ಕನ್ನಡ ಸಿನೆಮಾ ರಂಗದಲ್ಲಿ ಏನೆಲ್ಲ ಬದಲಾವಣೆಗಳಿಗೆ ಕಾರಣವಾಯ್ತು ಕೊರೊನಾ?

ಎನ್.ಎಸ್.ರಾಮಚಂದ್ರ
ಸಿನಿಮಾ ಹಾಗೂ ಸೀರಿಯಲ್‍ಗಳಲ್ಲಿ ಕೇವಲ ಕನ್ನಡ ದನಿ ಕೇಳಿಸಿದರೆ ಸಾಲದು. ಕನ್ನಡಿಗರು ಅಭಿನಯಿಸಬೇಕು. ಕನ್ನಡಿಗರು ಮಾತನಾಡಬೇಕು. ಹಾಗಾದಾಗ ಮಾತ್ರ ಈ ಕ್ಷೇತ್ರಗಳನ್ನು ನಂಬಿಕೊಂಡಿರುವ ಕನ್ನಡಿಗರ ಹೊಟ್ಟೆ ತುಂಬಲು ಸಾಧ್ಯ. ಕನ್ನಡಿಗ ಕೆಲಸವಿಲ್ಲದೆ ಸತ್ತರೆ ಕನ್ನಡವೆಲ್ಲಿ ಬೆಳೆಯುತ್ತೆ ಸ್ವಾಮಿ? ಇದು ಡಬ್ಬಿಂಗ್ ವಿರೋಧಿ ಕನ್ನಡಿಗ ಹಾಗೂ ನಟ ಯತಿರಾಜ್ ಅವರ ಪ್ರಶ್ನೆ.

ಅದು ಭಾವನಾತ್ಮಕ ಮಾತು. ಭಾಷೆಯ ವಿಷಯ ಬಂದಾಗ ಭಾವನಾತ್ಮಕತೆ ಉಕ್ಕುವುದು ಸಹಜ. ಆದರೆ ಅಷ್ಟಾದರೆ ಸಾಲದು. ಭಾವನಾತ್ಮಕತೆಯೊಂದಿಗೆ ಬದ್ಧತೆಯೂ ಬೆರೆಯಬೇಕು. ಪದ್ಮಭೂಷಣ ಡಾ.ರಾಜ್‍ಕುಮಾರ್ ಮತ್ತಿತರರ ಕಾಲದಲ್ಲಿದ್ದ ಬದ್ಧತೆ ಈಗ ಉಳಿದಿದೆಯೇ?

ಸಿನಿಮಾ, ಸೀರಿಯಲ್ ಇವೆಲ್ಲ ಈಗ ಅಪ್ಪಟ ವ್ಯಾಪಾರ. ಹಣ ಹಾಕುವ ನಿರ್ಮಾಪಕರು ಲಾಭದ ಸಮೇತ ತನ್ನ ಬಂಡವಾಳ ವಾಪಸ್ ಬರಬೇಕು ಎಂದು ಆಶಿಸುತ್ತಾನೆ. ಅದು ತಪ್ಪಲ್ಲ. ಆದರೆ ಆ ಆಶಯದ ಪೊದೆಯಲ್ಲಿ ಭಾವನಾತ್ಮಕತೆ ಮತ್ತು ಬದ್ಧತೆ ಮರೆಯಾಗಿರುವುದು ವಿಪರ್ಯಾಸ.

ಪರ ಭಾಷೆಯ ಸಿನಿಮಾ ಹಾಗೂ ಧಾರವಾಹಿಗಳು ಮೊದಲಿನಿಂದಲೂ ಕನ್ನಡ ಪ್ರೇಕ್ಷಕರ ಮನರಂಜಿಸುತ್ತಿವೆ. ಅಂತಹ ಸಿನಿಮಾಗಳನ್ನು ಅದೇ ಭಾಷೆಯಲ್ಲೇ ನೋಡಿದರೆ ಚೆನ್ನ. ಕನ್ನಡಕ್ಕೆ ಡಬ್ ಮಾಡಬಾರದು ಎಂಬ ದೃಢ ನಿಲುವು ಇತ್ತೀಚಿನವರೆಗೂ ಇತ್ತು.

