ಲಕ್ನೊ: ಶುಕ್ರವಾರ ಪೊಲೀಸರ ಎನ್ ಕೌಂಟರ್ಗೆ ಬಲಿಯಾಗಿರುವ ಉತ್ತರ ಪ್ರದೇಶದ ನಟೋರಿಯಸ್ ಗ್ಯಾಂಗ್ ಸ್ಟರ್ ವಿಕಾಸ್ ದುಬೆಯ ಅಂತ್ಯಕ್ರಿಯೆ ಸಂದರ್ಭದಲ್ಲಿ ಅವನ ಹೆಂಡತಿ ರಿಚಾ ದುಬೆ ಹೇಳಿದ ಮಾತುಗಳೀಗ ವೈರಲ್ ಆಗಿವೆ.ನನ್ನ ಗಂಡ ಮಾಡಿದ ತಪ್ಪುಗಳಿಗೆ ತಕ್ಕ ಶಿಕ್ಷೆಯಾಗಿದೆ ಎಂಬರ್ಥದಲ್ಲಿ ಮಾತನಾಡಿದ್ದಾರೆ ದಿಚಾ ದುಬೆ. ಹೌದು, ನನ್ನ ಗಂಡ ಇದುವರೆಗೂ ಮಾಡಿದ್ದೆಲ್ಲವೂ ತಪ್ಪೇ. ಆತನ ಅಪರಾಧಗಳಿಗೆ ತಕ್ಕ ಶಿಕ್ಷೆಯಾಗಿದೆ‘ ಎಂದು ಗಂಡನ ಅಂತ್ಯಕ್ರಿಯೆ ವೇಳೆ ಆಕ್ರೋಶ ಹೊರಹಾಕಿದ್ದಾರೆ.
ವಿಕಾಸ್ ದುಬೆಯ ಅಂತ್ಯಕ್ರಿಯೆಯನ್ನು ನಿನ್ನೆ ಬಿಗಿ ಭದ್ರತೆಯಲ್ಲಿ ನೆರವೇರಿಸಲಾಯಿತು. ಈ ವೇಳೆ ಪೊಲೀಸರು ಮತ್ತು ಮಾಧ್ಯಮಗಳ ಮೇಲೆ ವಿಕಾಸ್ ದುಬೆಯ ಹೆಂಡತಿ ರಿಚಾ ಹರಿಹಾಯ್ದ ಘಟನೆಯೂ ನಡೆಯಿತು. ವಿಕಾಸ್ ದುಬೆ ದುರಂತ ಅಂತ್ಯದ ಬಗ್ಗೆ ಮಾಧ್ಯಮಗಳು ರಿಚಾ ಅವರ ಬಳಿ ಪ್ರತಿಕ್ರಿಯೆ ಕೇಳಿದರು. ಈ ವೇಳೆ ಕೋಪದಿಂದ ಮಾಧ್ಯಮಗಳ ವಿರುದ್ಧ ಕಿರುಚಾಡಿದ ರಿಚಾ, ‘ಹೌದು, ಹೌದು, ಹೌದು ನನ್ನ ಗಂಡ ತಪ್ಪು ಮಾಡಿದ್ದ. ಇದೇ ರೀತಿ ಸಾಯಬೇಕೆಂಬುದು ಆತನ ಹಣೆಬರಹದಲ್ಲಿತ್ತು’ ಎಂದು ಆಕ್ರೋಶ ಹೊರಹಾಕಿದ್ದಾರೆ.
ಅಲ್ಲದೆ, ವಿಕಾಸ್ ದುಬೆ ಎನ್ಕೌಂಟರ್ಗೆ ಮಾಧ್ಯಮಗಳೂ ಕಾರಣ ಎಂದು ಆಕ್ರೋಶ ಹೊರಹಾಕಿದ್ದಾರೆ. ಇದೇ ವೇಳೆ ವಿಕಾಸ್ ದುಬೆ ಅಪ್ಪ ರಾಮ್ ಕುಮಾರ್ ದುಬೆ ತಾವು ಅಂತ್ಯಕ್ರಿಯೆಯಲ್ಲಿ ಭಾಗಿಯಾಗುವುದಿಲ್ಲ ಎಂದು ತಿಳಿಸಿದರು. ಹೀಗಾಗಿ, ವಿಕಾಸ್ ದುಬೆಯ ಭಾವ ದಿನೇಶ್ ತಿವಾರಿ ಅಂತ್ಯಕ್ರಿಯೆ ನೆರವೇರಿಸಿದರು.
ಉತ್ತರ ಪ್ರದೇಶದ ಕಾನ್ಪುರದಲ್ಲಿ 8 ಪೊಲೀಸ್ ಸಿಬ್ಬಂದಿಯನ್ನು ಗುಂಡಿಕ್ಕಿ ಕೊಂದಿದ್ದ ಗ್ಯಾಂಗ್ಸ್ಟರ್ ವಿಕಾಸ್ ದುಬೆಯನ್ನು ಬಂಧಿಸಿ ಕಾನ್ಪುರಕ್ಕೆ ಕರೆದೊಯ್ಯುವಾಗ ಪೊಲೀಸ್ ವಾಹನ ಪಲ್ಟಿ ಹೊಡೆದಿತ್ತು. ಈ ವೇಳೆ ಪೊಲೀಸರ ಬಳಿಯಿದ್ದ ಗನ್ ಎತ್ತಿಕೊಂಡು ಪರಾರಿಯಾಗಲು ಪ್ರಯತ್ನಿಸಿದ್ದ ವಿಕಾಸ್ ದುಬೆಯನ್ನು ಎನ್ಕೌಂಟರ್ನಲ್ಲಿ ಹತ್ಯೆ ಮಾಡಲಾಗಿತ್ತು. ಗುರುವಾರ ಮಧ್ಯಪ್ರದೇಶದಲ್ಲಿ ವಿಕಾಸ್ ದುಬೆಯನ್ನು ಬಂಧಿಸಲಾಗಿತ್ತು. ಆತನನ್ನು ಶುಕ್ರವಾರ ಬೆಳಗ್ಗೆ ಉಜ್ಜಯಿನಿಯಿಂದ ಕಾನ್ಪುರಕ್ಕೆ ಪೊಲೀಸ್ ವಾಹನದಲ್ಲಿ ಕರೆದೊಯ್ಯುವಾಗ ಅಪಘಾತ ಸಂಭವಿಸಿತ್ತು. ಆತ್ಮರಕ್ಷಣೆಗಾಗಿ ಎನ್‌ಕೌಂಟರ್ ಮಾಡಲಾಗಿದೆ ಎಂದು ಕಾನ್ಪುರ ಪೊಲೀಸರು ಸ್ಪಷ್ಟಪಡಿಸಿದ್ದರು.