ಮಂಗಳೂರು, ಆ. 26:ಯಕ್ಷಗಾನ ಛಂದೋಬ್ರಹ್ಮ ಎಂದೇ ಖ್ಯಾತರಾಗಿದ್ದ ಹಿರಿಯ ವಿದ್ವಾಂಸ ಡಾ.ಶಿಮಂತೂರು ಎನ್.ನಾರಾಯಣ ಶೆಟ್ಟಿಯವರು (87) ಅಲ್ಪಕಾಲದ ಅನಾರೋಗ್ಯದಿಂದಾಗಿ ಆ.26 ರಂದು ನಿಧನರಾದರು.
ಯಕ್ಷಗಾನ ವಿದ್ವಾಂಸರಾಗಿದ್ದ ನಾರಾಯಣ ಶೆಟ್ಟಿಯವರು ಬರೆದ ಯಕ್ಷಗಾನ ಛಂದೋಂಬುಧಿ ಕೃತಿಗೆ ಹಂಪಿ ವಿವಿ ಡಾಕ್ಟರೇಟ್ ನೀಡಿತ್ತು. ಸೊರ್ಕುದ ಸಿರಿಗೆಂಡೆ ಸೇರಿ ಹಲವು ಯಶಸ್ವಿ ಯಕ್ಷಗಾನ ಪ್ರಸಂಗಗಳನ್ನು ಅವರು ರಚಿಸಿದ್ದಾರೆ. ಕರಾವಳಿಯ ಆತಿ ಜನಪ್ರಿಯ ಪ್ರಸಂಗ ಶ್ರೀ ದೇವಿ ಮಹಾತ್ಮೆಯನ್ನು ಅವರು 14 ವರ್ಷ ಪ್ರಾಯದಲ್ಲೇ ರಚಿಸಿದ್ದರು. ಪಾರ್ತಿಸುಬ್ಬ ಯಕ್ಷಗಾನ ಪ್ರಶಸ್ತಿ ಪಡೆದ ಮೊದಲಿಗರು ಅವರು. ಯಕ್ಷಾಂಗಣ ಮಂಗಳೂರು, ಪಟ್ಲ ಫೌಂಡೇಷನ್ ಪ್ರಶಸ್ತಿ,ಉಡುಪಿ ಯಕ್ಷಗಾನ ಕಲಾರಂಗ ವತಿಯಿಂದ ಯಕ್ಷಗಾನ ಕ್ಷೇತ್ರದ ವಿಶಿಷ್ಠ ಸಾಧಕರಿಗೆ ನೀಡುವ ತಲ್ಲೂರು ಕನಕ ಅಣ್ಣಯ್ಯ ಶೆಟ್ಟಿ ಪ್ರಶಸ್ತಿ ಪುರಸ್ಕೃತರಾಗಿದ್ದರು. ಯಕ್ಷಗಾನದ ಛಂದಸ್ಸಿನ ಬಗ್ಗೆ ಆಳವಾದ ಜ್ಞಾನ ಹೊಂದಿದ, ಯಕ್ಷಗಾನ ಅಕಾಡೆಮಿಯ ಸದಸ್ಯರಾಗಿಯೂ ಸೇವೆ ಸಲ್ಲಿಸಿದ್ದಾರೆ.‘ಯಕ್ಷಗಾನ ನಾಗವರ್ಮ’ ಎಂದು ಖ್ಯಾತಿ ಹೊಂದಿದ್ದರು. ದ.ಕ.ಜಿಲ್ಲಾ ಕ.ಸಾ.ಪ.ವತಿಯಿಂದ ಉಪ್ಪಿನಂಗಡಿಯಲ್ಲಿ ಜರಗಿದ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಅವರು ಅಧ್ಯಕ್ಷರಾಗಿದ್ದರು.
ಗಣೇಶ ಕೊಲೆಕಾಡಿ ಸೇರಿ ನೂರಾರು ಶಿಷ್ಯರನ್ನು ಕಲಾ ಕ್ಷೇತ್ರಕ್ಕೆ ನೀಡಿದ ಹಿರಿಮೆ ಇವರದ್ದು. ಯಕ್ಷಗಾನ ವಿದ್ವಾಂಸ ಡಾ.ಎಂ.ಪ್ರಭಾಕರ ಜೋಶಿ, ದ.ಕ.ಜಿಲ್ಲಾ ಕಸಾಪ ಅಧ್ಯಕ್ಷ ಪ್ರದೀಪ ಕುಮಾರ್ ಕಲ್ಕೂರ ಯಕ್ಷಾಂಗಣ ಮಂಗಳೂರು ಕಾರ್ಯಾಧ್ಯಕ್ಷ ಭಾಸ್ಕರ ರೈ ಕುಕ್ಕುವಳ್ಳಿ, ಯಕ್ಷಗಾನ ಕಲಾರಂಗದ ಅಧ್ಯಕ್ಷ ಕೆ. ಗಣೇಶ್ ರಾವ್ ಕಾರ್ಯದರ್ಶಿ ಮುರಳಿ ಕಡೆಕಾರ್ ಸಂತಾಪ ಸೂಚಿಸಿದ್ದಾರೆ.

ಮೂಲ್ಕಿ ಸಮೀಪದ ಶಿಮಂತೂರು ಅವರ ಹುಟ್ಟೂರು. ಕೆಲ ಸಮಯದಿಂದ ಅವರು ಅಸ್ವಸ್ಥರಾಗಿದ್ದರು. ಪತ್ನಿ, ಇಬ್ಬರು ಪುತ್ರರು ಹಾಗೂ ಮೂವರು ಪುತ್ರಿಯರನ್ನು ಅಗಲಿದ್ದಾರೆ.