ಪರಭಾಷೆಯ ಸಿನಿಮಾ ಹಾಗೂ ಸೀರಿಯಲ್‍ಗಳನ್ನು ನೋಡಿದ ಮಾತ್ರಕ್ಕೆ ಜನರಿಗೆ ಕನ್ನಡ ಕಲಾವಿದರ ಹಾಗೂ ಭಾಷೆಯ ಮೇಲಿರುವ ಪ್ರೀತಿ ಕಡಿಮೆ ಆಗಿಲ್ಲ. ಆಗುವುದೂ ಇಲ್ಲ ಎಂದು ಮತ್ತೊಂದು ವರ್ಗದವರು ಹೇಳುತ್ತಾರೆ. ಡಬ್ಬಿಂಗ್ ವಿರೋಧಿ ನಿಲುವು ಸಡಿಲಗೊಳ್ಳತೊಡಗಿದೆ.

ಕೋವಿಡ್-19 ಕಾಟದಿಂದ ಸಿನೆಮಾ ಹಾಗೂ ಸೀರಿಯಲ್ ಚಟುವಟಿಕೆಗಳ ಮೇಲೆ ನಿರ್ಬಂಧ ಹೇರಿದ್ದು ತಿಳಿದೇ ಇದೆ. ಇದು ಕನ್ನಡೇತರ ಸೀರಿಯಲ್ ಹಾಗೂ ಸಿನಿಮಾಗಳಿಗೆ ವರದಾನವಾಯಿತು.

ನಾಲ್ಕು ತಿಂಗಳ ಲಾಕ್‍ಡೌನ್ ಅವಯಲ್ಲಿ ಹದಿನೈದಕ್ಕೂ ಹೆಚ್ಚು ಕನ್ನಡೇತರ ಧಾರಾವಾಹಿಗಳು ಕನ್ನಡಕ್ಕೆ ಡಬ್ ಆಗಿವೆ. ಅಷ್ಟು ಮಾತ್ರವಲ್ಲ, ಕೆಲವು ಸೀರಿಯಲ್‍ಗಳು ಬಹಳ ಜನಪ್ರಿಯವಾಗಿವೆ. ಸಿಐಡಿ ಎಂಬ ಅತ್ಯಂತ ಜನಪ್ರಿಯ ಹಿಂದಿ ಧಾರಾವಾಹಿಯು ಕನ್ನಡಕ್ಕೆ ಡಬ್ ಆಗುತ್ತಿದ್ದು, ಸದ್ಯದಲ್ಲೇ ಪ್ರಸಾರ ಪ್ರಾರಂಭವಾಗುತ್ತದೆ.

ಮಹಾಭಾರತ, ರಾಧಾಕೃಷ್ಣ, ಸಿಐಡಿ, ದೃಷ್ಟಿ ಮುಂತಾದ ಹಿಂದಿ ಸೀರಿಯಲ್‍ಗಳ ಸಂಭಾಷಣೆಯನ್ನು ಯಥಾವತ್ತಾಗಿ ಕನ್ನಡಕ್ಕೆ ಅನುವಾದಿಸುವುದು ದೊಡ್ಡ ಸವಾಲು. ಹಿಂದಿ ಶಬ್ದಗಳಿಗೆ ಕರಾರುವಕ್ಕಾಗಿ ಹೊಂದುವಂತಹ ಕನ್ನಡದ ಪದಗಳನ್ನು ಅಳವಡಿಸಬೇಕು.

