ಕಗ್ಗದ ಸಂದೇಶ –ಬತ್ತದಿರಲಿ ಪರಿಶುದ್ಧ ಪ್ರೀತಿಯ ಒರತೆ

“ಮಾತೆವೊಲೊ ಪಿತನವೊಲೊ ಪತಿಯವೊಲೊ ಸತಿಯವೊಲೊ|
ಭ್ರಾತಸುತಸಖರವೊಲೊ ಪಾತ್ರವೊಂದಕೆ ತಾಂ||
ಕಾತರಿಸುತಿಹುದು ತನ್ನೆಲ್ಲವನು ಮುಡುಪುಕುಡೆ|
ಪ್ರೀತಿಯ ಹುಟ್ಟು ಚಟ -ಮಂಕುತಿಮ್ಮ”.

     ತಾಯಿಯ, ತಂದೆಯ, ಪತಿಯ, ಸತಿಯ, ಸಹೋದರ ಸಹೋದರಿಯರ, ಸ್ನೇಹಿತರ ಹೀಗೆ ಯಾವುದಾದರೊಂದು ಪಾತ್ರಕ್ಕಾಗಿ ನಮ್ಮ ಮನಸ್ಸು  ಕಾತರಿಸುವುದು,ತನ್ನೆಲ್ಲ ಪ್ರೀತಿಯನ್ನು  ಆ ಪಾತ್ರಕ್ಕೆ ಒಪ್ಪಿಸುವುದಕ್ಕಾಗಿ.ಇತರ ಚಟಗಳು ಹುಟ್ಟಿನ ನಂತರ ಬಂದರೆ ಪ್ರೀತಿಸುವ ಚಟ ಮಾತ್ರ ಹುಟ್ಟುವಾಗಲೆ ಬಂದಿರುತ್ತದೆ ಎಂದು ಈ ಮುಕ್ತಕದಲ್ಲಿ ಮಾನ್ಯ ಗುಂಡಪ್ಪನವರು ಹೇಳಿದ್ದಾರೆ.

        ಪ್ರತಿಯೊಂದು ಜೀವಿಯೂ ತನ್ನಂತೆ  ಇರುವ ಇನ್ನೊಂದು ಜೀವಿಯ ಸಾಮಿಪ್ಯವನ್ನು,ಪ್ರೀತಿಯನ್ನು ಬಯಸುತ್ತದೆ.ಯಾವ ಜೀವಿಯೂ ಏಕಾಂಗಿಯಾಗಿ ನೆಮ್ಮದಿಯಿಂದ ಬದುಕಲಾರದು.ಅಂತೆಯೇ ಮನುಷ್ಯನು ಕೂಡ. ಯಾರೇ ಆಗಲಿ ಒಂಟಿಯಾಗಿ ಬದುಕುವುದು ಕಷ್ಟ.ಅದಕ್ಕಾಗಿಯೆ ಹಿರಿಯರು ಹೇಳಿರುವುದು “ಕೂಡಿ ಬಾಳದರೆ ಸ್ವರ್ಗ ಸಖ” ಎಂದು. ಬದುಕಿನ ಎಲ್ಲಾ ಸಂಬಂಧಗಳನ್ನು ಬಂಧಿಸುವ ಬಂಧ ಈ ಪ್ರೀತಿ.ತಂದೆ ತಾಯಿಯ ಪ್ರೀತಿ,ಗಂಡ ಹೆಂಡತಿಯ ಪ್ರೀತಿ, ಸಹೋದರ ಸಹೋದರಿಯರ ಪ್ರೀತಿ, ಮಕ್ಕಳ ಹಾಗೂ ಸ್ನೇಹಿತರ ಪ್ರೀತಿ.ಹೀಗೆ ಪ್ರತಿಯೊಂದಕ್ಕೂ ಅದರದ್ದೇ ಆದ ರುಚಿ ಮತ್ತು ಮಹತ್ವವಿದೆ,ಅದನ್ನರಿತು ಆಸ್ವಾದಿಸಿದಾಗಲೇ ಜೀವನ ಸಾರ್ಥಕವಾಗುವುದು.

