Tuesday, December 6, 2022
spot_img
Homeರಾಜ್ಯಚಿಕ್ಕಮಗಳೂರಲ್ಲಿ ಬಿಜೆಪಿ ನಾಯಕರ ರಹಸ್ಯ ಸಭೆ-ಮತ್ತೆ ಶುರುವಾಯಿತಾ ಭಿನ್ನರ ಕಾಟ?

ಚಿಕ್ಕಮಗಳೂರಲ್ಲಿ ಬಿಜೆಪಿ ನಾಯಕರ ರಹಸ್ಯ ಸಭೆ-ಮತ್ತೆ ಶುರುವಾಯಿತಾ ಭಿನ್ನರ ಕಾಟ?

ಮುಳ್ಳಯ್ಯನಗಿರಿ ತಪ್ಪಲಿನಲ್ಲಿರೋ ರೆಸಾರ್ಟ್‌ ಒಂದರಲ್ಲಿ ಕೆಲ ಸಚಿವರು, ಶಾಸಕರು, ಮುಖಂಡರು ರಹಸ್ಯ ಸಭೆ ಮಾಡಿದ್ದಾರೆ. ಈ ಸಭೆಗೆ ಸದ್ಯ ಬೆಂಗಳೂರಿನ ಕೊರೊನಾ ಉಸ್ತುವಾರಿಯಾಗಿರೋ ಆರ್ ಅಶೋಕ್, ಸಿ.ಟಿ. ರವಿ, ಜಗದೀಶ್ ಶೆಟ್ಟರ್, ಈಶ್ವರಪ್ಪ ಹಾಜರಾಗಿದ್ದು ವಿಶೇಷ.

ಚಿಕ್ಕಮಗಳೂರು: ರಾಜ್ಯದಲ್ಲಿ ಕೊರೊನಾ ತಾಂಡವ ಕೈ ಮೀರುತ್ತಿದೆ. ಜನರು ಸರಿಯಾದ ಚಿಕಿತ್ಸೆ ಲಭಿಸದೆ ಪರದಾಡುತ್ತಿದ್ದಾರೆ. ಆಸ್ಪತ್ರೆಗಳು ಹೆಚ್ಚುತ್ತಿರುವ ರೋಗಿಗಳ ಒತ್ತಡ ತಾಳಲಾಗದೆ ಕುಸಿಯುವ ಹಂತಕ್ಕೆ ತಲುಪಿವೆ.ಈ ಸಂದರ್ಭದಲ್ಲಿ ಜನಪ್ರತಿನಿಧಿಗಳಾದವರು ಜನರ ಸೇವೆಗೆ ಟೊಂಕ ಕಟ್ಟಿ ನಿಲ್ಲಬೇಕಿತ್ತು.ಆದರೆ ಪ್ರಸ್ತುತ ಸರಕಾರದಲ್ಲಿ ಕ್ರಿಯಾಶೀಲರಾಗಿರುವ ಸಚಿವರ ಸಂಖ್ಯೆ ಬೆರಳೆಣಿಕೆಯಷ್ಟು ಮಾತ್ರ ಇದೆ. ಕೊರೊನಾ  ಸಂಕಷ್ಟಹ ನಡುವೆಯೂ ಬಿಜೆಪಿಯ ಕೆಲವು ಪ್ರಭಾವಿ ನಾಯಕರು  ಕಾಫಿನಾಡಿನ ರೆಸಾರ್ಟ್ ವೊಂದರಲ್ಲಿ ಸಭೆ ಸೇರಿ ರಹಸ್ಯ ಮೀಟಿಂಗ್ ಮಾಡಿರೋದು ಭಾರೀ ಕುತೂಹಲಕ್ಕೆ ಕಾರಣವಾಗಿದೆ ಹಾಗೂ  ರಾಜಕೀಯ ವಲಯದಲ್ಲೂ ತೀರ್ವ ಚರ್ಚೆಗೆ ಗ್ರಾಸವಾಗಿದೆ