ಈ ಕೆಲಸವನ್ನು ಬಲ್ಲವರು ಈಗ ಫುಲ್ ಬ್ಯುಸಿಯಾಗಿದ್ದಾರೆ ಎಂದು ಕೃಷ್ ಹೇಳುತ್ತಾರೆ. ಇದರ ಜತೆಗೆ ಡಬ್ಬಿಂಗ್ ಕಲಾವಿದರಿಗೂ ಕೂಡ ಉದ್ಯೋಗಾವಕಾಶ ಸಿಕ್ಕಿದೆ. ಸಾಧಾರಣ ಬಜೆಟ್ ಸೀರಿಯಲ್‍ನ ಒಂದು ಕಂತಿಗೆ ಕಂಠದಾನ ಮಾಡಿದವರಿಗೆ 300ರಿಂದ 500 ರೂ. ಹಾಗೂ ಅದ್ಧೂರಿ ಧಾರಾವಾಹಿಗೆ ಡಬ್ ಮಾಡುವವರಿಗೆ ಪ್ರತಿ ಕಂತಿಗೆ 1000ದಿಂದ 1500 ರೂ. ಸಂಭಾವನೆ ದೊರೆಯುತ್ತದೆ. ಕೆಲವರು ದಿನವೊಂದಕ್ಕೆ 8.10 ಕಂತುಗಳಿಗೆ ದನಿ ನೀಡುತ್ತಾರೆ.

ಸಿನಿಮಾ ಬೆಳವಣಿಗೆ
ಧಾರಾವಾಹಿಗೆ ಹೋಲಿಸಿದರೆ ಕನ್ನಡಕ್ಕೆ ಡಬ್ ಆಗುತ್ತಿರುವ ಕನ್ನಡೇತರ ಸಿನಿಮಾಗಳ ಸಂಖ್ಯೆ ಕಡಿಮೆ. ಚಿತ್ರ ಪ್ರದರ್ಶನ ಪ್ರಾರಂಭವಾದ ನಂತರ ವಾತಾವರಣ ಬದಲಾಗಬಹುದು.

ಅರ್ಧಕ್ಕೆ ನಿಂತ ಸಿನಿಮಾಗಳ ಚಿತ್ರೀಕರಣ ಮುಂದುವರಿಸಲು ಸರ್ಕಾರವು ಅನುಮತಿ ನೀಡಿ ಹಲವು ದಿನಗಳೇ ಆದರೂ ಕೂಡ ಸ್ಟಾರ್‍ಗಳು ತಟಸ್ಥರಾಗಿದ್ದಾರೆ. ಮನೆಯೊಳಗೇ ಚಿತ್ರೀಕರಣ ಮಾಡಬೇಕು.

ಸೆಟ್‍ನಲ್ಲಿ 20ಕ್ಕಿಂತ ಕಡಿಮೆ ಕಲಾವಿದರಿರಬೇಕು ಎಂಬ ನಿಯಮವು ಚಿತ್ರರಂಗಕ್ಕೆ ಹೊಂದುವುದಿಲ್ಲ. ಏಕೆಂದರೆ ಶ್ರೀಮಂತ ಚಿತ್ರವೊಂದರ ಸೆಟ್‍ನಲ್ಲಿ ಕಡಿಮೆ ಆದರೂ 100ರಿಂದ 120 ಜನ ಇರಲೇಬೇಕು. ಸಾಮಾಜಿಕ ಅಂತರ ಕಾಪಾಡಿಕೊಳ್ಳುವುದೂ ಕಷ್ಟ.

ಕೆಲವು ಸ್ಟಾರ್‍ಗಳು ಕರ್ನಾಟಕಕ್ಕಿಂತ ಹೈದರಾಬಾದ್‍ನಲ್ಲಿ ಶೂಟಿಂಗ್ ಮಾಡುವುದು ಸೂಕ್ತ ಅನ್ನುತ್ತಿದ್ದಾರೆ. ಅಲ್ಲಿ ಉತ್ತಮವಾದ ಮೂಲ ಸೌಕರ್ಯಗಳಿವೆ ಎಂದು ಅವರ ಅಭಿಪ್ರಾಯ. ಅಲ್ಲಾದರೆ ಸಾರ್ವಜನಿಕರು ಸೆಟ್‍ಗೆ ನುಗ್ಗುವುದಿಲ್ಲ.

