ನಾವು ಎಂತಹ ಮೂಢರು, ಎಡಬಿಡಂಗಿಗಳು ಎಂಬುವುದು ಅರ್ಥವಾಗಬೇಕಾದರೆ ಸಂಪ್ರದಾಯ, ನಂಬಿಕೆ, ಧಾರ್ಮಿಕ ಆಚರಣೆಗಳ ಹೆಸರಲ್ಲಿ ನಾವು ನಡೆಸುವ ಅನಾಚಾರಗಳನ್ನು ನೋಡಿದರೆ ಸಾಕು. ಗೂಬೆಯನ್ನು ನಾವು ಬುದ್ಧಿವಂತಿಕೆಯ ಸಂಕೇತವೆಂದು ನಂಬುತ್ತೇವೆ. ಅದೇ ಹೊತ್ತಲ್ಲಿ, ಯಾರದರೂ ಮೂರ್ಖರಂತೆ ವರ್ತಿಸಿದಾಗ ‘ಹೋಗೋ ಗೂಬೆ ನನ್ಮಗ್ನೇ’ ಅಂತಲೋ ‘ಥತ್! ಗೂಬೆ ಮುಂಡೇದೆ’ ಎಂದೋ ಮೂದಲಿಸುತ್ತೇವೆ. ಹಾಗೆಯೇ, ಲಕ್ಷ್ಮೀಯನ್ನು ಸಂಪತ್ತಿನ ಅಧಿದೇವತೆಯಂತೆ ಪೂಜಿಸುತ್ತೇವೆ. ಲಕ್ಷ್ಮೀಯ ವಾಹನ ಗೂಬೆ. ಆದರೆ, ಈ ಗೂಬೆಯನ್ನು ದೀಪಾವಳಿಯ ದಿನ ಕೊಂದರೆ ಸಂಪತ್ತು ಬರುತ್ತದೆ ಎಂದು ಅವುಗಳ ಮಾರಣ ಹೋಮ ನಡೆಸುತ್ತೇವೆ!
ಭಾರತದಲ್ಲಿ ಕಾಣ ಸಿಗುವ ಹನ್ನೆರಡಕ್ಕೂ ಹೆಚ್ಚು ಪ್ರಭೇದಗಳ ಗೂಬೆಗಳಲ್ಲಿ ಹೆಚ್ಚಿನವು ಉತ್ತರಖಂಡದ ಕಾಡುಗಳಲ್ಲಿ ವಾಸಿಸುತ್ತವೆ. ಪ್ರತೀ ವರ್ಷ ದೀಪಾವಳಿ ಬಂದಾಗ ಅಲ್ಲಿನ ತಾಂತ್ರಿಕರು, ಮಾಟಗಾರರು ನೂರಾರು ಸಂಖ್ಯೆಯಲ್ಲಿ ಗೂಬೆಗಳನ್ನು ಹಿಡಿದು ತಂದು ಅವುಗಳನ್ನು ಲಕ್ಷ್ಮೀ ಪೂಜೆಯಲ್ಲಿ ಬಲಿ ಕೊಡುತ್ತಾರೆ. ಹೀಗೆ ಮಾಡುವುದರಿಂದ ಲಕ್ಷ್ಮೀ ಸಂಪನ್ನಳಾಗಿ ತಮಗೆ ಹೇರಳ ಸಂಪತ್ತನ್ನು ದಯ ಪಾಲಿಸುತ್ತಾಳೆ ಎಂಬುವುದು ಅವರ ನಂಬಿಕೆ! ಗೂಬೆ ಲಕ್ಷ್ಮೀಯ ವಾಹನವೆಂದು ನಂಬುತ್ತೇವೆ. ಅದೇ ಗೂಬೆಯನ್ನು ಅವಳ ಪೂಜೆಯಲ್ಲಿ ಕೊಲ್ಲುತ್ತೇವೆ! ಹೀಗೆ ಮಾಡಿದರೆ ಅವಳು ನಮಗೆ ಒಲಿಯುತ್ತಾಳೆ! ನಮ್ಮ ಮೌಢ್ಯಕ್ಕೆ ಈ ನಿರುಪದ್ರವಿ ಗೂಬೆಗಳು ಬಲಿಯಾಗುವುದನ್ನು ಟೀಕಿಸಿದರೆ ಮತ್ತದೇ ನಂಬಿಕೆ, ಸಂಪ್ರದಾಯ, ಆಚರಣೆ, ಧಾರ್ಮಿಕತೆಯ ಹೆಸರಲ್ಲಿ ಸಮರ್ಥಿಸುವ ಅತಿ ಬುದ್ಧಿವಂತರು ಹೇರಳ ಸಂಖ್ಯೆಯಲ್ಲಿ ಕಾಣ ಸಿಗುತ್ತಾರೆ!
ಈ ಬೆಳಕಿನ ಹಬ್ಬ ಎಲ್ಲರ ಮನದ ಮೌಢ್ಯದ ಕತ್ತಲನ್ನು ನಿವಾರಿಸಲಿ ಎಂದು ಹಾರೈಸೋಣ.
ಪಂಜು ಗಂಗೊಳ್ಳಿ



































