ಬೆಂಗಳೂರು,ಅ. 13: ನಿನ್ನೆ ದಿಢೀರ್ ಎಂದು ಖಾತೆ ಬದಲಾವಣೆ ಮಾಡಿದ ಕಾರಣ ಸಚಿವರಾದ ಶ್ರೀರಾಮುಲು ಹಾಗೂ ಆರೋಗ್ಯ ಸಚಿವ ಡಾ. ಕೆ. ಸುಧಾಕರ್ ಅವರ ನಡುವೆ ಮೂಡಿದ್ದ ಬಿರುಕಿಗೆ ತೇಪೆ ಹಾಕುವಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಯಶಸ್ವಿಯಾಗಿದ್ದಾರೆ.
ಇಂದು ತಮ್ಮನ್ನು ಭೇಟಿಯಾದ ಸಚಿವರ ಜತೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಸಮಾಲೋಚನೆ ಮಾಡಿ ಬಿಕ್ಕಟ್ಟು ನಿವಾರಿಸುವ ಪ್ರಯತ್ನ ಮಾಡಿದರು. ಉಪ ಚುನಾವಣೆ ಸಂದರ್ಭದಲ್ಲಿ ಸರ್ಕಾರದಲ್ಲಿ ಯಾವುದೇ ಸಮಸ್ಯೆ ಉಂಟು ಮಾಡುವುದು ಸರಿಯಲ್ಲ. ಒಟ್ಟಿಗೆ ಕೆಲಸ ಮಾಡಿ ಎಂದು ಸಲಹೆ ನೀಡಿದರು. ಈ ಇಬ್ಬರೂ ಸಚಿವರು ಪರಸ್ಪರ ಸೌಹಾರ್ದಯುತವಾಗಿ ಮುಖ್ಯಮಂತ್ರಿ ಅವರ ಜತೆ ಸಮಾಲೋಚನೆ ನಡೆಸಿದರು.
ಸಿಎಂ ಭೇಟಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಶ್ರೀರಾಮುಲು, ಈ ಹಿಂದೆ ನನಗೆ ಸಮಾಜ ಕಲ್ಯಾಣ ಖಾತೆ ನೀಡಬೇಕೆಂದು ಮುಖ್ಯಮಂತ್ರಿಗಳ ಬಳಿ ಮನವಿ ಮಾಡಿಕೊಂಡಿದ್ದೆ. ಅದರಂತೆ ಯಡಿಯೂರಪ್ಪ ಅವರು ಆ ಖಾತೆಯನ್ನು ನೀಡಿದ್ದಾರೆ. ಮಾಧ್ಯಮಗಳಲ್ಲಿ ಬಿತ್ತರವಾಗಿರುವಂತೆ ಯಾವುದೇ ಅಸಮಾಧಾನ ಇಲ್ಲ ಎಂದು ಹೇಳಿದ್ದಾರೆ.

ಕೊರೊನಾ ಕಾಲದಲ್ಲಿ ವೈದ್ಯಕೀಯ ಮತ್ತು ಆರೋಗ್ಯ ಇಲಾಖೆ ಒಬ್ಬರೇ ಬಳಿ ಇರೋದು ಉತ್ತಮ. ಹಾಗಾಗಿ ಆರೋಗ್ಯ ಇಲಾಖೆ ಖಾತೆಯನ್ನ ಸೋದರರಾಗಿರುವ ಸುಧಾಕರ್ ಅವರಿಗೆ ನೀಡಲಾಗಿದೆ. ಸುಧಾಕರ್ ವೈದ್ಯರಾಗಿದ್ದು, ಆರೋಗ್ಯ ಇಲಾಖೆಯನ್ನ ಉತ್ತಮವಾಗಿ ನಿರ್ವಹಿಸಲಿದ್ದಾರೆ ಎಂದು ಹೇಳಿದ್ದಾರೆ.
ಬಳಿಕ ಮಾತನಾಡಿದ ಸುಧಾಕರ್ ಅವರು, ಬಿಹಾರ ಚುನಾವಣೆ ಮತ್ತು ಉಪ ಚುನಾವಣೆ ಹಿನ್ನೆಲೆ ಸಂಪುಟ ವಿಸ್ತರಣೆಗೆ ಹೈಕಮಾಂಡ್ ನಿಂದ ಗ್ರೀನ್ ಸಿಗ್ನಲ್ ದೊರೆತಿಲ್ಲ. ಈ ಹಿನ್ನೆಲೆ ಕೆಲ ತಾಂತ್ರಿಕ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಖಾತೆಗಳ ಬದಲಾವಣೆಯಾಗಿದೆ. ಶ್ರೀರಾಮುಲು ಅಣ್ಣನವರು ರಾಜಕೀಯದಲ್ಲಿ ನನಗಿಂತ ಹಿರಿಯರು. ಸಮಾಜ ಕಲ್ಯಾಣ ಅನ್ನೋದು ಪ್ರಬಲ ಖಾತೆ. ಮುಖ್ಯಮಂತ್ರಿಗಳ ಖಾತೆಯ ಬದಲಾವಣೆ ಬಗ್ಗೆ ಒಂದು ತಿಂಗಳಿನಿಂದ ನಮ್ಮೊಂದಿಗೆ ಚರ್ಚೆ ನಡೆಸಿದ್ದರು. ಸಮಾಜದ ಸ್ವಾಸ್ಥ್ಯವನ್ನು ಚೆನ್ನಾಗಿ ಮಾಡಬೇಕೆಂದು ಸಮಾಜ ಕಲ್ಯಾಣ ಇಲಾಖೆಯ ಹೊಣೆಯನ್ನು ಶ್ರೀರಾಮುಲು ಅವರಿಗೆ ನೀಡಲಾಗಿದೆ ಎಂದಿದ್ದಾರೆ.




























