    ನಮ್ಮ ಮನೆಯನ್ನು ಬೆಳಗಬೇಕಾದರೆ ಶಕ್ತಿ ಹೊರಗಿನಿಂದ ಬರಬೇಕು,ಆದರೆ ನಮ್ಮ ಮನಸ್ಸನ್ನು ಬೆಳಗುವ ಶಕ್ತಿ ನಮ್ಮೊಳಗೆ ಇದೆ.ಅದೇ “ದ ಪವರ್ ಆಫ್ ಲವ್”. ಇವತ್ತು ಇತರ ಚಟಗಳೆ ಹೆಚ್ಚಾಗಿ ಹುಟ್ಟಿನಿಂದಲೇ ಬಂದ ಪ್ರೀತಿಸುವ ಚಟ   ದೂರವಾಗುತ್ತಿದಯೋ ಎಂಬ ಸಂಶಯ ಮೂಡುತ್ತಿದೆ.ಪ್ರೀತಿಯಲ್ಲಿ ಇರೋ ಸುಖ ಯಾವ ಚಟದಿಂದಲೂ ಸಿಗದು.ಆದರೆ ಇದನ್ನು ಅಪಾರ್ಥ ಮಾಡಿಕೊಂಡವರೆ ಹೆಚ್ಚು. ಪ್ರಾಯಕ್ಕೆ ಬಂದ ಗಂಡು ಹೆಣ್ಣಿನ ನಡುವಿನ ಆಕರ್ಷಣೆಗೆ ಪ್ರೀತಿಯನ್ನು ಸೀಮಿತ ಗೊಳಿಸಬಾರದು.ಇದು ಪ್ರೀತಿಯಲ್ಲ ಪ್ರೇಮ. ಕಾಮನೆಗಳಿಂದ ಕೂಡಿದ್ದು ಪ್ರೇಮ. ಸ್ವಾರ್ಥವಿಲ್ಲದೆ ಪರಿಶುದ್ಧವಾದುದು ಪ್ರೀತಿ.ಇದು ಅಮೃತ ಮತ್ತು ಶಾಶ್ವತ.

“ಬರಿದು ಬರಿದಾಗಿರುವ ಮನದ ಮರುಭೂಮಿಯಲಿ
ಪ್ರೀತಿಯೋಯಾಸಿಸ್ಸು ತಾ ಪುಟಿಯಲಿ
ಆ ನೀರ ನೆಲೆಯಿಂದ ಬರಡು
ನೆಲದೊಳಗೆಲ್ಲಾ ಹಚ್ಚಹಸಿರಿನ ಪಚ್ಚೆ ಮೊಳೆದೋರಲಿ” ಎಂಬ ಕವಿ  ವಸಂತ ಕುಷ್ಟಗಿಯವರ ಹಾರೈಕೆಯಂತೆ ಪರಿಶುದ್ಧ ಪ್ರೀತಿಯ ಒರತೆ ಬತ್ತದೆ  ಸರ್ವರ ಹೃದಯದಲ್ಲಿ ಸದಾ ಚಿಮ್ಮುತ್ತಿರಲಿ.ತನ್ಮೂಲಕ ಜೀವನ ನಂದನವಾಗಲಿ ಎನ್ನುವುದು ನಮ್ಮೆಲ್ಲರ ಸದಾಶಯ.

ಪ್ರಭಾಕರ ಶೆಟ್ಟಿ ಕೊಂಡಳ್ಳಿ
ಕಾರ್ಕಳ ತಾಲೂಕು ಸಾಹಿತ್ಯ ಪರಿಷತ್‌ ಅಧ್ಯಕ್ಷರು























error: Content is protected !!
Scroll to Top