ಜನನ – ಮರಣ ಪ್ರಮಾಣ ಪತ್ರ ವಿತರಣೆ ಅಧಿಕಾರ ಇನ್ನು ಪಿಡಿಒಗೆ

ಬೆಂಗಳೂರು: ಜನನ ಮರಣ ಪ್ರಮಾಣ ಪತ್ರ ನೀಡುವ ಅಧಿಕಾರವನ್ನು ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ(ಪಿಡಿಒ)ಗಳಿಗೆ ನೀಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.

ಈ ಮೊದಲು ಜನನ ಮರಣ ಪ್ರಮಾಣ ಪತ್ರ ವಿತರಣಾ ಹಕ್ಕು ಕಂದಾಯ ಇಲಾಖೆ ವ್ಯಾಪ್ತಿಯಲ್ಲಿತ್ತು. ಇದೀಗ ಗ್ರಾಮ ಪಂಚಾಯತ್ ಗಳಿಗೆ ಈ ಅಧಿಕಾರವನ್ನು ಹಸ್ತಾಂತರಿಸಿ ಸರ್ಕಾರ ಆದೇಶ ಹೊರಡಿಸಿದೆ.

ಯೋಜನಾ ಮತ್ತು ಸಾಂಖ್ಯಿಕ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿಗಳು ಜನನ ಮರಣ ಪ್ರಮಾಣ ಪತ್ರ ವಿತರಣೆಯನ್ನು ಗ್ರಾಮ ಪಂಚಾಯತ್ ಗಳಿಗೆ ನೀಡಬಹುದು ಎಂದು ಸೂಚಿಸಿದ್ದರು.

ಪಂಚಾಯುತ್ ಅಭಿವೃದ್ಧಿ ಅಧಿಕಾರಿಗಳನ್ನು ಜನನ ಮರಣ ಪ್ರಮಾಣ ಪತ್ರಗಳ ವಿತರಣಾಧಿಕಾರಿಗಳನ್ನಾಗಿ ನೇಮಿಸಲು ಅನುಮತಿ ನೀಡಿರುವುದರಿಂದ, ರಾಷ್ಟ್ರೀಯ ಜನನ ಮರಣ ಕಾಯ್ದೆ 1969ರ ಆಧ್ಯಾಯ 5 ರ ಪ್ರಕರಣ 27 ರಡಿ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳನ್ನು ಇ – ತಂತ್ರಾಂಶದಲ್ಲಿ ತಮ್ಮ ಡಿಜಿಟಲ್ ಸಹಿಯ ಮುಖಾಂತರ ವ್ಯಕ್ತಿಗಳ ಜನನ ಮತ್ತು ಮರಣ ಪ್ರಮಾಣ ಪತ್ರ ವಿತರಣಾಧಿಕಾರಿಗಳನ್ನಾಗಿ ತಕ್ಷಣದಿಂದ ಜಾರಿಗೆ ಬರುವಂತೆ ಸರ್ಕಾರ ನೇಮಿಸಿದೆ. 

ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ಬಾಪೂಜಿ ಸೇವಾ ಕೇಂದ್ರಗಳ ಮುಖಾಂತರ ಈ ಸೇವೆಯನ್ನು ನೀಡಬೇಕು. ಸರ್ಕಾರ ಆಗಿಂದಾಗ್ಗೆ ನಿಗದಿಪಡಿಸುವ ದರಗಳನ್ವಯ ಸೇವಾ ಶುಲ್ಕವನ್ನು ಸಂಗ್ರಹಿಸಿ ನೀಡುವಂತೆ ಆದೇಶದಲ್ಲಿ ಹೇಳಿದೆ.

error: Content is protected !!
Scroll to Top