ನಿರ್ದೇಶಕ ಪ್ರಶಾಂತ್ ನೀಲ್ ಹೇಳುವಂತೆ ಕೆಜಿಎಫ್-ಚಾಪ್ಟರ್ 2 ಚಿತ್ರದ ಶೂಟಿಂಗ್ ಸದ್ಯದಲ್ಲೇ ಮುಂದುವರೆಯಲಿದೆ. ನಾಯಕ ಯಶ್ ಅವರೂ ಸಿದ್ಧವಾಗುತ್ತಿದ್ದಾರೆ. ಈ ಹಂತದ ಚಿತ್ರೀಕರಣದಲ್ಲಿ ಸಂಜಯ್‍ದತ್ ಭಾಗವಹಿಸಬೇಕಾಗಿದೆ. ಚಿತ್ರ ತಂಡದ ಸದಸ್ಯರ ಆರೋಗ್ಯ ತಪಾಸಣೆ ಕಾರ್ಯ ಪ್ರಾರಂಭವಾಗಿದೆ.

ಆರ್.ಚಂದ್ರು ನಿರ್ದೇಶನದ ಕಬ್ಜ ಎಂಬ ಬಹು ಭಾಷಾ ಚಿತ್ರವೂ ಶೂಟಿಂಗ್ ಮುಂದುವರಿಸಲು ಅಣಿಯಾಗುತ್ತಿದೆ. ಈ ಚಿತ್ರದ ಶೂಟಿಂಗ್‍ನಲ್ಲಿ ಪ್ರತಿ ದಿನ ನೂರಾರು ಜನ ಇರಲೇಬೇಕು. ಉಪೇಂದ್ರ ಈ ಚಿತ್ರದ ನಾಯಕ.

ಶ್ರೀಮುರಳಿ ಅಭಿನಯದ ಮದಗಜ ಎಂಬ ಚಿತ್ರದ ಚಿತ್ರೀಕರಣವನ್ನು ಮೈಸೂರಿನಲ್ಲಿ ಮುಂದುವರಿಸಲು ನಿರ್ಮಾಪಕ ಪುಷ್ಕರ್ ಮಲ್ಲಿಕಾರ್ಜುನಯ್ಯ ಅಣಿಯಾಗುತ್ತಿದ್ದಾರೆ. ಸುದೀಪ್ ನಾಯಕರಾಗಿರುವ ಫ್ಯಾಂಟಮ್ ಎಂಬ ಚಿತ್ರಕ್ಕೆ ಹೈದರಾಬಾದ್‍ನಲ್ಲಿ ಶೂಟಿಂಗ್ ಮುಂದುವರಿಯಬಹುದು.

ಪುನೀತ್ ಅವರ ಯುವರತ್ನ,, ಶಿವರಾಜ್‍ಕುಮಾರ್ ಅವರ ಭಜರಂಗಿ-2 ಮುಂತಾದ ಕೆಲ ಸಿನಿಮಾಗಳ ಅಲ್ಪಸ್ವಲ್ಪ ಕೆಲಸ ಉಳಿದಿದೆ.

ಕನ್ನಡದ ನಟಿ ರಚಿರಾಮ್ ಅವರು ತೆಲುಗು ಚಿತ್ರವೊಂದರಲ್ಲಿ ನಟಿಸುತ್ತಿದ್ದು, ಹೈದರಾಬಾದ್‍ನಲ್ಲಿ ನಡೆಯುತ್ತಿರುವ ಚಿತ್ರೀಕರಣದಲ್ಲಿ ಭಾಗಿಯಾಗಿದ್ದಾರೆ. ನಾವು ಪ್ರತಿ ದಿನ ದೇಹದ ಉಷ್ಣತೆಯ ಪರೀಕ್ಷೆ ಮಾಡಿಸಿಕೊಳ್ಳುತ್ತೇವೆ.ಸೆಟ್‍ನಲ್ಲಿ ಮೂವರು ಕಲಾವಿದರು ಹಾಗೂ ಇಪ್ಪತ್ತು ಮಂದಿ ತಂತ್ರಜ್ಞರಷ್ಟೇ ಇದ್ದಾರೆ. ಆರೋಗ್ಯದ ವಿಷಯದಲ್ಲಿ ಸಕಲ ವಿಧವಾದ ಮುಂಜಾಗ್ರತೆ ತೆಗೆದುಕೊಂಡಿದ್ದೇವೆ ಎಂದು ರಚಿತಾ ಹೇಳುತ್ತಾರೆ.

