ತಿರುವನಂತಪುರ,ಆ.26: ಅಕ್ಟೋಬರ್ ತಿಂಗಳಿಂದ ಪ್ರಸಿದ್ಧ ಶಬರಿಮಲೆ ಕ್ಷೇತ್ರ ಭಕ್ತರಿಗೆ ತೆರೆದುಕೊಳ್ಳಲಿದೆ. ಕೊರೊನಾ ಕಾರಣದಿಂದ ಕೆಲ ಕಾಲ ಮುಚ್ಚಿದ್ದ ಕ್ಷೇತ್ರದ ಬಾಗಿಲನ್ನು ಈಗಾಗಲೇ ತೆರೆಯಲಾಗಿದ್ದರೂ ಭಕ್ತರಿಗೆ ಇನ್ನೂ ಪ್ರವೇಶಕ್ಕೆ ಅನುಮತಿ ನೀಡಲಾಗಿಲ್ಲ. ಇದೀಗ ಕೇರಳೀಯರ ತುಲಾ ಮಾಸಂನಲ್ಲಿ ಭಕ್ತರಿಗೆ ಕ್ಷೇತ್ರ ಪ್ರವೇಶ ನೀಡಲು ದೇವಸ್ವಂ ಮಂಡಳಿ ತೀರ್ಮಾನಿಸಿದೆ ಎಂದು ಮಲಯಾಳಂ ಮಾಧ್ಯಮಗಳು ವರದಿ ಮಾಡಿವೆ.
ಪ್ರಸ್ತುತ ಕ್ಷೇತ್ರದ ವಿಧಿಗಳಿಗೆ ಯಾವುದೇ ತಡೆಯಾಗದಂತೆ ನೋಡಿಕೊಳ್ಳಲಾಗುತ್ತಿದೆ. ಪ್ರತಿ ತಿಂಗಳ ಐದು ದಿನದ ಪೂಜೆ ವಿಧಿಯುಕ್ತವಾಗಿ ನೆರವೇರುತ್ತಿದೆ.
ತುಲಾ ಮಾಸದಲ್ಲಿ ಅಯ್ಯಪ್ಪ ಸ್ವಾಮಿಗೆ ಐದು ದಿನಗಳ ವಿಶೇಷ ಪೂಜೆ ನೆರವೇರಲಿದೆ. ಈ ಸಂದರ್ಭದಲ್ಲಿ ಕೊರೊನಾ ಸುರಕ್ಷಾ ಮಾರ್ಗಸೂಚಿಗಳನ್ನು ಪಾಲಿಸಿ ದೇಗುಲಕ್ಕೆ ಭಕ್ತರಿಗೆ ಪ್ರವೇಶ ಅವಕಾಶ ನೀಡಲಾಗುವುದು ಎಂದು ದೇವಸ್ವಂ ಸಚಿವ ಕಡಕಂಪಳ್ಳಿ ಸುರೇಂದ್ರನ್ ಹೇಳಿದ್ದಾರೆ.

ಅಕ್ಟೋಬರ್ 16ರಿಂದ 21ರ ತನಕ ದೇಗುಲ ತೆರೆದಿರುತ್ತದೆ. ಅನಂತರ ಮಂಡಲ ಪೂಜೆಗೆ ತೆರೆಯುತ್ತಾರೆ. ತುಲಾ ಮಾಸದಲ್ಲಿ ಭಕ್ತರಿಗೆ ಪ್ರವೇಶ ಅವಕಾಶ ಸಿಕ್ಕಿರುವುದರಿಂದ ಈ ವರ್ಷ ಕೊರೊನಾ ನಿಯಮಕ್ಕೊಳಪಟ್ಟು ಮಂಡಲ ಮತ್ತು ಮಕರ ಪೂಜೆಗೆ ಭಕ್ತರಿಗೆ ಶಬರಿಮಲೆ ಯಾತ್ರೆಗೈಯ್ಯಲು ಅವಕಾಶ ಸಿಗುವ ಸಾಧ್ಯತೆಯಿದೆ.
























