ಇಂದಿನ ಐಕಾನ್- ಶೂನ್ಯದಿಂದ ಸಾಮ್ರಾಜ್ಯ ಕಟ್ಟಿದ ಸತೀಶ್ (ರಾವ್) ಮರಾಠೆ

( ಭಾಗ 3)

        ನಮ್ಮ ಇಂದಿನ ಐಕಾನ್ ಸತೀಶ್ ರಾವ್ ಮಾತಿನಲ್ಲಿ  ಜಗತ್ತನ್ನು ಗೆದ್ದ ಖುಷಿ ಇತ್ತು. ಅವರ ಭಾವನೆಗಳನ್ನು ಅವರ  ಮಾತುಗಳಲ್ಲೇ ಕೇಳೋಣ.

       ಅಪ್ಪನ ಅಂತ್ಯಕ್ರಿಯೆಗೆಂದು  ನಾನು ಊರಿಗೆ ಬಂದಾಗ ನಮ್ಮ ಹಿರಿಯಡ್ಕದ ಮನೆಯಲ್ಲಿ ನೀರವ ಮೌನ ನೆಲೆಸಿತ್ತು. ನನ್ನ ಕರ್ತವ್ಯಗಳನ್ನು ಸರಿಯಾಗಿ ನಿಭಾಯಿಸಿ ನಾನು ನನ್ನ ಕರ್ಮಭೂಮಿ ಅಮೇರಿಕಕ್ಕೆ ಹಿಂದಿರುಗುವ ಸೂಚನೆ  ದೊರೆತಂತೆ ಭೂಕಂಪ, ಜ್ವಾಲಾಮುಖಿ ಒಟ್ಟೊಟ್ಟಿಗೆ ಸಂಭವಿಸಿತು. ಮನೆಯವರನ್ನು  ಎದುರು ಕೂರಿಸಿ ಕನ್ವಿನ್ಸ್ ಮಾಡುವುದು ನನಗೆ ತುಂಬಾ ಕಷ್ಟ ಅನ್ನಿಸಿತು. ನಾನು  ಯಾವುದನ್ನು ಬೇಕಾದರೂ ಧೈರ್ಯವಾಗಿ ಎದುರಿಸುತ್ತೇನೆ, ಆದರೆ ಅಮ್ಮನ ಕಣ್ಣೀರಿನ  ಮುಂದೆ  ಕರಗಿ ಹೋಗುತ್ತೇನೆ! ಕೊನೆಗೂ ಅಮ್ಮ ಒಪ್ಪಿ ನನ್ನ ಹರಸಿದರು. ಧರ್ಮಸ್ಥಳಕ್ಕೆ ಹೋಗಿ ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗ್ಗಡೆಯವರ ಆಶೀರ್ವಾದ ಪಡೆದು ಮತ್ತೆ ಅಮೆರಿಕದ ವಿಮಾನ ಹತ್ತಿದೆ.

        ನನ್ನ ಹೋರಾಟದ ಕೊನೆಯ ಇನ್ನಿಂಗ್ಸ್ ಶುರು  ಆಗಿತ್ತು. ವಿಮಾನ ಮೋಡಗಳ ನಡುವೆ ಗಾಳಿಯಲ್ಲಿ ತೇಲುತ್ತಾ ಹೋದಂತೆ ಮನಸಾರೆ ಅತ್ತು ಹೃದಯ ಹಗುರ ಮಾಡಿಕೊಂಡೆ.  ಅಮೇರಿಕಕ್ಕೆ ಬಂದಿಳಿದ  ಕೂಡಲೇ ನನ್ನ ಹೊಸ ರೆಸ್ಟೋರೆಂಟ್ ಶೀರ್ಷಿಕೆಯನ್ನು ರಿಜಿಸ್ಟರ್ ಮಾಡಿಕೊಂಡೆ. ಅದು ನನ್ನ ಕನಸಿನ ಹೊಟೇಲು ‘UDIPI CAFE’ ಆಗಿತ್ತು! (ಈ ಮೊದಲೇ UDUPI CAFE ಎಂಬ  ಜನಪ್ರಿಯ ಹೊಟೇಲು ಇತ್ತು ಮತ್ತು ನಾನು ಅದರಲ್ಲಿ ಕೆಲಸ ಮಾಡಿದ್ದು ನಿಮಗೆ ಗೊತ್ತಿದೆ). ನನ್ನ ಹೊಟೇಲು ಅಮೆರಿಕದ ಸಂಪೂರ್ಣ ಸಸ್ಯಾಹಾರಿ ಹಾಗೂ ಭಾರತೀಯ ಖಾದ್ಯಗಳ ವಿಶೇಷತೆ ಹೊಂದಿತ್ತು.

