ಇಂದಿನ ಐಕಾನ್-ಸ್ವರ ನಿಲ್ಲಿಸಿದ ಸಂಗೀತ ಮಾರ್ತಾಂಡ ಪಂಡಿತ್ ಜಸರಾಜ್

0

2020ರ ಈ ವರ್ಷ ಸಾಲು ಸಾಲು ವಿದಾಯ ಮತ್ತು ಶ್ರದ್ಧಾಂಜಲಿಗಳಿಂದ ಹೆಚ್ಚು ನೋವು ಕೊಡುತ್ತಿದೆ!
ನಾನು ಪ್ರತ್ಯಕ್ಷವಾಗಿ ಎದುರು ಕುಳಿತು ನೋಡಬೇಕು ಎಂದು ತುಂಬಾ ಆಸೆ ಪಟ್ಟಿದ್ದ ಒಂದು ಸಂಗೀತ ಕಚೇರಿ,ಅದು ಪಂಡಿತ್ ಜಸರಾಜ್ ಅವರದ್ದು! ಆದರೆ ಆ ಕನಸು ಪೂರ್ತಿ ಆಗದೇ ಅವರು ಹೊರಟೇ ಹೋದರು. ಸ್ವರ ನಿಲ್ಲಿಸಿದ ಸ್ವರ ಮಾಂತ್ರಿಕನಿಗೆ ಸಾಯುವಾಗ 90 ವರ್ಷ! 24ನೇಯ ವರ್ಷದಲ್ಲಿ ಕಚೇರಿಯನ್ನು ನೀಡಲು ಆರಂಭಿಸಿದ ಅವರು ಮೊನ್ನೆಯವರೆಗೂ ಹಾಡುತ್ತಲೇ ಇದ್ದರು!
ಅವರು ಹುಟ್ಟಿದ್ದು ಹರ್ಯಾನದ ಹಿಸ್ಸಾರ್ ಜಿಲ್ಲೆಯ ಒಂದು ಮಧ್ಯಮವರ್ಗದ ಸುಸಂಸ್ಕೃತ ಕುಟುಂಬದಲ್ಲಿ. ಅವರ ಕುಟುಂಬದಲ್ಲಿ ಎಷ್ಟೊಂದು ಶ್ರೇಷ್ಠ ಮಟ್ಟದ ಸಂಗೀತಗಾರರು!ಅವರ ತಂದೆ ಮೋತಿರಾಮ್ ಅವರು ಆಸ್ಥಾನ ವಿದ್ವಾಂಸರು. ಅಣ್ಣಂದಿರು ಮನಿರಾಂ ಮತ್ತು ಪ್ರತಾಪ್ ನಾರಾಯಣ್ ಇಬ್ಬರೂ ಕೀರ್ತಿ ಪಡೆದ ಮಹಾನ್ ಸಂಗೀತ ವಿದ್ವಾಂಸರು. ಪ್ರತಾಪ್ ನಾರಾಯಣ್ ಅವರ ಮಕ್ಕಳು ಜತೀನ್, ಲಲಿತ್ ಬಾಲಿವುಡ್ಡಿನ ಹೆಸರಾಂತ ಸಂಗೀತ ನಿರ್ದೇಶಕ ಜೋಡಿ. ಇನ್ನಿಬ್ಬರು ಮಕ್ಕಳು ಸುಲಕ್ಷಣಾ ಪಂಡಿತ್ ಮತ್ತು ವಿಜೇತಾ ಪಂಡಿತ್ ಹೆಸರಾಂತ ಸಂಗೀತ ಕಲಾವಿದರು ಮತ್ತು ನಟಿಯರು. ಜಸರಾಜ್ ಅವರ ಪತ್ನಿ ಮಧುರಾ ಭಾರತದ ಖ್ಯಾತ ಸಿನೆಮಾ ನಿರ್ದೇಶಕರಾದ ವಿ. ಶಾಂತಾರಾಮ್ ಅವರ ಮಗಳು. ಅವರೂ ಸಿನೆಮಾ ನಿರ್ದೇಶಕರೇ ಆಗಿದ್ದಾರೆ. ಜಸರಾಜ್ ಅವರ ಮಕ್ಕಳಾದ ದುರ್ಗಾ ಜಸರಾಜ್ ಮತ್ತು ಶಾರಂಗದೇವ್ ಇಬ್ಬರೂ ಹೆಸರಾಂತ ಕಲಾವಿದರು. ಇನ್ನು ಜಸರಾಜ್ ಮೇರು ಕಲಾವಿದರು! ಇಡೀ ಭಾರತದಲ್ಲಿ ಒಂದೇ ಕುಟುಂಬದಲ್ಲಿ ಇಷ್ಟೊಂದು ಸಂಖ್ಯೆಯ ಕಲಾವಿದರು ಇರುವ ಬೇರೆ ನಿದರ್ಶನ ದೊರೆಯುವುದಿಲ್ಲ!