ಮತ್ತೊಬ್ಬ ಕನ್ನಡತಿ ಶ್ರದ್ಧಾ ಶ್ರೀನಾಥ್ ಅವರು ಕೃಷ್ಣ ಅಂಡ್ ಹಿಸ್ ಲೀಲಾ ಎಂಬ ತೆಲುಗು ಚಿತ್ರದಲ್ಲಿ ನಟಿಸಿದ್ದು , ಅದು ಥಿಯೇಟರ್‍ಗೆ ಬರುವ ಮೊದಲೇ ಒಟಿಟಿಯಲ್ಲಿ ಪ್ರಸಾರವಾಗುತ್ತದೆ. ಎಲ್ಲಾ ಅಂದುಕೊಂಡಂತೆ ಆಗಿದ್ದರೆ, ಈ ಸಿನಿಮಾ ಮೇ ತಿಂಗಳಲ್ಲೇ ದಿನಾಂಕದ ಘೋಷಣೆಯಾಗಬೇಕಿತ್ತು ಎಂದು ಶ್ರದ್ಧಾ ತಿಳಿಸಿದರು.

ಒಟ್ಟಿನಲ್ಲಿ ಕೊರೊನಾ ಲಾಕ್‍ಡೌನ್‍ನಿಂದಾಗಿ ಕನ್ನಡ ಸಿನೆಮಾ ಹಾಗೂ ಸೀರಿಯಲ್ ಕ್ಷೇತ್ರದಲ್ಲಿ ಹತ್ತು ಹಲವು ಬದಲಾವಣೆಗಳಾಗುತ್ತಿರುವುದಂತೂ ಸರ್ವವಿಧಿತ. ಕೊರೊನಾ ಲಾಕ್‍ಡೌನ್ ಹಿನ್ನೆಲೆಯಲ್ಲಿ ಇತರ ಎಲ್ಲಾ ಕ್ಷೇತ್ರಗಳ ಹಾಗೆ ಸಿನೆಮಾ ಹಾಗೂ ಸೀರಿಯಲ್ ವಲಯದಲ್ಲೂ ಹಲವು ಬದಲಾವಣೆಗಳಾಗಿವೆ. ಈ ಬದಲಾವಣೆಗಳು ಮುಂಬರುವ ಸಿನೆಮಾಗಳಲ್ಲಿ ಸ್ಪಷ್ಟವಾಗಿ ಗೋಚರಿಸುತ್ತದೆ. ಜತೆಗೆ ಡಬ್ಬಿಂಗ್ ಸೀರಿಯಲ್‍ಗಳು ಸದ್ದಿಲ್ಲದೆ ಮಾರಿಕೊಂಡು ಜನರಂಜನೆ ಮಾಡುತ್ತಿವೆ. ಹತ್ತಾರು ಪರಭಾಷಾ ಚಿತ್ರಗಳು ಡಬ್ ಆಗುತ್ತಿವೆ. ಈಗಾಗಲೇ ಆರ್ಥಿಕವಾಗಿ ತತ್ತರಿಸಿರುವ ಕನ್ನಡ ಸಿನೆಮಾ ಹಾಗೂ ಕಿರುತೆರೆ ವಲಯವು ಈ ಹೊಡೆತವನ್ನು ತಡೆದುಕೊಳ್ಳಲು ಸಜ್ಜಾಗಬೇಕಾಗಿದೆ.error: Content is protected !!
Scroll to Top