ದಿಲ್ಲಿ, ಸೆ. 15 : ಕೊರೊನಾ ಹಾವಳಿಯ ಸಂದರ್ಭದಲ್ಲಿ ರೂಢಿಗೆ ಬಂದಿರುವ ಸಾಮಾಜಿಕ ಅಂತರ ಪದ್ಧತಿಯನ್ನು ದೈಹಿಕ ಅಂತರ ಎಂಬುದಾಗಿ ಕರೆಯಬೇಕೆಂಬ ಬೇಡಿಕೆಯನ್ನು ಸರಕಾರದ ಮುಂದೆ ಇಡಲಾಗಿದೆ.
ರಾಜ್ಯಸಭೆಯಲ್ಲಿ ಈ ವಿಚಾರ ಎತ್ತಿದೆ ತೃಣಮೂಲ ಕಾಂಗ್ರೆಸ್ ಸಂಸದ ಶಂತನು ಸೇನ್ ಕೊರೊನಾ ಹರಡುವುದನ್ನು ತಡೆಯುವ ಸಲುವಾಗಿ ಸಾಮಾಜಿಕ ಅಂತರವನ್ನು ಕಾಪಾಡಲಾಗುತ್ತದೆ. ಆದರೆ ಇದು ನಿಜವಾಗಿ ದೈಹಿಕ ಅಂತರ ಮಾತ್ರ. ಸಾಮಾಜಿಕ ಅಂತರ ಎಂಬ ಪದಗುಚ್ಚ ಕೊರೊನಾ ಸೋಕಿತರಲ್ಲಿ ಒಂದು ರೀತಿಯ ಅಸ್ಪೃಶ್ಯತೆಯ ಭಾವನೆಯನ್ನು ಮೂಡಿಸುತ್ತದೆ. ಹೀಗಾಗಿ ಇದನ್ನು ದೈಹಿಕ ಅಂತರ ಎಂಬುದಾಗಿ ಕರೆಯಲು ಸೂಚಿಸಬೇಕು ಎಂದರು.
ಈ ಪ್ರಸ್ತಾವವನ್ನು ಒಪ್ಪಿಕೊಂಡ ಸಭಾಪತಿ ವೆಂಕಯ್ಯ ನಾಯ್ಡು ಅಂತರವನ್ನು ಕಾಪಾಡಲು ಸಮರ್ಪಕವಾದ ಶಬ್ದ ಬಳಸಬೇಕೆಂಬ ಮಾತಿಗೆ ತನ್ನ ಸಹಮತವಿದೆ ಎಂದರು.



