ಜಸರಾಜ್ ತನ್ನ 14ನೇಯ ವಯಸ್ಸಿಗೆ ಸಂಗೀತ ಶಿಕ್ಷಣವನ್ನು ಆರಂಭ ಮಾಡಿದರು. ಅಣ್ಣ ಮನೀರಾಂ ಅವರ ಮೊದಲ ಸಂಗೀತ ಗುರು. ಖ್ಯಾತ ಗಾಯಕಿ ಬೇಗಂ ಅಖ್ತರ್ ಅವರ ಗಾಯನವನ್ನು ಕೇಳಿ ಅವರು ಪ್ರಭಾವಿತರಾದರು. ನಂತರ ಒಳ್ಳೆಯ ಗುರುಗಳನ್ನು ಹುಡುಕುತ್ತ ಇಡೀ ದೇಶವನ್ನು ಸುತ್ತಿದರು. ಹತ್ತಾರು ಮಹಾ ಗುರುಗಳಿಂದ ಕಲಿತರು. ಹಿಂದುಸ್ತಾನಿ ಸಂಗೀತವನ್ನು ಬೇರೆ ಬೇರೆ ಘರಾಣೆಗಳ ಮೂಲಕ ಗುರುತಿಸುತ್ತಾರೆ. ಜಸರಾಜ್ ಆರಿಸಿಕೊಂಡದ್ದು ಪ್ರಸಿದ್ದವಾದ ಮೇವಾತಿ ಘರಾಣೆಯನ್ನು. ಅದನ್ನು ಶಿಖರ ಮಟ್ಟಕ್ಕೆ ಬೆಳೆಸಿದ್ದು ಮಾತ್ರವಲ್ಲ, ಇತರ ಘರಾಣೆಯ ಒಳ್ಳೆಯ ಅಂಶಗಳನ್ನು ಸೇರಿಸಿ ಹೊಸ ಪ್ರಯೋಗಗಳನ್ನು ಮಾಡಿದರು. ಎಲ್ಲ ಕಡೆ ಗೆದ್ದರು.
24ನೇಯ ವಯಸ್ಸಿಗೆ ತನ್ನ ಮೊದಲ ಕಚೇರಿಯನ್ನು ಅವರು ನೇಪಾಳದ ಅರಸರ ಆಸ್ಥಾನದಲ್ಲಿ ವಿದ್ವತ್ ಸಭೆಯಲ್ಲಿ ನಡೆಸಿಕೊಟ್ಟರು. ಅವರ ಪ್ರತಿಭೆಯನ್ನು ಮೆಚ್ಚಿ ಅರಸರು ಆ ಕಾಲಕ್ಕೆ ಬಹುಮೂಲ್ಯವಾದ ಐದು ಸಾವಿರದಷ್ಟು ಮೊಹರು ಉಡುಗೊರೆಯಾಗಿ ನೀಡಿದ್ದರು. ನಂತರ ಜಸರಾಜ್ ಹಿಂದೆ ತಿರುಗಿ ನೋಡುವ ಪ್ರಮೇಯವೇ ಬರಲಿಲ್ಲ. ದೇಶ ವಿದೇಶಗಳಲ್ಲಿ ಸಾವಿರ ಸಾವಿರ ಸಂಖ್ಯೆಯ ವೇದಿಕೆಗಳಲ್ಲಿ ಶಾಸ್ತ್ರೀಯ, ಲಘು ಶಾಸ್ತ್ರೀಯ, ಭಕ್ತಿ ಸಂಗೀತ ಕಚೇರಿಗಳನ್ನು ನಡೆಸಿಕೊಟ್ಟರು. ಭಾರತೀಯ ಸಂಗೀತವನ್ನು ಜಗತ್ತಿನ ಮೂಲೆ ಮೂಲೆಗೂ ಪಸರಿಸಿದರು. ಅವರೊಬ್ಬ ಉತ್ತಮ ತಬಲಾ ವಾದಕರು ಕೂಡ ಆಗಿದ್ದರು.
