ಇಂದಿನ ಐಕಾನ್ – ಭಾರತಕ್ಕೆ ಆಧುನಿಕ ದೃಷ್ಟಿಕೋನ ಕೊಟ್ಟ ಪ್ರಧಾನಿ ರಾಜೀವ್ ಗಾಂಧಿ

ಕೇವಲ ನಲ್ವತ್ತನೆಯ  ವಯಸ್ಸಿನಲ್ಲಿ ಭಾರತದ ಪ್ರಧಾನಿಯಾಗಿ ಅಧಿಕಾರ  ಪಡೆದಿದ್ದ ರಾಜೀವ್ ಗಾಂಧಿಗೆ  ಇಂದು( ಆಗಸ್ಟ್ 20) ಹುಟ್ಟಿದ ಹಬ್ಬ. ಅತ್ಯಧಿಕ ಬಹುಮತದ ಸರಕಾರವನ್ನು ಮುನ್ನಡೆಸಿದ ಕೀರ್ತಿ ಕೂಡ ಅವರಿಗೆ ಸಲ್ಲಬೇಕು.

1944 ಆಗಸ್ಟ್ 20ರಂದು ಇಂದಿರಾ ಗಾಂಧಿ ಮತ್ತು ಫಿರೋಜ್ ಗಾಂಧೀ ಅವರ ಹಿರಿಯ ಮಗನಾಗಿ  ಮುಂಬೈಯಲ್ಲಿ ಜನಿಸಿದ ರಾಜೀವ್ ಬಾಲ್ಯದಲ್ಲಿ ನಾಚಿಕೆಯ ಹುಡುಗ ಮತ್ತು ಅಂತರ್ಮುಖಿ ಆಗಿದ್ದರು. ಚಿತ್ರಕಲೆ ಮತ್ತು ಪೈಂಟಿಂಗ್ ಅವರ ಆಸಕ್ತಿಯ ಕ್ಷೇತ್ರಗಳು. ಮುಂದೆ ಡೆಹ್ರಾಡೂನಿನ ಡೂನ್ ಶಾಲೆಯಲ್ಲಿ ಓದಿದ ನಂತರ  ಇಂಜಿನಿಯರಿಂಗ್ ಓದಲು ಲಂಡನ್ನಿಗೆ ಹೋದರು. ಆದರೆ ಓದಿನಲ್ಲಿ ಆಸಕ್ತಿ ಮೂಡದ ಕಾರಣ ಪದವಿ ಪಡೆಯದೆ  1966ರಲ್ಲಿ  ಭಾರತಕ್ಕೆ ಹಿಂದಿರುಗಿದರು.

ಆಗ ತಾಯಿ ಇಂದಿರಾ  ಗಾಂಧಿ ದೇಶದ  ಪ್ರಧಾನಮಂತ್ರಿ ಆಗಿದ್ದರು. ರಾಜೀವ್ ಅವರಿಗೆ ರಾಜಕೀಯದಲ್ಲಿ ಆಸಕ್ತಿ ಇರಲಿಲ್ಲ. ಅವರು ದೆಹಲಿಯಲ್ಲಿ ಪೈಲಟ್ ತರಬೇತಿ ಪಡೆದು ಏರ್‌ ಇಂಡಿಯ ವಿಮಾನದಲ್ಲಿ ಪೈಲಟ್ ಆಗಿ ಆಯ್ಕೆಯಾದರು. ಪ್ರಧಾನಿಯ ಮಗ, ನೆಹರೂ ಮೊಮ್ಮಗ ದುಡಿಯುವ ಅಗತ್ಯವೇ ಇರಲಿಲ್ಲ! ಆದರೆ ರಾಜೀವ್ ದುಡಿಮೆಯನ್ನು ಆರಿಸಿಕೊಂಡರು. ತಾನು ಪ್ರೀತಿಸಿದ ಸೋನಿಯಾ ಅವರನ್ನು ಮದುವೆ ಆದರು.