      ಹೊಸ ಹೊಟೇಲು, ಹೊಸ ಉದ್ಯಮ ಸ್ಥಾಪನೆ ಮಾಡುವಾಗ ತುಂಬಾ ಸ್ನೇಹಿತರು ನನ್ನ ಗಾಳಿ ತೆಗೆಯುವ ಮಾತು ಆಡಿದ್ದರು. ಆದರೆ ನನ್ನ ಮಾತು ಸ್ಪಷ್ಟ ಇತ್ತು. “ನಾನು ಶೂನ್ಯದಿಂದ ಬಂದವನು. ಹಾಗೆ ನಾನು ಕಳೆದುಕೊಳ್ಳುವುದು ಏನೂ ಇಲ್ಲ! ಗೆದ್ದರೆ ಇನ್ನೊಂದು ಹೊಟೇಲು ಮಾಡುತ್ತೇನೆ. ಸೋತರೆ ಹೇಗೂ ಕಿಚನ್ ಕೆಲಸ ಗೊತ್ತಿದೆ. ವರಿ ಮಾಡಬೇಡಿ”  ಎಂದಿದ್ದೆ.

    ನನಗೆ ಗ್ರಾಹಕರ ನಾಡಿಮಿಡಿತ ಗೊತ್ತಿತ್ತು. ಭಾರತೀಯ ರೆಸಿಪಿ ಗೊತ್ತಿತ್ತು. ಗ್ರಾಹಕರು ಬಂದಾಗ ನಾನೇ ನಿಂತು ಅವರ ಆಸಕ್ತಿಗಳನ್ನು ಗಮನಿಸುತ್ತಿದ್ದೆ. ನಾನು ಬಾಸ್ ಎಂದು ಎಲ್ಲಿಯೂ ಪ್ರೊಜೆಕ್ಟ್ ಮಾಡುತ್ತಿರಲಿಲ್ಲ. ಪ್ರತೀ ದಿನವೂ  ಚಂದ ಚಂದ ಹೂಗಳಿಂದ ಹೋಟೆಲನ್ನು ಅಲಂಕಾರ ಮಾಡುತ್ತಿದ್ದೆ. ಮೆಲುವಾದ ಭಾರತೀಯ ಸಂಗೀತವನ್ನು ಅಳವಡಿಸಿಕೊಂಡಿದ್ದೆ. ಒಂದೆರಡು ವರ್ಷದ ಒಳಗೆ ನನ್ನ ಹೋಟೆಲ್ ನ್ಯೂಯಾರ್ಕ್ ನಗರದ ಸ್ಟಾರ್ ಆಕರ್ಷಣೆ ಆಯಿತು! ಭಾರತದ ಯಾವುದೇ ಸೆಲೆಬ್ರಿಟಿಗಳು, ಕಲಾವಿದರು, ರಾಜಕಾರಣಿಗಳು ಅಮೇರಿಕಕ್ಕೆ ಬಂದಾಗಲೂ ನನ್ನ ಹೋಟೆಲನ್ನು  ಹುಡುಕಿಕೊಂಡು ಬರುತ್ತಿದ್ದರು.