ಸಂಗೀತದಲ್ಲಿ ಹಲವು ವಿನೂತನ ಪ್ರಯೋಗಗಳನ್ನು ಅವರು ಮಾಡಿದರು. ‘ಜಸರಂಗಿ’ ಎಂಬ ಹೆಸರಿನ ಪ್ರಯೋಗ ಮೊದಲ ಬಾರಿಗೆ ವೇದಿಕೆ ಏರಿದ್ದು ಅವರಿಂದ! ಓರ್ವ ಶ್ರೇಷ್ಠ ಪುರುಷ ಮತ್ತು ಮಹಿಳಾ ಕಲಾವಿದರು ಒಂದೇ ವೇದಿಕೆಯಲ್ಲಿ ಕುಳಿತು ಒಂದೇ ಕಾಲದಲ್ಲಿ ಬೇರೆ ಬೇರೆ ರಾಗಗಳನ್ನು ಪ್ರಸ್ತುತಿ ಮಾಡುವ ಈ ಪ್ರಯೋಗ ಬಹಳ ಯಶಸ್ವಿ ಆಯಿತು. ಸಂಪ್ರದಾಯ ಶರಣರು ಅದನ್ನು ಅಪಪ್ರಯೋಗ ಎಂದು ಬೈದರೂ ಜನ ಅದನ್ನು ಹಾರ್ದಿಕವಾಗಿ ಸ್ವೀಕರಿಸಿದರು! ದೇವಸ್ಥಾನಗಳಲ್ಲಿ ಮಾತ್ರ ಹಾಡಲಾಗುವ’ಹವೇಲಿ ಸಂಗೀತ’ ಅವರದ್ದೇ ಇನ್ನೊಂದು ಪರಿಕಲ್ಪನೆ! ಖಯಾಲ್ ದೀಶ ಹಾಗೂ ಟುಮ್ರಿಗಳನ್ನು ಬಹಳ ಸರಳಗೊಳಿಸಿ ಸಂಗೀತವನ್ನು ಸಾಮಾನ್ಯ ಜನರ ಮಟ್ಟಕ್ಕೆ ತಂದಿದ್ದು ಅವರ ಇನ್ನೊಂದು ವಿಶೇಷತೆ.ಅಭಿರಿ ತೋಡಿ ಮತ್ತು ಪಟ ದೀಪಕಿ ಎಂಬ ಎರಡು ರಾಗಗಳು ಅವರಿಂದ ಅಮರತ್ವ ಪಡೆದವು. ಕೋಲ್ಕತ್ತಾವರೆಗೆ ಹೋಗಿ ರಬೀಂದ್ರ ಸಂಗೀತವನ್ನು ಕಲಿತು ಅದನ್ನು ಶಾಸ್ತ್ರೀಯ ವೇದಿಕೆಗೆ ಬಳಸಿದ್ದು ಅವರ ಇನ್ನೊಂದು ವಿಶೇಷತೆ!
ಕೀರ್ತಿ ಪಡೆದ ಸಂಗೀತ ಕಲಾವಿದರು ಸಿನೆಮಾ ಹಾಡುಗಳನ್ನು ಅಸ್ಪೃಶ್ಯವಾಗಿ ನೋಡುತ್ತಿದ್ದ ಆ ಕಾಲದಲ್ಲಿ ಕೂಡ ಸಿನೆಮಾ ರಂಗದಲ್ಲಿ ಅವರು ಹಲವಾರು ಹಾಡುಗಳನ್ನು ಹಾಡಿದರು. ಮೊನ್ನೆ ಮೊನ್ನೆ ನಾವು ನೋಡಿದ ಲೈಫ್ ಆಫ್ ಪೈ ಸಿನೆಮಾದಲ್ಲಿ ಕೂಡ ಅವರ ಒಂದು ಹಾಡಿತ್ತು!