ಚಿಕ್ಕಮಗಳೂರು ತಾಲೂಕಿನ ಮುಳ್ಳಯ್ಯನಗಿರಿ ತಪ್ಪಲಿನಲ್ಲಿರೋ ರೆಸಾರ್ಟ್​ವೊಂದರಲ್ಲಿ ಕೆಲ ಸಚಿವರು, ಶಾಸಕರು, ಮುಖಂಡರು ರಹಸ್ಯ ಸಭೆ ಮಾಡಿದ್ದಾರೆ. ಈ ಸಭೆಗೆ ಸದ್ಯ ಬೆಂಗಳೂರಿನ ಕೊರೊನಾ ಉಸ್ತುವಾರಿಯಾಗಿರೋ ಆರ್. ಅಶೋಕ್, ಸಿ.ಟಿ. ರವಿ, ಜಗದೀಶ್ ಶೆಟ್ಟರ್, ಈಶ್ವರಪ್ಪ ಹಾಜರಾಗಿದ್ದು ವಿಶೇಷ. ಇದಿಷ್ಟೇ ಅಲ್ಲದೇ ಸತೀಶ್ ರೆಡ್ಡಿ, ಮುನಿರಾಜು, ಕೃಷ್ಣಪ್ಪ ಸೇರಿದಂತೆ ಕೇಸರಿ ಪಾಳಯದ ಕೆಲ ಪ್ರಭಾವಿ ನಾಯಕರು ರಾತೋರಾತ್ರಿ ಹಾಜರಾಗಿ ಬೆಂಗಳೂರಿಗೆ ವಾಪಸ್ಸಾಗಿದ್ದಾರೆ. ಸೀಕ್ರೆಟ್ ಸಭೆ ಹಿನ್ನೆಲೆಯಲ್ಲಿ ಮೊನ್ನೆ ಚಿಕ್ಕಮಗಳೂರಿಗೆ ಆಗಮಿಸಿದ ಆರ್.ಅಶೋಕ್ ನಿನ್ನೆ ಕೂಡ ಚಿಕ್ಕಮಗಳೂರಿನಲ್ಲೇ ವಾಸ್ತವ್ಯ ಹೂಡಿದ್ರು. ಒಂದೆಡೆ ಬೆಂಗಳೂರಿನಲ್ಲಿ ಕೊರೊನಾ ಕೇಕೆ ಹಾಕ್ತಿದ್ರೂ  ಅಶೋಕ್ ಮೂರು ದಿನಗಳ ಕಾಫಿನಾಡ ಪ್ರವಾಸ ಮುಗಿಸಿ ಇಂದು ಬೆಂಗಳೂರಿಗೆ ವಾಪಸ್ಸಾದ್ರು. ನಿನ್ನೆ ತಡರಾತ್ರಿ 12.30ಕ್ಕೆ ಸಚಿವ ಸಿ.ಟಿ. ರವಿ ರೆಸಾರ್ಟ್​ನಿಂದ ಹೊರಬರೋದು ಕ್ಯಾಮೆರಾ ಕಣ್ಣಲ್ಲಿ ಸೆರೆಯಾಗಿತು. ಆದ್ರೆ ಈ ಬಗ್ಗೆ ಬೆಳಗ್ಗೆ ಕೇಳಿದ್ದಕ್ಕೆ ನಾವ್ಯಾರೂ ಸಭೆ ಮಾಡೇ ಇಲ್ಲ, ನಾನು ಹೋಗೇ ಇಲ್ಲ ಅಂತಾ ತೇಪೆ ಹಾಕುವ ಕೆಲಸವನ್ನ ಸಚಿವ ಸಿ.ಟಿ ರವಿ ಮಾಡಿದರು.

ಸಿ.ಟಿ ರವಿ ಕಾರು ರಾತ್ರಿ 12.30ಕ್ಕೆ ಹೊರಬಂದರೂ, ‘ಇಲ್ಲಾ… ನಾನ್ ಯಾವುದೇ ರೆಸಾರ್ಟ್​ಗೆ ಹೋಗೇ ಇಲ್ಲ’ ಎಂದ್ಹೇಳಿ ಎಂದಿನಂತೆ ಗುಟ್ಟು ಬಿಟ್ಟುಕೊಡದೇ ಜಾಣತನ ಮೆರೆದರು. ಕಾಫಿನಾಡಲ್ಲಿ ರಹಸ್ಯ ಸಭೆ ನಡೆಸುವ ಯೋಜನೆಯಿಂದಾಗಿಯೇ ನಿನ್ನೆ ಅಶೋಕ್ ಚಿಕ್ಕಮಗಳೂರು ನಗರದಲ್ಲಿ ನನೆಗುದಿಗೆ ಬಿದ್ದಿರೋ ಡಿಸಿ ಕಚೇರಿಯ ಸ್ಥಳ ಪರಿಶೀಲನೆ ಕಾರ್ಯಕ್ರಮವನ್ನ ಹಮ್ಮಿಕೊಂಡಿದ್ದರು. ಈ ವೇಳೆ ಆರ್ ಅಶೋಕ್ ಅವರಿಗೆ ಮೊನ್ನೆಯಿಂದಲೂ ಮುನಿರಾಜು, ಕೃಷ್ಣಪ್ಪ ಜೊತೆ ನೀಡಿದ್ದು ವಿಶೇಷವಾಗಿತ್ತು.