      ಅಬ್ದುಲ್ ಕಲಾಂ ರಾಷ್ಟ್ರಪತಿ ಆಗಿದ್ದಾಗ ಎರಡು ವಾರಗಳ ಪ್ರವಾಸಕ್ಕೆ ಅಮೇರಿಕಕ್ಕೆ ಬಂದಿದ್ದರು. ಅವರು ಪೂರ್ಣ ಸಸ್ಯಾಹಾರಿ ಆಗಿದ್ದ ಕಾರಣ ಅವರ ಆತಿಥ್ಯದ ಜವಾಬ್ದಾರಿ ನನಗೆ ದೊರೆಯಿತು. ನಾನು ಅವರ ಜೊತೆಗೆ ಓಡಾಡಿ, ಅವರ ಪ್ರತೀ ಕ್ಷಣದ ಆವಶ್ಯಕತೆಗಳನ್ನು ಒದಗಿಸಿದೆ. ನಾನೇ ನಿಂತು ಬಡಿಸಿದೆ. ಅವರು ಹಿಂದೆ ಹೋಗುವಾಗ ” ಸತೀಶ್, ಐ ವಿಲ್ ನಾಟ್ ಫಾರ್ಗೆಟ್ ಯು ಬ್ರದರ್ ” ಎಂದದ್ದು ನನಗೆ ದೊರೆತ ಬಹು ದೊಡ್ಡ ಆಶೀರ್ವಾದ! ಅದೇ ರೀತಿ ಪ್ರಧಾನಿ ನರೇಂದ್ರ ಮೋದಿ, ಕರ್ನಾಟಕದ  ಮುಖ್ಯಮಂತ್ರಿ  ಯಡಿಯೂರಪ್ಪ, ಮಾಜಿ ಸಿಎಂ ಕುಮಾರಸ್ವಾಮಿ, S M ಕೃಷ್ಣ,  ಸಿದ್ದರಾಮಯ್ಯ, ವೀರಪ್ಪ ಮೊಯಿಲಿ, ಸದಾನಂದ ಗೌಡ, ಶೋಭಾ ಕರಂದ್ಲಾಜೆ, ಸಿನೆಮಾ ತಾರೆಗಳಾದ ಅಮಿತಾಬ್, ಅಭಿಷೇಕ್, ಐಶ್ವರ್ಯ ಮೊದಲಾದವರು, ಸಂಗೀತ  ದಿಗ್ಗಜಗಳಾದ ಜೇಸುದಾಸ್, SPB, ಅನೂಪ್ ಜಲೋಟಾ, ಉದಿತ್ ನಾರಾಯಣ್,  ಇಳಯರಾಜಾ, ಎ.ಆರ್. ರೆಹಮಾನ್, ಆಶಾ ಭೋಂಸ್ಲೆ, ಸೋನು ನಿಗಮ್, ಶ್ರೇಯಾ ಘೋಷಾಲ್, ಪಟ್ಲ ಸತೀಶ್ ಶೆಟ್ಟಿ….ಹೀಗೆ ದೊಡ್ಡ ದೊಡ್ಡ ವ್ಯಕ್ತಿಗಳು ನನ್ನ  ಹೋಟೆಲಿನ ಆತಿಥ್ಯವನ್ನು ಉಂಡಿರುವುದು ನನಗೆ ಅತೀ ಹೆಚ್ಚು ಸಂತೋಷ ನೀಡಿದೆ.

        ಅಮೆರಿಕದಲ್ಲಿ ನಡೆದ ನಾಲ್ಕು ‘ಅಕ್ಕ ಸಮ್ಮೇಳನಗಳಲ್ಲಿ’  ನಮ್ಮ ಉಡಿಪಿ ಹೋಟೆಲ್ ಕ್ಯಾಟರಿಂಗ್ ಸೇವೆಯನ್ನು  ಒದಗಿಸಿತು. ಇಲ್ಲಿ ನಡೆದ ವಿಶ್ವ ಬಂಟರ ಸಮ್ಮೇಳನ, ವಿಶ್ವ  ಕೊಂಕಣಿ ಸಮ್ಮೇಳನ, ವಿಶ್ವ ಒಕ್ಕಲಿಗ ಸಮ್ಮೇಳನ, ವಿಶ್ವ ಜೈನ್ ಸಮ್ಮೇಳನ…ಹೀಗೆ ಬಹು ಮುಖ್ಯವಾದ ಸಮ್ಮೇಳನಗಳು ನಮ್ಮ ಕ್ಯಾಟರಿಂಗ್ ಸೇವೆಯನ್ನು ಬಳಸಿಕೊಂಡಿವೆ. “ಇಂಚಿನ ಸೋಕುದ ವಣಾಸ್ ನಮ  ಊರುಡ್ಲ ಮಲ್ತದಿಜ” ಎಂದು ಅವರು ಮೆಚ್ಚುಗೆಯನ್ನು  ವ್ಯಕ್ತಪಡಿಸಿದ್ದು ನಮಗೆ ನಿಜವಾದ ಆಶೀರ್ವಾದ!

