ಬೆಂಗಳೂರು, ಸೆ. 3 : ಗ್ರಾಮ ಪಂಚಾಯತ್ ಚುನಾವಣೆಗೆ ಸಂಬಂಧಿಸಿದಂತೆ ರಾಜ್ಯ ಚುನಾವಣಾ ಆಯೋಗ ಮಾರ್ಗಸೂಚಿ ಪ್ರಕಟಿಸಿದ್ದು, ಹೀಗಾಗಿ ಅಕ್ಟೋಬರ್ ಅಥವಾ ನವಂಬರ್‌ನಲ್ಲಿ ಚುನಾವಣೆ ಸಾಧ್ಯತೆ ಗೋಚರಿಸಿದೆ.
ಕೋವಿಡ್ ಪೀಡಿತರಿಗೂ ಸ್ಪರ್ಧೆಗೆ ಅವಕಾಶ, ಪ್ರಚಾರದ ವೇಳೆ ಅಭ್ಯರ್ಥಿ ಜತೆ 5 ಮಂದಿಗೆ ಮಾತ್ರ ಹೋಗಬೇಕು, , ಸಾಮಾಜಿಕ ಅಂತರ, ಮಾಸ್ಕ್ ಕಡ್ಡಾಯ, ಗೆದ್ದ ಮೇಲೆ ವಿಜಯೋತ್ಸವ ಆಚರಣೆ ಇಲ್ಲ… ಹೀಗೆ ಗ್ರಾಮ ಪಂಚಾಯತ್ ಚುನಾವಣೆಗೆ ಚುನಾವಣಾ ಆಯೋಗ ಬಿಡುಗಡೆ ಮಾಡಿರುವ ಮಾರ್ಗಸೂಚಿಯಲ್ಲಿ ಕೆಲವು ನಿಯಮಗಳಿವೆ.
ಚುನಾವಣಾ ಕರ್ತವ್ಯದಲ್ಲಿರುವ ಪ್ರತಿಯೊಬ್ಬ ಸಿಬ್ಬಂದಿ ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು, ಚುನಾವಣೆ ಕೊಠಡಿ ಪ್ರವೇಶಿಸುವ ಮುನ್ನ ಸ್ಯಾನಿಟೈಸ್ ಮಾಡಿಕೊಳ್ಳಬೇಕು, ಜೊತೆಗೆ ದೈಹಿಕ ಉಷ್ಣಾಂಶ ಪರೀಕ್ಷೆ ಮಾಡಿಸಿಕೊಳ್ಳುವ ಜೊತೆಗೆ ಸಾಧ್ಯವಾದಷ್ಟು ವಿಶಾಲವಾದ ಕೊಠಡಿಯಲ್ಲಿ ಚುನಾವಣಾ ಕೆಲಸ ನಡೆಯಬೇಕು ಎಂದು ಹೇಳಿದೆ.

ಚುನಾವಣೆಗೆ ಸಂಬಂಧಿಸಿದ ಕಡತಗಳು ದಸ್ತಾವೇಜುಗಳು ಸಂಪೂರ್ಣವಾಗಿ ಸೋಂಕು ನಿವಾರಕ ಕೊಠಡಿಯಲ್ಲಿ ಬಿಡಬೇಕು ಜೊತೆಗೆ ಅದರ ಕರ್ತವ್ಯಕ್ಕೆ ಸಿಬ್ಬಂದಿಯನ್ನು ನಿಯೋಜಿಸಬೇಕು ಅವರು ಮಾತ್ರ ಒಳಗೆ ಹೋಗಲು ಅವಕಾಶ ಕಲ್ಪಿಸಬೇಕು ಎಂದು ಮಾರ್ಗಸೂಚಿಯಲ್ಲಿ ಹೇಳಲಾಗಿದೆ.
ಚುನಾವಣಾಧಿಕಾರಿಗಳು ನಾಮಪತ್ರ ಸ್ವೀಕರಿಸುವ ವೇಳೆ ಫೇಸ್ ಮಾಸ್ಕ್ ಧರಿಸಬೇಕು. ಕೈಗಳಿಗೆ ಗ್ಲೌಸ್ ಕಡ್ಡಾಯವಾಗಿ ಧರಿಸಬೇಕು.ಅಭ್ಯರ್ಥಿ ನಾಮಪತ್ರ ಸಲ್ಲಿಸುವ ವೇಳೆ ಅಭ್ಯರ್ಥಿ ಮತ್ತು ಒಬ್ಬ ಸೂಚಕನಿಗೆ ಮಾತ್ರ ಚುನಾವಣಾಧಿಕಾರಿ ಕೊಠಡಿ ಪ್ರವೇಶಿಸಲು ಅವಕಾಶವಿರುತ್ತದೆ. ಕೊರೊನಾ ಪಾಸಿಟಿವ್ ವ್ಯಕ್ತಿ ನಾಮಪತ್ರ ಸಲ್ಲಿಸಲು ಇಚ್ಛಿಸಿದರೆ ಸೂಚಕರ ಮೂಲಕ ನಾಮಪತ್ರ ಸಲ್ಲಿಸಬಹುದು ಎಂದು ತಿಳಿಸಿದೆ.
ಸಾಮಾಜಿಕ ಅಂತರ ಕಾಯ್ದುಕೊಂಡು ಐದು ಮಂದಿಗೆ ಮಾತ್ರ ಪ್ರಚಾರ ಮಾಡಲು ಅವಕಾಶವಿರುತ್ತದೆ. ಪ್ರಚಾರದ ವೇಳೆ ಫೇಸ್ ಮಾಸ್ಕ್ ಧರಿಸಬೇಕು. ಅಭ್ಯರ್ಥಿಗಳು ಪ್ರಚಾರಕ್ಕಾಗಿ ನಿಯಮಾನುಸಾರ ಮುದ್ರಿಸಿದ ಕರಪತ್ರಗಳನ್ನು ಹಂಚುವಾಗ ಕಡ್ಡಾಯವಾಗಿ ಫೇಸ್ ಮಾಸ್ಕ್ ಧರಿಸಬೇಕು ಎನ್ನುವ ನಿರ್ಬಂಧ ವಿಧಿಸಲಾಗಿದೆ.
ಮತದಾನದ ದಿನ ಮತಗಟ್ಟೆ ಅಧಿಕಾರಿಗಳು ಫೇಸ್ ಮಾಸ್ಕ್ ಹ್ಯಾಂಡ್ ಗ್ಲೌಸ್ ಧರಿಸಬೇಕು. ಮತದಾರರು ಫೇಸ್ ಮಾಸ್ಕ್ ಧರಿಸಿ ಸಾಮಾಜಿಕ ಅಂತರ ಕಾಯ್ದುಕೊಂಡು ಮತದಾನ ಮಾಡಬೇಕು. ಮತದಾನ ಕೊಠಡಿ ಪ್ರವೇಶಿಸುವ ವೇಳೆ ಕೋವಿಡ್ ಥರ್ಮಲ್ ಜ್ವರ ತಪಾಸಣೆ ಕಡ್ಡಾಯ ಮಾಡಬೇಕು ಎಂದು ರಾಜ್ಯ ಚುನಾವಣಾ ಆಯೋಗ ತನ್ನ ಹತ್ತು ಪುಟಗಳ
ಸುದೀರ್ಘ ಮಾರ್ಗಸೂಚಿಯಲ್ಲಿ ತಿಳಿಸಿದೆ.



