1980ರಲ್ಲಿ ಅವರ ತಮ್ಮ ಸಂಜಯ್ ಗಾಂಧಿ ವಿಮಾನ ಅಪಘಾತದಲ್ಲಿ ನಿಧನರಾದಾಗ ಅಮ್ಮ ಇಂದಿರಾ ಗಾಂಧಿ ಧೈರ್ಯ ಕಳೆದುಕೊಂಡರು. ಆಗ ಇಡೀ ಕಾಂಗ್ರೆಸ್ ಪಕ್ಷದ ಗೈಡ್ ಆಗಿದ್ದ ಸ್ವಾಮಿ ಸ್ವರೂಪಾನಂದ ಅವರು ರಾಜೀವ್ ಗಾಂಧಿ  ರಾಜಕೀಯಕ್ಕೆ ಬರಲೆ ಬೇಕು ಎಂದು ಮೊದಲು ಹೇಳಿದರು. ಕಾಂಗ್ರೆಸ್ಸಿನ ಎಂಬತ್ತು ಹಿರಿಯ ನಾಯಕರು ಇಂದಿರಾ  ಗಾಂಧಿಯವರ ಬಳಿ ಸಹಿ ಮಾಡಿದ ಪತ್ರ ತೆಗೆದುಕೊಂಡು  ಹೋದರು. ರಾಜೀವ್ ಮೇಲೂ ಒತ್ತಡ ತಂದರು. ಆಗ ರಾಜೀವ್ ತಾಯಿಯ ನೆರವಿಗೆ ಬರಲೇ ಬೇಕಾಯಿತು. ಅಮೇಠಿ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿ ಅವರು ಲೋಕಸಭೆ ಪ್ರವೇಶ ಮಾಡಿದರು. ಕಾಂಗ್ರೆಸ್ ಪಕ್ಷದ ಪ್ರಧಾನ ಕಾರ್ಯದರ್ಶಿ ಆಗಿ ಅವರು ಕೈಗೆತ್ತಿಕೊಂಡ ಮೊದಲ ಪ್ರೊಜೆಕ್ಟ್ ದೆಹಲಿಯ ಏಷಿಯನ್ ಗೇಮ್ಸ್ ಸ್ಪರ್ಧೆಯ ಆತಿಥ್ಯ ಮತ್ತು ಆಯೋಜನೆ.  ಅದು ಅದ್ಭುತವಾಗಿ ಮೂಡಿ ಬಂದಿತು.

1984 ಅಕ್ಟೋಬರ್ 31ರಂದು ದೇಶದ ಪ್ರಧಾನಿ ಇಂದಿರಾ ಗಾಂಧಿಯವರು ತನ್ನ ಅಂಗರಕ್ಷಕರ ಗುಂಡಿಗೆ ಬಲಿಯಾದಾಗ ಇಡೀ ದೇಶವು ನಡುಗಿ ಹೋಯಿತು. ದೇಶವು ಶೋಕದ ಕಡಲಲ್ಲಿ ಮುಳುಗಿದ್ದಾಗ ರಾಜೀವ್ ಗಾಂಧಿ ತನ್ನ ದುಃಖವನ್ನು ಅವುಡುಗಚ್ಚಿ  ಸಹಿಸಿಕೊಂಡು ದೇಶದ ಹೊಣೆಯನ್ನು ಹೊತ್ತರು. ಕೇವಲ 40 ವರ್ಷದ ಯುವ ಪ್ರಧಾನಿ ಪ್ರಮಾಣ ವಚನ ತೆಗೆದುಕೊಳ್ಳುವುದನ್ನು ರಾಷ್ಟ್ರವು ಭರವಸೆಯ ಕಣ್ಣುಗಳಿಂದ ನೋಡಿತು. ಆಗ ಲೋಕಸಭೆಯನ್ನು ವಿಸರ್ಜನೆ ಮಾಡಿ ಹೊಸ ಚುನಾವಣೆಗೆ ಹೋಗುವ ರಾಜೀವ್ ನಿರ್ಧಾರ ಭಾರೀ ಫಲವನ್ನು ಕೊಟ್ಟಿತು. ಲೋಕಸಭಾ ಚುನಾವಣೆ ನಡೆದು 542 ಲೋಕಸಭಾ ಕ್ಷೇತ್ರಗಳಲ್ಲಿ 411 ಸೀಟುಗಳನ್ನು  ಕಾಂಗ್ರೆಸ್ ಗೆದ್ದಿತು! ವಿಪಕ್ಷದ ಘಟಾನುಘಟಿ ನಾಯಕರು ಸೋತು ಹೋಗಿದ್ದರು. ಇಂದಿರಾ ಶೋಕದ ಅಲೆಯಲ್ಲಿ ಇಡೀ ದೇಶವು ರಾಜೀವ್ ಗಾಂಧಿಗೆ ಜೈ ಅಂದಿತ್ತು!

