ಆರು ವರ್ಷದ ಬಾಲಕಿ ಮೇಲೆ ಆತ್ಯಾಚಾರ ಎಸಗಿ ಎದೆ ಬಗೆದು ಶ್ವಾಸಕೋಶ ಕಿತ್ತು ಹಾಕಿದ ದುಷ್ಕರ್ಮಿಗಳು

ಕಾನ್ಪುರ, ನ.17: ಆರು ವರ್ಷದ ಬಾಲಕಿಯೊಬ್ಬಳ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿ ಹತ್ಯೆಗೈದ ಬಳಿಕ ಎದೆ ಬಗೆದು ಶ್ವಾಸಕೋಶವನ್ನು ಕೊಂಡೊಯ್ದಿರುವ ಬೆಚ್ಚಿಬೀಳಿಸುವ ಭಯಾನಕ ಘಟನೆಯೊಂದು ಉತ್ತರಪ್ರದೇಶದ ಕಾನ್ಪುರದಲ್ಲಿ ಸಂಭವಿಸಿದೆ. ಮಾಂತ್ರಿಕನ ಮಾತು ನಂಬಿ ಮಕ್ಕಳಿಲ್ಲದ ದಂಪತಿಯ ಕುಮ್ಮಕ್ಕಿನಿಂದ ಈ ಘಟನೆ ಸಂಭವಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ದೀಪಾವಳಿ ಹಬ್ಬದ ದಿನದಂದು ರಾತ್ರಿ ಘಟಾಂಪುರ ಪ್ರದೇಶದಿಂದ ಬಾಲಕಿ ನಾಪತ್ತೆಯಾಗಿದ್ದಳು. ಬಳಿಕ ಅರಣ್ಯ ಪ್ರದೇಶದಲ್ಲಿ ಬಾಲಕಿ ಶವ ಪತ್ತೆಯಾಗಿತ್ತು.
ಬಾಲಕಿ ಮೇಲೆ ಅತ್ಯಾಚಾರ ನಡೆಸಿ ಹತ್ಯೆಗೈದಿರುವ ಕಾಮುಕರು ನಂತರ ಆಕೆಯ ಶ್ವಾಸಕೋಶವನ್ನು ತೆಗೆದುಕೊಂಡು ಹೋಗಿದ್ದಾರೆ. ಪ್ರಕರಣ ಸಂಬಂಧ ಅಂಕುಲ್ ಕುರಿಲ್ ಮತ್ತು ಬೀರನ್ ಎಂಬ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಪ್ರಕರಣ ಪ್ರಮುಖ ಆರೋಪಿ ಪರಶುರಾಮ್ ಎಂದು ಹೇಳಲಾಗುತ್ತಿದೆ. ಈತ 1999ರಲ್ಲಿಯೇ ವಿವಾಹವಾಗಿದ್ದರೂ ಮಕ್ಕಳಿರಲಿಲ್ಲ. ಹೀಗಾಗಿ ಮಾಟಮಂತ್ರ ಮಾಡುವವರ ಬಳಿ ಹೋಗಿದ್ದಾನೆ. ಈ ವೇಳೆ ಮಾಂತ್ರಿಕ ಬಾಲಕಿಯೊಬ್ಬಳ ಶ್ವಾಸಕೋಶ ಬೇಕೆಂದು ಹೇಳಿದ್ದಾರೆ.
ಇದನ್ನು ನಂಬಿದ ಪರಶುರಾಮ್ ತನ್ನ ಸಂಬಂಧಿಕರಾದ ಅಂಕುಲ್ ಹಾಗೂ ಬೀರನ್ ಬಳಿ ಬಾಲಕಿಯೊಬ್ಬಳ ಶ್ವಾಸಕೋಶವನ್ನು ತಂದು ಕೊಡುವಂತೆ ಹೇಳಿ ಹಣ ನೀಡುವುದಾಗಿ ತಿಳಿಸಿದ್ದಾನೆ.
ಆರೋಪಿಗಳಿಬ್ಬರು ರಾತ್ರಿ ಪಟಾಕಿ ಖರೀದಿಸಲೆಂದು ಮನೆಯಿಂದ ಹೊರಬಂದ ಬಾಲಕಿಯನ್ನು ಅಪಹರಿಸಿ ಕಾಡಿಗೆ ಕರೆದುಕೊಂಡು ಹೋಗಿ ಅತ್ಯಾಚಾರ ಮಾಡಿದ್ದಾರೆ. ನಂತರ ಕೊಂದು ಹಾಕಿ ಶ್ವಾಸಕೋಶವನ್ನು ತೆಗೆದಿದ್ದಾರೆ.
ಈ ನಡುವೆ ಬಾಲಕಿಯ ಕುಟುಂಬಸ್ಥರು ಪೊಲೀಸ್ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲು ಮಾಡಿದ್ದಾರೆ ಹಾಗೂ ರಾತ್ರಿಯೇ ಹುಡುಕಾಟ ಶುರು ಮಾಡಿದ್ದಾರೆ. ಮರುದಿನ ಬೆಳಗ್ಗೆ ಕೆಲವು ದಾರಿಹೋಕರಿಗೆ ಕಾಡಿನಲ್ಲಿ ಬಾಲಕಿಯ ಶವ ಕಂಡು ಬಂದು ಪೊಲೀಸರಿಗೆ ತಿಳಿಸಿದ್ದಾರೆ.
ಉತ್ತರ ಪ್ರದೇಶ ಸರಕಾರ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದು, ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರು ತ್ವರಿತ ತನಿಖೆಗೆ ಆದೇಶಿಸಿದ್ದಾರೆ.















































































error: Content is protected !!
Scroll to Top