ಪಂಡಿತ್ ಜಸರಾಜ್ ಅವರನ್ನು ನಾವು ನೆನಪಲ್ಲಿ ಇಟ್ಟುಕೊಳ್ಳಲು ಇನ್ನೊಂದು ಪ್ರಮುಖ ಕಾರಣ ಇದೆ. ತನ್ನ ಅಪಾರ ಸಂಖ್ಯೆಯ ಶಿಷ್ಯ
ಪರಂಪರೆಯನ್ನು ಅತೀ ಶ್ರೇಷ್ಟ ಸಂಗೀತ ಕಲಾವಿದರ ಮಟ್ಟಕ್ಕೆ ಬೆಳೆಸಿದ್ದು ಅವರ ಹಿರಿಮೆ. ಇಂದು ತುಂಬಾ ಪ್ರಸಿದ್ಧಿ ಪಡೆದಿರುವ ಸಂಜೀವ್ ಅಭ್ಯಂಕರ್, ಕಲಾ ರಾಮನಾಥ್, ತೃಪ್ತಿ ಮುಖರ್ಜಿ, ಸುಮನ್ ಘೋಷ್, ಶಶಾಂಕ್ ಸುಬ್ರಮಣ್ಯಂ, ಅನುರಾಧಾ ಪೋದುವಾಲ್, ಸಾಧನಾ ಸರ್ಗಮ್, ರಮೇಶ್ ನಾರಾಯಣ್…ಹೀಗೆ ಸಾಗುತ್ತದೆ ಅವರ ಶಿಷ್ಯ ಪರಂಪರೆ! ಈ ನಿಟ್ಟಿನಲ್ಲಿ ಕೂಡ ಅವರು ಬಹುಶ್ರುತರಾದ ಮಹಾ ಸಂಗೀತ ಗುರು. ಅಮೆರಿಕ, ಕೆನಡಾ, ಕೇರಳ, ಮುಂಬೈಗಳಲ್ಲಿ ಅವರ ಸಂಗೀತ ಶಾಲೆಗಳು ಇದ್ದು ಅವರು ತನ್ನ ಕೊನೆಯ ಉಸಿರಿನವರೆಗೂ ಸಂಗೀತ ತರಗತಿ ನಡೆಸುತ್ತಲೇ ಇದ್ದರು!
ಮೂರು ಕಾರಣಕ್ಕೆ ಅವರು ಚಿರಂಜೀವಿ! ಮೊದಲನೇ ಕಾರಣ ಅವರ ಪತ್ನಿ ಮಧುರಾ ಅವರು ತಮ್ಮ ಪತಿಯ ಬಗ್ಗೆ ಪ್ರೀತಿಯಿಂದ ನಿರ್ದೇಶನ ಮಾಡಿದ ಸಿನೆಮಾ ‘ಸಂಗೀತ ಮಾರ್ತಾಂಡ!’ ಅದು ತುಂಬಾ ಚೆನ್ನಾಗಿ ಮೂಡಿ ಬಂದಿದೆ. ಎರಡನೇ ಕಾರಣ ಮಂಗಳ ಮತ್ತು ಗುರು ಗ್ರಹಗಳ ನಡುವೆ ಇರುವ ಒಂದು ಸಣ್ಣ ಗ್ರಹಕ್ಕೆ ಅವರ ಹೆಸರನ್ನು ಇಡಲಾಗಿದ್ದು ಈ ಗೌರವ ಪಡೆದ ಭಾರತದ ಮೊದಲ ಸಂಗೀತ ಕಲಾವಿದ ಜಸರಾಜ್ ಅವರು! ಮೂರನೇ ಕಾರಣ ಭಾರತ ಸರಕಾರ ನೀಡುವ ಪದ್ಮಶ್ರೀ, ಪದ್ಮ ಭೂಷಣ ಮತ್ತು ಪದ್ಮ ವಿಭೂಷಣ ಇವೆಲ್ಲ ಪ್ರಶಸ್ತಿಗಳನ್ನು ಪಡೆದಿರುವುದು! ಸಂಗೀತ ಕ್ಷೇತ್ರದ ಯಾವ ಪ್ರಶಸ್ತಿ, ಗೌರವ ಕೂಡ ಅವರಿಗೆ ದೊರೆಯದೆ ಬಾಕಿ ಉಳಿದಿಲ್ಲ!
🙏A. R. ರೆಹಮಾನ್ ಪಂಡಿತ್ ಜಸ್ರಾಜ್ ಬಗ್ಗೆ ಭಾವಪೂರ್ಣವಾಗಿ ಹೇಳಿದ ಈ ಮಾತು ತುಂಬಾ ಅರ್ಥಪೂರ್ಣ ಎಂದು ನನ್ನ ಭಾವನೆ.
“ಭಾರತೀಯ ಸಂಗೀತವು
ಇರುವವರೆಗೂ ಪಂಡಿತ್ ಜಸ್ರಾಜ್ ಅವರಿಗೆ ಸಾವಿಲ್ಲ!”
ಬರಹ – ರಾಜೇಂದ್ರ ಭಟ್ ಕೆ.---
Previous articleಹೆಬ್ರಿ ಬಂಟರ ಸೌಹಾರ್ದ ಸಹಕಾರಿ ಸಂಘದ ಕಚೇರಿ ಉದ್ಘಾಟನೆ
Next articleಹಿರ್ಗಾನ : ಪೌಷ್ಠಿಕ ಆಹಾರ ಮೇಳ

LEAVE A REPLY

Please enter your comment!
Please enter your name here