ಮನೆಯೊಳಗೆ ಬಂದ ಕೇರೆ ಹಾವನ್ನು ಹುರಿದು ತಿಂದ ಭೂಪ!

ಎರ್ನಾಕುಳಂ, ಆ. 24: ಹಾವು ಮನೆಯೊಳಗೆ ಬಂದರೆ ಹೆದರಿ ಹೌಹಾರಿ ಹೋಗುತ್ತೇವೆ. ಹಾವಾಡಿಗರನ್ನು ಕರೆಸಿ ಹಾವನ್ನು ಹಿಡಿಸುತ್ತೇವೆ. ಸ್ವಲ್ಪ ಧೈರ್ಯವಂತರಾದರೆ ಹಾವನ್ನು ಹೊಡೆದು ಸಾಯಿಸಬಹುದು. ಆದರೆ ಎರ್ನಾಕುಳಂ ಜಿಲ್ಲೆಯ ಕೋತಮಂಗಳಂನ ಈ ವ್ಯಕ್ತಿ ಮನೆಯೊಳಗೆ ಬಂದ ಕೇರೆ ಹಾವನ್ನು  ಏನು ಮಾಡಿದ ಎಂದು ತಿಳಿದರೆ ನೀವು ಬೆಚ್ಚಿಬೀಳುತ್ತಿರಾ.

ಮಾರಪಟ್ಟಿ ಬಿಜು ಅಲಿಯಾಸ್‌  ವಿ.ಜೆ.ಬಿಜು (36) ಎಂಬ ಈ ವ್ಯಕ್ತಿ ಶನಿವಾರ ಸಂಜೆ ಹೊತ್ತಿಗೆ ಮನೆಯೊಳಗೆ ನುಸುಳಿ ಬಂದ ಕೇರೆ ಹಾವನ್ನು ಹೊಡೆದು ಕೊಂದದ್ದಲ್ಲದೆ ಕತ್ತರಿಸಿ ಮಸಾಲೆ ಹಾಕಿ ಪದಾರ್ಥ ಮಾಡಿದ್ದಾನೆ. ಒಂದಷ್ಟು ತುಂಡುಗಳನ್ನು ಮಸಾಲೆಯಲ್ಲಿ ಅದ್ದಿ ಫ್ರೈ ಮಾಡಿದ್ದಾನೆ.

ಇಷ್ಟೆಲ್ಲ ಮಾಡಿ ತಿಂದು ಸುಮ್ಮನಾಗಿದ್ದರೆ ಸಮಸ್ಯೆಯಾಗುತ್ತಿರಲಿಲ್ಲ. ತನ್ನ ಸಾಹಸವನ್ನು ಕೊಚ್ಚಿಕೊಳ್ಳುವ ಉಮೇದು ಬಂದು ಹೆಬ್ಬಾವು ಹಿಡಿದು ಮಾಂಸ ಮಾಡಿ ತಿಂದಿದ್ದೇನೆ ಎಂದು ಊರೆಲ್ಲ ಹೇಳಿಕೊಂಡು ಬಂದಿದ್ದಾನೆ.  ಇದು ಬಾಯಿಂದ ಬಾಯಿಗೆ ಹರಡಿ ಅರಣ್ಯ ಇಲಾಖೆಯವರ ಕಿವಿಗೂ ಬಿದ್ದಿದೆ.

ಅಧಿಕಾರಿಗಳು ಬಂದು ಪರಿಶೀಲನೆ ಮಾಡಿದಾಗ ಬಿಜು ಹಿಡಿದದ್ದು ಹೆಬ್ಬಾವು ಅಲ್ಲ, ಕೇರೆ ಹಾವು ಎಂದು ಬಯಲಾಗಿದೆ. ಅರಣ್ಯಾಧಿಕಾರಿಗಳು  ಬಿಜುವನ್ನು ಬಂಧಿಸಿ ಕೇಸು ದಾಖಲಿಸಿಕೊಂಡಿದ್ದಾರೆ. ಕೇರೆ ಹಾವುಗಳು ವನ್ಯಮೃಗ ಸಂರಕ್ಷಣಾ ಕಾಯಿದೆಯ ಎರಡನೇ ಶೆಡ್ಯೂಲ್‌ ಅಡಿಯಲ್ಲಿ  ಸಂರಕ್ಷಿತ ಜೀವಿಗಳು. ಇವುಗಳನ್ನು ಕೊಲ್ಲುವುದು ಅಪರಾಧ.







































































error: Content is protected !!
Scroll to Top