವೆ ತಾರತಮ್ಯ ಮಾಡುತ್ತಿದೆ ಎಂದು ಹೇಳಿದರು.

















































































error: Content is protected !!
Scroll to Top