       ಇದೀಗ ಅಮೆರಿಕಾದ ಬೇರೆ ಬೇರೆ ನಗರಗಳಲ್ಲಿ ನಮ್ಮ ಎಂಟು ಹೋಟೆಲುಗಳು ಇವೆ!  ‘ಉಡಿಪಿ ಕೆಫೆ’ ಇಂದು ಇಡೀ  ಅಮೆರಿಕದ ಬ್ರಾಂಡ್ ಓನ್ ಸಸ್ಯಾಹಾರಿ ಹೊಟೇಲು ಆಗಿದೆ. ನಾವು ಮೈಕ್ರೋಸಾಫ್ಟ್ ಕಂಪೆನಿ ಮತ್ತು ಇನ್ನೂ ಹಲವು  ಬಹುರಾಷ್ಟ್ರೀಯ ಕಂಪೆನಿಗಳ ಆಫಿಷಿಯಲ್ ಕ್ಯಾಟರರ್ ಆಗಿದ್ದೇವೆ. ಟ್ವಿಟ್ಟರ್ ಮತ್ತು ಶಿಪ್ಪಿಂಗ್ ಸಮ್ಮೇಳನ ನಡೆದಾಗ ಜನ ಕಿಕ್ಕಿರಿದು ಸೇರಿ ನಮ್ಮ ಮೆನುವನ್ನು ಚಪ್ಪರಿಸಿ ಊಟ ಮಾಡುವಾಗ ಧನ್ಯತಾ ಭಾವ ಮೂಡುತ್ತದೆ. ನನ್ನ ಹೊಟೇಲು ಸರಣಿಗೆ ಹತ್ತಾರು ರಾಷ್ಟ್ರ ಮತ್ತು  ಅಂತಾರಾಷ್ಟ್ರೀಯ ಪ್ರಶಸ್ತಿಗಳು ಬಂದಿದ್ದು ಅವೆಲ್ಲಕಿಂತ ಹೆಚ್ಚು ಜನರ ಪ್ರೀತಿ ಎಂದು ನನ್ನ ಭಾವನೆ.

     ನಾನು ಸಾಯಿಬಾಬಾ ಅವರ ಭಕ್ತ. 1990ರಲ್ಲೀ ನಾನು ಭಾರತೀಯ ಮೂಲದ  ಸಂಗೀತಾ ಅವರನ್ನು ಮದುವೆ ಆಗಿದ್ದೇನೆ. ನನ್ನ ಇಬ್ಬರು ಮಕ್ಕಳು ಸಾಯಿ ರಾಜ್ ಮತ್ತು ಸಾಯಿ ದೇವ್ ಸ್ನಾತಕೋತ್ತರ ಪದವಿ ಪಡೆದಿದ್ದಾರೆ.

ಪುಟ್ಟಪರ್ತಿಯ ಹತ್ತಿರ 150 ವಿಶೇಷ ಚೇತನ ಮಕ್ಕಳ ಒಂದು  ಶಾಲೆಯನ್ನು ಸಂಪೂರ್ಣ  ದತ್ತು ಸ್ವೀಕಾರ ಮಾಡಿದ್ದೇನೆ. ಪ್ರತೀ  ವರ್ಷಕ್ಕೊಮ್ಮೆ ಊರಿಗೆ ಬಂದೇ ಬರುತ್ತೇನೆ. ಊರಿನ ಹತ್ತಾರು ಸೇವಾ ಸಂಸ್ಥೆಗಳಿಗೆ ನನ್ನಿಂದ  ಆದಷ್ಟು ಧನಸಹಾಯವನ್ನು  ಮಾಡಿದ್ದೇನೆ. ನನಗೆ ಪ್ರಚಾರದ ಆಸೆ ಇಲ್ಲ. ಉಡುಪಿಯ ಯಕ್ಷಗಾನ ಕಲಾರಂಗ, ಬಂಟಕಲ್ಲಿನ ರಾಜಾಪುರ ಸಾರಸ್ವತ ಸಭಾಂಗಣ, ಕಾರ್ಕಳದ ವಾತ್ಸಲ್ಯ ಎಂಬ ಹೆಸರಿನ ವೃದ್ಧಾಶ್ರಮ, ನನ್ನೂರು ಹಿರಿಯಡ್ಕದ ವೀರಭದ್ರ ಸ್ವಾಮಿ ದೇವಾಲಯ ಇವುಗಳಿಗೆ ಸಾಕಷ್ಟು ಕೊಡುಗೆ ನೀಡಿದ್ದೇನೆ. ಕೆರೆಯ ನೀರನು ಕೆರೆಗೆ ಚೆಲ್ಲಿ ಎಂದು ಪುರಂದರ ದಾಸರು ಹೇಳಿದ ಹಾಗೆ ಅದು!