ಅದುವರೆಗೆ ರಾಜಕೀಯದಲ್ಲಿ ಆಸಕ್ತಿ ಇರದ ಮತ್ತು ಅಜ್ಞಾತವಾಗಿ ಉಳಿಯಲು ಆಸೆ ಪಟ್ಟಿದ್ದ ರಾಜೀವ್ ಈಗ ಇಡೀ ಭಾರತದ ರಾಜಕೀಯದ ಚುಕ್ಕಾಣಿ ಹಿಡಿದಿದ್ದರು! ಸುತ್ತಲೂ ಭಟ್ಟಂಗಿಗಳು, ಭೋ ಪರಾಕ್ ಹೇಳುವವರು ತುಂಬಿದ್ದ ಕಾಲ ಅದು! ಈ ಸಂದರ್ಭದಲ್ಲಿ ರಾಜೀವ್ ಗಾಂಧಿ ದಿಗಿಲು ಬಿದ್ದದ್ದು ಹೌದು. ಆದರೆ ಸುಂದರವಾದ ಮುಗುಳ್ನಗು, ಮೆದುವಾದ ಮಾತುಗಳು, ಜನಪರ ಕಾಳಜಿ, ವೈಜ್ಞಾನಿಕ ದೃಷ್ಟಿಕೋನ, ಜನಾಕರ್ಷಣೆಯ ವ್ಯಕ್ತಿತ್ವ ಮತ್ತು ಸ್ವಂತ ನಿರ್ಧಾರಗಳಿಂದ ಅವರು ಪೂರ್ಣ ಐದು ವರ್ಷ ಅಧಿಕಾರ ನಡೆಸಿದರು. ಆರಂಭದಲ್ಲಿ ಅನುಭವದ ಕೊರತೆ ಕಾಡಿದರೂ  ಕೆಲವೇ ದಿನಗಳಲ್ಲಿ ರಾಜಕೀಯ ಪಡಸಾಲೆಯಲ್ಲಿ ಪ್ರಬುದ್ಧತೆ ಪಡೆದರು.

ಆ ಅವಧಿಯಲ್ಲಿ ಲೋಕಸಭೆಯಲ್ಲಿ ಪೂರ್ಣ ಬಹುಮತ ಇದ್ದ ಕಾರಣ ಕೆಲವು ದೂರಗಾಮಿ ನಿರ್ಧಾರಗಳನ್ನು ತೆಗೆದುಕೊಳ್ಳಲು ಅವರಿಗೆ ಸಾಧ್ಯವಾಯಿತು.

1) ದೇಶದಲ್ಲಿ ಮೊತ್ತ ಮೊದಲ ಬಾರಿ ಪಕ್ಷಾಂತರ ನಿಷೇಧ ಕಾನೂನು ಜಾರಿಗೆ ತಂದರು.

2) ಅಂತಾರಾಷ್ಟ್ರೀಯ ವೇದಿಕೆಯಲ್ಲಿ, ವಿಶ್ವ ಸಂಸ್ಥೆಯಲ್ಲಿ ಅಣ್ವಸ್ತ್ರ ನಿಷೇಧ ಮತ್ತು ನಿಶ್ಯಸ್ತ್ರೀಕರಣ ಆಗಬೇಕು ಎಂದು ಪ್ರತಿಪಾದನೆ ಮಾಡಿದರು.