ಸಚಿವರಾದ ಮೇಲೆ ಚಿಕ್ಕಮಗಳೂರು ನಗರಕ್ಕೆ ಕಾಲಿಡದ ಜಗದೀಶ್ ಶೆಟ್ಟರ್, ಕೊರೊನಾ ಮಧ್ಯೆಯೂ ಇಂಡಸ್ಟ್ರಿಯಲ್ ಟೂರ್ ನೆಪದಲ್ಲಿ ಚಿಕ್ಕಮಗಳೂರಿಗೆ ಆಗಮಿಸಿದರು. ಆರ್. ಅಶೋಕ್, ಜಗದೀಶ್ ಶೆಟ್ಟರ್ ಅಧಿಕೃತ ಕಾರ್ಯಕ್ರಮ ಹಮ್ಮಿಕೊಂಡಿದ್ದರಿಂದ ಕ್ಯಾಮೆರಾಗಳಿಗೆ ಸಿಕ್ಕಿದರು. ಆದ್ರೆ ಈಶ್ವರಪ್ಪರವರು ರಾತ್ರಿಯೇ ಬಂದು ಸಭೆ ಮುಗಿಸಿಕೊಂಡು ವಾಪಸು ಹೋಗಿರುವ ಮಾಹಿತಿ ದೊರೆತಿದೆ.

ಒಂದೆಡೆ ಸರ್ಕಾರದ ಪ್ರತಿ ವಿಚಾರದಲ್ಲೂ ಬಿಎಸ್​ವೈ ಪುತ್ರ ವಿಜಯೇಂದ್ರ ಮೂಗು ತೂರಿಸುತ್ತಿರುವ ಹಿನ್ನೆಲೆಯಲ್ಲಿ ಈ ಸಭೆ ನಡೆದಿದೆ ಅಂತಾ ಹೇಳಲಾಗ್ತಿದೆ. ಜೊತೆಗೆ ಎಷ್ಟೇ ನಮ್ಮಲ್ಲಿ ಭಿನ್ನಭಿಪ್ರಾಯವಿಲ್ಲ ಎಂದು ಬಿಜೆಪಿ ನಾಯಕರು ಪೋಸ್ ಕೊಟ್ಟರೂ ನಾಲ್ಕೈದು ಮಿನಿಸ್ಟರ್, ಶಾಸಕರು, ಮುಖಂಡರು ರಹಸ್ಯ ಸ್ಥಳದಲ್ಲಿ ಒಂದೆಡೆ ಸೇರಿ ಮೀಟಿಂಗ್ ನಡೆಸುತ್ತಾರೆ ಅಂದರೆ ಇವರು ಸುಮ್ಮನೆ ಸೇರಲ್ಲ ಅನ್ನೋದು ಎಲ್ಲರಿಗೂ ಗೊತ್ತಿರೋ ವಿಚಾರ. ಒಟ್ಟಿನಲ್ಲಿ ಕಾಫಿನಾಡಿನಲ್ಲಿ ಸದ್ದಿಲ್ಲದೇ ರಹಸ್ಯವಾಗಿ ರೆಸಾರ್ಟ್​ನಲ್ಲಿ ನಡೆದ ಮೀಟಿಂಗ್, ರಾಜಕೀಯ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿರುವುದಂತೂ ಸತ್ಯ.

LEAVE A REPLY

Please enter your comment!
Please enter your name here

Most Popular

error: Content is protected !!