     ನನ್ನ ಎಲ್ಲಾ  ಸಹೋದರಿಯರಿಗೆ ಮದುವೆ ಮಾಡಿಸಿದ್ದೇನೆ. ನನ್ನ ಕರ್ತವ್ಯಗಳನ್ನು ಸರಿಯಾಗಿ ನೆರವೇರಿಸಿದ ಖುಷಿ ಇದೆ.

        ಅಮೆರಿಕದಲ್ಲಿ ಐದು ತಿಂಗಳಿಂದ KOVID 19 ಪರಿಣಾಮವಾಗಿ ಜನರು ಕಷ್ಟ ಪಡುತ್ತಿದ್ದಾರೆ. ಈ ಅವಧಿಯಲ್ಲಿ ಪ್ರತೀ ದಿನವೂ ಹಸಿದು ಬಂದ 300-400 ಜನರಿಗೆ ನಮ್ಮ  ಹೊಟೇಲು ಉಚಿತ ಊಟ ಕೊಟ್ಟಿದೆ. ಇನ್ನೂ ಕೊಡುತ್ತೇವೆ. ಅಶಕ್ತರಿಗೆ ಮತ್ತು ವೃದ್ಧರಿಗೆ ಅವರ ಮನೆಗೆ ಹೋಗಿ ನಾವು ಉಚಿತ ಊಟ ನೀಡಿ ಬಂದಿದ್ದೇವೆ. ಇದು ನನಗೆ ಯಾವಾಗಲೂ ಖುಷಿ ಕೊಡುವ ಕೆಲಸ. ಯಾಕಂದರೆ….. ನಾನು ಬೈಸಿಕಲ್ ಹಿಂದೆ ಸೋಡಾ ಟ್ರೆ ಕಟ್ಟಿಕೊಂಡು ಹೋಗಿ ಹಿರಿಯಡ್ಕ ಪೇಟೆಯಲ್ಲಿ ಸೋಡಾ ಮಾರಾಟ ಮಾಡಿದ್ದು, ಊರಿನ ಯಕ್ಷಗಾನ,  ಜಾತ್ರೆಯಲ್ಲಿ ಕಡ್ಲೆ ಮಾರಿ ಚಿಲ್ಲರೆ ಹಣ ಸಂಪಾದನೆ ಮಾಡಿದ್ದು, ಹಲವು ವರ್ಷಗಳ ಕಾಲ ಖಾಲಿ  ಹೊಟ್ಟೆಯಲ್ಲಿ ಮಲಗಿದ್ದು, ರಸ್ತೆ ಬದಿಯಲ್ಲಿ ಮಲಗಿ ರಾತ್ರಿಯನ್ನು ಹಗಲು ಮಾಡಿದ್ದು! ಇದ್ಯಾವುದೂ ನನಗೆ  ಮರೆತುಹೋಗಿಲ್ಲ ಎಂದು ಸತೀಶ್ ರಾವ್ ಮಾತು ಮುಗಿಸಿದರು.

ಸತೀಶ್ ರಾವ್ ಅವರ ಹೃದಯ ತಟ್ಟುವ ಕಥೆ ನನ್ನ ಮನಸ್ಸನ್ನು ಕಲಕಿಬಿಟ್ಟಿದೆ. ಅವರಿಗೆ ದೇವರು ಇನ್ನಷ್ಟು ಶಕ್ತಿ ಕೊಡಲಿ ಎನ್ನುವುದೇ ನನ್ನ ಪ್ರಾರ್ಥನೆ.

ನೆರವು – ಸಿಯಾ ಸಂತೋಷ್ ನಾಯಕ್.

ಬರಹ – ರಾಜೇಂದ್ರ ಭಟ್ ಕೆ.









































































































error: Content is protected !!
Scroll to Top