3)1986ರಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಗೆ ತಂದರು.

4) ಜವಾಹರ್ ನವೋದಯ ವಿದ್ಯಾಲಯಗಳ ಸ್ಥಾಪನೆ ಮಾಡಿದರು.

5) ಸ್ಯಾಮ್ ಪಿಟ್ರೊಡ  ಅವರ ನೆರವು ಪಡೆದು ಭಾರತದಲ್ಲಿ ಸಂಪರ್ಕ ಕ್ರಾಂತಿಗೆ ಕಾರಣರಾದರು. ಹಳ್ಳಿ ಹಳ್ಳಿಗಳಲ್ಲಿ ಟೆಲಿಫೋನ್ ಬೂತ್, ಟೆಲಿಫೋನ್ ಸೌಲಭ್ಯ ದೊರೆಯಿತು.

6) ಭಾರತಕ್ಕೆ ಅti ಅಗತ್ಯವಾಗಿದ್ದ ಸೂಪರ್ ಕಂಪ್ಯೂಟರ್ ಸಿದ್ಧವಾಯಿತು. ಭಾರತದ ಶ್ರೇಷ್ಟ ವಿಜ್ಞಾನಿಗಳ ಹಬ್ ನಿರ್ಮಾಣ ಆಯಿತು.

7) LTTE ಗಲಭೆಯಿಂದ ನಡುಗಿ ಹೋಗಿದ್ದ ಶ್ರೀಲಂಕಾ ನೆರವಿಗೆ ಶಾಂತಿ ಸೈನ್ಯವನ್ನು  ಕಳುಹಿಸಿದ್ದರು. ಈ ನಿರ್ಧಾರದ ಹಿಂದೆ ಶಾಂತಿ ಸ್ಥಾಪನೆಯ ಉದ್ದೇಶ ಇದ್ದರೂ ಮುಂದೆ ಅದು ಅವರ ಹತ್ಯೆಗೆ  ಕಾರಣವಾಯಿತು!

8) ಶಾಲೆಗಳ ಅಭಿವೃದ್ಧಿಗೆ ಆಪರೇಶನ್ ಬ್ಲಾಕ್ ಬೋರ್ಡ್ ಜಾರಿಗೆ ಬಂದಿತು.

9) ಮತದಾನದ ವಯಸ್ಸನ್ನು 21ರಿಂದ 18ಕ್ಕೆ ಇಳಿಸಿದ ನಿರ್ಧಾರ ಯುವಕರ ರಾಜಕೀಯ ಇಚ್ಛಾಶಕ್ತಿಯನ್ನು ಬಲಪಡಿಸಿತು.

10) ಗ್ರಾಹಕ ಹಿತರಕ್ಷಣಾ ಕಾಯಿದೆ ಒಂದು ಬಲಿಷ್ಠವಾದ ಕಾನೂನಾಗಿ ಜಾರಿಗೆ ಬಂದಿತು.

11) ಕೃಷಿಯಲ್ಲಿ ತಂತ್ರಜ್ಞಾನದ ಬಳಕೆ ಹೆಚ್ಚು ಮಾಡಲು, ಕೃಷಿ ಆಧಾರಿತ ಉದ್ಯಮಗಳನ್ನು ರೂಪಿಸಲು ಪ್ರೋತ್ಸಾಹ ನೀಡಿದರು. ಕೃಷಿ ವಿವಿಗಳು  ಹೆಚ್ಚು ಅನುದಾನ ಪಡೆದವು.

ಆದರೆ ಮುಂದೆ ನಡೆದ  ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವು ಅಧಿಕಾರ ಕಳೆದುಕೊಂಡಿತು. ರಾಜೀವ್ ಸಂಪುಟದಲ್ಲಿ ಮಂತ್ರಿಯಾಗಿದ್ದ ವಿ.ಪಿ. ಸಿಂಗ್ ಪ್ರಧಾನಿಯಾದರು. ಆಗ ರಾಜೀವ್ ವಿಪಕ್ಷ  ನಾಯಕನ ಜವಾಬ್ದಾರಿಯನ್ನು  ಉತ್ತಮವಾಗಿ ನಿರ್ವಹಣೆ ಮಾಡಿದರು.

