ಕಾರ್ಕಳ : ನ್ಯಾಯಾಂಗ ಕ್ಷೇತ್ರದಲ್ಲಿ ಗಣನೀಯ ಸೇವೆ ಸಲ್ಲಿಸಿರುವ ಕಾರ್ಕಳದ ಹಿರಿಯ ವಕೀಲ ಎಂ.ಕೆ. ವಿಜಯ ಕುಮಾರ್ ಅವರಿಗೆ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪ್ರಕಟವಾಗಿದೆ. ಕಳೆದ 52 ವರ್ಷಗಳಿಂದ ವಕೀಲ ವೃತ್ತಿ ಮಾಡಿಕೊಂಡು ಬಂದಿರುವ ಎಂ.ಕೆ. ಅವರ ಗರಡಿಯಲ್ಲಿ 55 ಮಂದಿ ಜ್ಯೂನಿಯರ್‌ಗಳಾಗಿ ಇದೀಗ ದೇಶದ ವಿವಿಧೆಡೆ ನ್ಯಾಯವಾದಿಗಳಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಸುಪ್ರೀಂ ಕೋರ್ಟ್ ನ ನ್ಯಾಯಮೂರ್ತಿಅಬ್ದುಲ್ ನಜೀರ್ ಕೂಡ ಇವರ ಶಿಷ್ಯರೇ.
1944ರಲ್ಲಿ ಮಿಜಾರುವಿನಲ್ಲಿ ಜನಿಸಿದ ಎಂ.ಕೆ. ವಿಜಯ ಕುಮಾರ್ ಪ್ರಾಥಮಿಕ ಶಿಕ್ಷಣವನ್ನು ಮೂಡಬಿದ್ರಿ ದಿಗಂಬರ್ ಜೈನ್ ಶಾಲೆಯಲ್ಲಿ, ಪಿಯುಸಿ ಶ್ರೀ ಭುವನೇಂದ್ರ ಕಾಲೇಜಿನಲ್ಲಿ, ಪದವಿ ಶಿಕ್ಷಣವನ್ನು ಬೆಂಗಳೂರು ಯುನಿರ್ವಸಿಟಿ ಹಾಗೂ ಕಾನೂನು ಪದವಿಯನ್ನು ಬೆಂಗಳೂರಿನ ಸರಕಾರಿ ಕಾನೂನು ಕಾಲೇಜಿನಲ್ಲಿ ಪೂರೈಸಿರುತ್ತಾರೆ. ರಾಜಕೀಯ, ಸಾಮಾಜಿಕ, ಧಾರ್ಮಿಕ ಕ್ಷೇತ್ರಗಳಲ್ಲಿ ಎಂ.ಕೆ. ವಿಜಯ ಕುಮಾರ್ ಅವರ ಕೊಡುಗೆ ಅಪಾರ. ಕಾರ್ಕಳ ಬಾರ್ ಅಸೋಸಿಯೇಷನ್ ಮತ್ತು ದ.ಕ. ಜಿಲ್ಲಾ ಬಾರ್ ಅಸೋಸಿಯೇಷನ್ ಅಧ್ಯಕ್ಷರಾಗಿ ಸೇವೆ ಸಲ್ಲಿಸಿರುವ ಇವರು ಬಡವರ ಮತ್ತು ಶೋಷಿತರ ವರ್ಗದವರ ಪರವಾಗಿ ಧನಿಯೆತ್ತಿದ್ದರು.






































































