ದಿಲ್ಲಿ, ಸೆ.11: ಕೊರೊನಾ ಹಾವಳಿಯಿಂದಾಗಿ ಎಲ್ಲ ವ್ಯಾಪಾರ ವಹಿವಾಟುಗಳು ತಳ ಹಿಡಿದಿದ್ದರೂ ಕೆಲವೊಂದು ವಸ್ತುಗಳ ಮಾರಾಟ ಮಾತ್ರ ಹೆಚ್ಚಳವಾಗಿ ಆರ್ಥಿಕತೆಯ ಚೇತರಿಕೆ ಬಗ್ಗೆ ಆಶಾಭಾವನೆ ಹುಟ್ಟು ಹಾಕಿದೆ.
ದೇಶದಲ್ಲಿ ಪ್ಯಾಸೆಂಜರ್ ವಾಹನಗಳ ಮಾರಾಟ ಆಶ್ಚರ್ಯಕರ ಎಂಬಂತೆ ಹೆಚ್ಚುತ್ತಿದೆ. ಸೊಸೈಟಿ ಫಾರ್ ಇಂಡಿಯನ್ ಅಟೊಮೊಬೈಲ್ ಮ್ಯಾನುಫ್ಯಾಕ್ಚರರ್ಸ್ ಬಿಡುಗಡೆಗೊಳಿಸಿರುವ ಅಂಕಿಅಂಶದ ಪ್ರಕಾರ ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ ಪ್ಯಾಸೆಂಜರ್ ವಾಹನ ಮಾರಾಟದಲ್ಲಿ ಶೆ.14.16 ಹೆಚ್ಚಳವಾಗಿದೆ.
ಕೊರೊನಾ ಕಾಲದಲ್ಲಿ ಪ್ಯಾಸೆಂಜರ್ ವಾಹನಗಳ ಮಾರಾಟ ಎರಡಂಕಿಯ ಅಭಿವೃದ್ಧಿ ಸಾಧಿಸಿರುವುದು ಅದ್ಭುತವೇ ಸರಿ.

ಹಿಂದಿನ ವರ್ಷ ಆಗಸ್ಟ್ ತಿಂಗಳಲ್ಲಿ 1,89,129 ಪ್ಯಾಸೆಂಜರ್ ವಾಹನಗಳು ಮಾರಾಟವಾಗಿದ್ದರೆ ಈ ವರ್ಷ 2,15,916 ವಾಹನಗಳು ಮಾರಾಟವಾಗಿವೆ.
ಹಿಂದಿನ ವರ್ಷದ ಆಗಸ್ಟ್‌ನಲ್ಲಿ 15,14,196 ದ್ವಿಚಕ್ರ ವಾಹನಗಳು ಮಾರಾಟವಾಗಿದ್ದರೆ ಈ ವರ್ಷ ಆಗಸ್ಟ್ ನಲ್ಲಿ 15,59,665 ದ್ವಿಚಕ್ರ ವಾಹನಗಳು ಮಾರಾಟವಾಗಿ ಒಟ್ಟಾರೆ ಶೆ. 3 ಅಭಿವೃದ್ಧಿ ದಾಖಲಾಗಿದೆ.
ಕಳೆದ ವರ್ಷ ಆಗಸ್ಟ್ ನಲ್ಲಿ 9,37,486 ಮೋಟಾರ್ ಬೈಕ್‌ಗಳು ಮಾರಾಟವಾಗಿದ್ದರೆ, ಈ ವರ್ಷ 10,32,476 ಮೋಟಾರುಬೈಕುಗಳು ಮಾರಾಟವಾಗಿವೆ. ಬೈಕ್ ಗಳ ಮಾರಾಟದಲ್ಲಿ ಶೇ. 10.13 ಆಭಿವೃದ್ಧಿಯಾಗಿದ್ದರೂ ಇದೇ ವೇಳೆ ಸ್ಕೂಟರ್ ಗಳ ಮಾರಾಟದಲ್ಲಿ ಶೆ. 12.3 ಇಳಿಮುಖವಾಗಿದೆ.



