1991ರಲ್ಲೀ ಮತ್ತೆ ಲೋಕಸಭಾ ಚುನಾವಣೆ  ಘೋಷಣೆ ಆಯಿತು. ಆಗ ರಾಜೀವ್ ತನ್ನ ಪಕ್ಷವನ್ನು ಅಧಿಕಾರಕ್ಕೆ ತರುವ ನಿಟ್ಟಿನಲ್ಲಿ ಸಾಲು ಸಾಲು rallyಗಳನ್ನು ನಡೆಸಿದರು. ರಾಜೀವ್ ಗಾಂಧಿ  ಹೋದಲ್ಲೆಲ್ಲ ಜನ ಸಂದೋಹ ಸೇರುವುದು, ಅವರು  ನೇರವಾಗಿ ಜನರ ಮಧ್ಯೆ ಹೋಗುವುದು ನಿತ್ಯವೂ ನಡೆಯುತಿತ್ತು. ಭದ್ರತಾ ಪಡೆಯ ಎಚ್ಚರಿಕೆಯ ಮಾತುಗಳನ್ನು ಅವರು ನಿರ್ಲಕ್ಷ  ಮಾಡುತ್ತಿದ್ದರು.

1991ರ ಮೇ ತಿಂಗಳ 21ರ ರಾತ್ರಿ 10.10ರ ಹೊತ್ತು! ತಮಿಳುನಾಡಿನ ಶ್ರೀಪೆರಂಬದೂರು ಎಂಬಲ್ಲಿ rallyಗೆ  ಆಗಮಿಸಿದ ರಾಜೀವ್ ಗಾಂಧಿ ವೇದಿಕೆಗೆ ಹೋಗುವ ಮೊದಲು  ಎಂದಿನಂತೆ ಜನರ ಮಧ್ಯೆ  ಹೋದರು. ಒಬ್ಬ ಮಹಿಳೆ ಹಾರ ಹಿಡಿದು ನಿಂತು ಅವರನ್ನು ಕರೆಯುತ್ತಿದ್ದರು. ರಾಜೀವ್ ಮುಂದುವರಿದಾಗ ಅವರಿಗೆ ಹಾರ ಹಾಕಿದ ಮಹಿಳೆ ಅವರ ಪಾದಸ್ಪರ್ಶ ಮಾಡಲು ಬಗ್ಗಿದಾಗ ಮಹಾ ಸ್ಫೋಟ  ಸಂಭವಿಸಿತು. ಇಡೀ ಮೈದಾನದಲ್ಲಿ ರಕ್ತದ ಓಕುಳಿ ಮಧ್ಯೆ ರಾಜೀವ್ ಗಾಂಧಿ ಅವರ ದೇಹ ಛಿದ್ರವಾಗಿ ಮಾಂಸದ ಮುದ್ದೆ ಆಗಿ ಬಿದ್ದಿತ್ತು. ದೇಶದಲ್ಲಿ ಭರವಸೆ ಮೂಡಿಸಿದ್ದ ಯುವ ನಾಯಕನ ಅಂತ್ಯ ಅತ್ಯಂತ ದಾರುಣ ಆಗಿತ್ತು.

ಮುಂದೆ ಅವರಿಗೆ ಮರಣೋತ್ತರವಾಗಿ ಭಾರತ ರತ್ನ ಪ್ರಶಸ್ತಿಯನ್ನು ನೀಡಿ ದೇಶವು ಗೌರವಿಸಿತು. ರಾಜೀವ್ ಗಾಂಧಿ ಭಾರತದ ಭರವಸೆಗಳ ಮಹಾಪೂರವೆ ಆಗಿ ಇತಿಹಾಸದ ಪುಟವನ್ನು ಸೇರಿದ್ದರು.

ರಾಜೇಂದ್ರ ಭಟ್ ಕೆ.































































































error: Content is protected !!
Scroll to Top